ಮೇಲುಕೋಟೆ: ಸೇವಂತಿಗೆ ಹೂವಿನ ಬೆಲೆ ಕುಸಿತದಿಂದ ಕಂಗಾಲಾದ ಹೋಬಳಿಯ ಸುಂಕಾತೊಣ್ಣೂರು ರೈತ ಎಸ್.ಡಿ. ಯೋಗರಾಜು ಅವರು ಕಂಚನಹಳ್ಳಿ ಬಳಿ 2 ಎಕರೆಯಲ್ಲಿ ಬೆಳೆದಿದ್ದ ಸೇವಂತಿಗೆ ಬೆಳೆಯನ್ನು ಬುಧವಾರ ರೋಟವೇಟರ್ ಬಳಸಿ ನಾಶಪಡಿಸಿದರು.
‘ಕರ್ಣಾಟಕ ಬ್ಯಾಂಕ್‌ನಲ್ಲಿ ₹2 ಲಕ್ಷ ಸಾಲ ಹಾಗೂ ಕೈಸಾಲ ಸೇರಿ ₹3.60 ಲಕ್ಷ ಖರ್ಚು ಮಾಡಿದ್ದೆ. ಗೌರಿ– ಗಣೇಶ ಹಬ್ಬದಲ್ಲಿ ಉತ್ತಮ ಲಾಭ ಸಿಗಬಹುದೆಂದು ನಿರೀಕ್ಷೆ ಇತ್ತು. ಆದರೆ, ಕೆ.ಜಿ. ಹೂವು ₹10ನಂತೆ ಮಾರಾಟವಾಗುತ್ತಿದೆ. ಬಂಡವಾಳವೂ ಕೈಸೇರುವ ಸಾಧ್ಯತೆ ಇಲ್ಲ. ಹೀಗಾಗಿ, ಬೆಳೆಯನ್ನು ನಾಶಪಡಿಸಿದ್ದೇನೆ. ರಾಜ್ಯ ಸರ್ಕಾರ ನಮ್ಮ ನೆರವಿಗೆ ಬರಬೇಕು’ ಎಂದು ಯೋಗರಾಜು ಕೋರಿದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ನಿರ್ದೇಶಕಿ ಸೌಮ್ಯಾ ಎಸ್.ಪಿ, ‘ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆ ನಾಶವಾದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ಬೆಲೆ ಕುಸಿತದಿಂದ ಉಂಟಾಗುವ ನಷ್ಟಕ್ಕೆ ಪರಿಹಾರ ಸಿಗುವುದಿಲ್ಲ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಈ ಬಾರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಸೇವಂತಿಗೆ ಬೆಳೆದಿರುವುದರಿಂದ ಬೆಲೆ ಕುಸಿತ ಉಂಟಾಗಿದೆ. ದಸರಾ, ದೀಪಾವಳಿ ಹಬ್ಬಕ್ಕೆ ಉತ್ತಮ ಬೆಲೆ ಸಿಗಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.