ADVERTISEMENT

ಪಾಂಡವಪುರ: ಸಮುದಾಯ ಭವನದಲ್ಲೇ ವಸತಿ ಶಾಲೆ!

ಮೂಲಸೌಕರ್ಯದಿಂದ ವಂಚಿತರಾದ 250 ವಿದ್ಯಾರ್ಥಿನಿಯರು

ಹಾರೋಹಳ್ಳಿ ಪ್ರಕಾಶ್‌
Published 5 ಜುಲೈ 2024, 6:38 IST
Last Updated 5 ಜುಲೈ 2024, 6:38 IST
ಪಾಂಡವಪುರ ತಾಲ್ಲೂಕಿನ ಮಹದೇಶ್ವರಪುರ ಗ್ರಾಮದ ಬಳಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳ ವಸತಿ ಶಾಲೆಯು ಕಳೆದ 8 ವರ್ಷಗಳಿಂದ ಸಮುದಾಯ ಭವನದಲ್ಲೇ ನಡೆಯುತ್ತಿದೆ 
ಪಾಂಡವಪುರ ತಾಲ್ಲೂಕಿನ ಮಹದೇಶ್ವರಪುರ ಗ್ರಾಮದ ಬಳಿ ಇರುವ ಡಾ.ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳ ವಸತಿ ಶಾಲೆಯು ಕಳೆದ 8 ವರ್ಷಗಳಿಂದ ಸಮುದಾಯ ಭವನದಲ್ಲೇ ನಡೆಯುತ್ತಿದೆ    

ಪಾಂಡವಪುರ: ಖಾಸಗಿ ದೇವಾಲಯ ಸಮಿತಿಗೆ ಸೇರಿದ ಸಮುದಾಯ ಭವನವೇ ಹೆಣ್ಣುಮಕ್ಕಳ ವಸತಿ ಶಾಲೆಯಾಗಿ ಮಾರ್ಪಟ್ಟಿದ್ದು, ಮೂಲ ಸೌಕರ್ಯಗಳಿಂದ ವಂಚಿತರಾದ ವಿದ್ಯಾರ್ಥಿನಿಯರ ಅಳಲು ಅಧಿಕಾರಿಗಳಿಗೆ ಕೇಳದಂತಾಗಿದೆ. 

ಹೌದು, ತಾಲ್ಲೂಕಿನ ಮಹದೇಶ್ವರಪುರ ಗ್ರಾಮದ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಹೆಣ್ಣುಮಕ್ಕಳ ವಸತಿ ಶಾಲೆಯು ಕಳೆದ 8 ವರ್ಷಗಳಿಂದ ಮಹದೇಶ್ವರ ಸೇವಾ ಸಮಿತಿಗೆ ಸೇರಿದ ಸಮುದಾಯ ಭವನದ ಫಂಕ್ಷನ್ ಹಾಲ್ ಮತ್ತು ಊಟದ ಹಾಲ್‌ನಲ್ಲಿಯೇ ನಡೆಯುತ್ತಿದೆ.

ಪಾಠ, ಊಟ, ವಸತಿಗೆ ಪ್ರತ್ಯೇಕ ಕೊಠಡಿಗಳಿಲ್ಲದೆ, ಹಾಲ್‌ನಲ್ಲಿಯೇ ಎಲ್ಲ ಚಟುವಟಿಕೆಗಳು ನಡೆಯಬೇಕಿದೆ. ಪ್ರತ್ಯೇಕ ಕೊಠಡಿ ಇಲ್ಲದ ಕಾರಣ ಪರದೆ ಕಟ್ಟಿಕೊಂಡು ಬಟ್ಟೆಬರೆ ಬದಲಾಯಿಸಿಕೊಳ್ಳುವ ಪರಿಸ್ಥಿತಿ ಹೆಣ್ಣುಮಕ್ಕಳಿಗೆ ಕಿರಿಕಿರಿ ತಂದೊಡ್ಡಿದೆ. ಜೊತೆಗೆ ಗಾಳಿ ಬೆಳಕಿಲ್ಲದೆ ಉಸಿರುಗಟ್ಟುವ ವಾತಾವರಣದಲ್ಲಿಯೇ ಮಕ್ಕಳು ದಿನದೂಡುವಂತಾಗಿದೆ.

