ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಉಗ್ರನರಸಿಂಹಸ್ವಾಮಿ ದೇವರ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಮೇ 10ರಂದು ನಡೆಯಬೇಕಿದ್ದ ರಥೋತ್ಸವವನ್ನು ವಿಧಾನಸಭಾ ಚುನಾವಣೆ ಸಂಬಂಧ ಮೇ 11ಕ್ಕೆ ಮುಂದೂಡಲಾಗಿತ್ತು. ಆದರೂ ಮೇ 10ರಂದು ದೇವಸ್ಥಾನದ ಆವರಣದಲ್ಲಿ ದೇವರ ಉತ್ಸವ ಮೂರ್ತಿಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.
ದೇವರ ರಥೋತ್ಸವದ ಅಂಗವಾಗಿ ಬೆಳಿಗ್ಗೆ ದೇವರ ಮೂರ್ತಿಗೆ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಮಧ್ಯಾಹ್ನ 12ಕ್ಕೆ ದೇವಸ್ಥಾನದ ಬಲಭಾಗದ ಆವರಣದಲ್ಲಿ ಸಜ್ಜಾಗಿದ್ದ ಅಲಂಕೃತ ತೇರಿನಲ್ಲಿ ದೇವರ ಉತ್ಸವ ಮೂರ್ತಿಯನ್ನು ಇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ಕೋಟೆ ಬೀದಿಯಲ್ಲಿ ರಥೋತ್ಸವ ಸಾಗಿತು. ಪ್ರತಿ ಮನೆಯ ಬಳಿ ದೇವರಿಗೆ ಆರತಿ ಮಾಡಿ ನಿವಾಸಿಗಳು ಪೂಜೆ ಸಲ್ಲಿಸಿದರು. ಭಕ್ತರಿಗೆ ಮಜ್ಜಿಗೆ -ಪಾನಕ ವಿತರಿಸಲಾಯಿತು. ಹರಕೆ ಹೊತ್ತ ಭಕ್ತರು ಹಣ್ಣು ಜವನವನ್ನು ರಥಕ್ಕೆ ಎಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.