ಶ್ರೀರಂಗಪಟ್ಟಣ: ತಾಲ್ಲೂಕಿನ ಚಂದಗಿರಿಕೊಪ್ಪಲು – ಸಬ್ಬನಕುಪ್ಪೆ ಗ್ರಾಮಗಳ ನಡುವೆ, ಲೋಕಪಾವನಿ ನದಿಗೆ ನಿರ್ಮಿಸಿರುವ ಸೇತುವೆಯ ತೂಬುಗಳಿಗೆ ರಾಶಿಗಟ್ಟಲೆ ತ್ಯಾಜ್ಯ ಸಿಕ್ಕಿಕೊಂಡಿದ್ದು ಸೇತುವೆ ಅಸ್ತಿತ್ವಕ್ಕೆ ಅಪಾಯ ಬಂದೊದಗಿದೆ.
ಈ ನದಿ ಸೇತುವೆಯ ಕೆಳಗೆ ನೀರು ಹರಿದು ಹೋಗಲು ಹತ್ತು ತೂಬುಗಳನ್ನು ಅಳವಡಿಸಲಾಗಿದೆ. ಈ ಪೈಕಿ ಎಂಟು ತೂಬುಗಳಿಗೆ ತ್ಯಾಜ್ಯ ಸಿಕ್ಕಿಕೊಂಡಿದ್ದು ಭಾಗಶಃ ಮುಚ್ಚಿ ಹೋದಂತೆ ಕಾಣುತ್ತಿವೆ. ಒಣಗಿದ ಮರದ ತುಂಡುಗಳು, ಹುಲ್ಲು, ಪ್ಲಾಸ್ಟಿಕ್ ಇತರ ತ್ಯಾಜ್ಯವು ತೂಬುಗಳಿಗೆ ಸಿಕ್ಕಿಕೊಂಡಿದೆ. ಟನ್‌ಗಟ್ಟಲೆ ತ್ಯಾಜ್ಯ ಸಿಕ್ಕಿಕೊಂಡಿದ್ದು, ನದಿಯಲ್ಲಿ ಪ್ರವಾಹ ಬಂದರೆ ಸೇತುವೆಯ ಮೇಲೆ ನೀರು ಹರಿಯಲಿದೆ. ಅಂತಹ ಸಂದರ್ಭದಲ್ಲಿ ಸೇತುವೆಗೆ ಅಪಾಯ ಬಂದೊದಗಲಿದೆ ಎಂದು ಅಕ್ಕಪಕ್ಕದ ಗ್ರಾಮಗಳ
ಜನರು ಆತಂಕ ವ್ಯಕ್ತಪಡಿಸುತ್ತಾರೆ.
ನಾಗಮಂಗಲ ತಾಲ್ಲೂಕಿನಲ್ಲಿ ಹುಟ್ಟುವ ಲೋಕಪಾವನಿ ನದಿ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಸರಹದ್ದಿನಲ್ಲಿ ಹರಿದು ಕರಿಘಟ್ಟದ ಬಳಿ ಕಾವೇರಿ ನದಿಯನ್ನು ಸೇರುತ್ತದೆ. ಈ ಬಾರಿ ಮುಂಗಾರು ಮಳೆ ಜೋರಾಗಿ ಸುರಿದ ಪರಿಣಾಮ ನದಿಯಲ್ಲಿ ಸಾಧಾರಣ ಪ್ರಮಾಣದ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.
ಆ ಸಂದರ್ಭದಲ್ಲಿ ಮೇಲ್ಭಾಗದಿಂದ ಅಪಾರ ಪ್ರಮಾಣದ ತ್ಯಾಜ್ಯ ಕೊಚ್ಚಿಕೊಂಡು ಬಂದು ಈ ಸೇತುವೆಗೆ ಸಿಕ್ಕಿಕೊಂಡಿದೆ. ವಾರದ ಹಿಂದೆ ಸತತವಾಗಿ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಸೇತುವೆಯ ಹಿಂದೆ, ನದಿ ಪಕ್ಕದ ಕೃಷಿ ಜಮೀನುಗಳು ಜಲಾವೃತವಾಗಿದ್ದವು. ಸೇತುವೆಯ ತೂಬುಗಳಿಗೆ ತ್ಯಾಜ್ಯ ಸಿಕ್ಕಿಕೊಂಡಿರುವ ಕಾರಣ ನೀರು ಸಲೀಸಾಗಿ ಹರಿದು ಹೋಗದೆ ರೈತರು ಪಡಿಪಾಟಲು ಅನುಭವಿಸಿದ್ದರು.
‘ಲೋಕಪಾವನಿ ನದಿ ಸೇತುವೆ ತೂಬುಗಳಿಗೆ ಈ ಪಾಟಿ ತ್ಯಾಜ್ಯ ಸಿಕ್ಕಿಕೊಂಡಿರುವುದರಿಂದ ಸೇತುವೆ ಹಿಂದೆ ಜಮೀನು ಹೊಂದಿರುವ ರೈತರಿಗೆ ತೊಂದರೆಯಾಗುತ್ತಿದೆ. ನದಿಯಲ್ಲಿ ದೊಡ್ಡ ಪ್ರವಾಹ ಉಂಟಾದರೆ ಸೇತುವೆಗೂ ಅಪಾಯ ಉಂಟಾಗಲಿದೆ. ನೀರಾವರಿ ಇಲಾಖೆ ಅಧಿಕಾರಿಗಳಿಗೆ ವಿಷಯ ಗೊತ್ತಿದ್ದರೂ ತ್ಯಾಜ್ಯವನ್ನು ತೆಗೆಯುವ ಕೆಲಸಕ್ಕೆ ಮುಂದಾಗಿಲ್ಲ’ ಎಂದು ಚಂದಗಿರಿಕೊಪ್ಪಲು ಗ್ರಾಮದ ರೈತ ಜ್ಞಾನೇಶ್, ಸಬ್ಬನಕುಪ್ಪೆ ಗ್ರಾಮದ ಮಂಜುನಾಥ್, ಬೋರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಲೋಕಪಾವನಿ ನದಿ ಸೇತುವೆಯ ನಿರ್ವಹಣೆ ಕಾರ್ಯ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ನದಿಯ ಅಕ್ವಡಕ್ಟ್ ಮಾತ್ರ ನೀರಾವರಿ ನಿಗಮಕ್ಕೆ ಸೇರುತ್ತದೆ. ಹಾಗಾಗಿ ಸೇತುವೆಯ ತೂಬುಗಳಿಗೆ ಸಿಕ್ಕಿಕೊಂಡಿರುವ ತ್ಯಾಜ್ಯವನ್ನು ತೆಗೆಸುವ ಕೆಲಸವನ್ನು ಆ ಇಲಾಖೆಯೇ ಮಾಡಬೇಕು’ ಎಂದು ಕಾವೇರಿ ನೀರಾವರಿ ನಿಗಮದ ಎಇಇ ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.