ADVERTISEMENT

ಕಾವಲುಗಾರನಿಲ್ಲ: 2017ರಲ್ಲಿ 50 ಮಂದಿ ಹೆಣ್ಣುಮಕ್ಕಳಿಂದ ಈ ವಸತಿ ಶಾಲೆ ಪ್ರಾರಂಭಗೊಂಡಿತು. 6ನೇ ತರಗತಿಯಿಂದ 10ನೇ ತರಗತಿಯವರೆಗೆ ನಡೆಯುತ್ತಿರುವ ಈ ವಸತಿ ಶಾಲೆಯಲ್ಲಿ ಒಟ್ಟು 250 ಹೆಣ್ಣುಮಕ್ಕಳಿಗೆ ಕೇವಲ 9 ಶೌಚಾಲಯ, 7 ಸ್ನಾನದ ಕೊಠಡಿಗಳಿವೆ. ವಸತಿ ಶಾಲೆಯ ಸುತ್ತಲೂ (ಸಮುದಾಯ ಭವನ) ಕಾಂಪೌಂಡ್ ಇಲ್ಲದ ಕಾರಣ ಹಾವುಗಳ ಕಾಟ ಹೆಚ್ಚಳವಾಗಿದೆ. ದುರಂತವೆಂದರೆ ಹೆಣ್ಣುಮಕ್ಕಳ ವಸತಿ ಶಾಲೆಗೆ ಕಾವಲುಗಾರನೇ ಇಲ್ಲ.

ಬಾಡಿಗೆ ಕರಾರು ಮಾಡಿಕೊಂಡಾಗ, ಸೇವಾ ಸಮಿತಿಯವರು ವಸತಿ ಶಾಲೆಗೆ ಮೂಲಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಒಪ್ಪಿಕೊಂಡಿದ್ದರು. ಅದರಂತೆ ಒಂದಿಷ್ಟು ಸೌಲಭ್ಯಗಳನ್ನು ಒದಗಿಸಿ ಕೈತೊಳೆದುಕೊಂಡಿದ್ದಾರೆ. ಈ ಸಮುದಾಯ ಭವನಕ್ಕೆ ಸರ್ಕಾರದ ಕೆ.ಆರ್‌.ಡಿ.ಎಲ್‌ ವತಿಯಿಂದ ₹5 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದೆ.

ವರದಿ ನೀಡಿದ್ದ ಕ್ರೈಸ್‌ ಸಲಹೆಗಾರ: ಬೆಂಗಳೂರಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ಕ್ರೈಸ್‌) ಸಲಹೆಗಾರ ಎಸ್. ತುಕರಾಮ್ ಅವರು, ‘ಪಾಂಡವಪುರ ತಾಲ್ಲೂಕಿನ ಮಹದೇಶ್ವಪುರ ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ಸೇರಿದಂತೆ ಕೆಲವು ವಸತಿ ಶಾಲೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಮಕ್ಕಳ ಕಲಿಕಾ ವಾತಾವರಣಕ್ಕೆ ತೊಂದರೆಯಾಗಿದೆ. ಆದ್ದರಿಂದ ತುರ್ತಾಗಿ ಸೂಕ್ತ ಸ್ಥಳಗಳಿಗೆ ಬದಲಾಯಿಸುವಂತೆ, ಅಗತ್ಯ ಸೌಲಭ್ಯ ಒದಗಿಸಬೇಕು’ ಎಂದು ವರದಿ ನೀಡಿದ್ದರು. 

ಇದರ ಆಧಾರದ ಮೇಲೆ ಮಂಡ್ಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ವಿದ್ಯಾರ್ಥಿನಿಯರ ವಾಸ ಮತ್ತು ಕಲಿಕೆಗೆ ಯೋಗ್ಯವಾದಂತಹ ಉತ್ತಮ ಬಾಡಿಗೆ ಕಟ್ಟಡವನ್ನು ಗುರುತಿಸಿ ವಸತಿ ಶಾಲೆಗಳನ್ನು ಕೂಡಲೇ ಸ್ಥಳಾಂತರಿಸಬೇಕೆಂದು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. 

‘ಬಾಡಿಗೆಗಾಗಿ ಪ್ರಭಾವಿಗಳಿಂದ ಒತ್ತಡ’

‘ವಸತಿ ಶಾಲೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಹೊಸ ಕಟ್ಟಡವನ್ನು ನೋಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ವಸತಿ ಶಾಲೆಯ ಸ್ಥಳಾಂತರಕ್ಕೆ ಅನುಮತಿ ನೀಡಿದ್ದಾರೆ. ಆದರೆ ಮಹದೇಶ್ವರ ಸೇವಾ ಸಮಿತಿಯವರು ಪ್ರಭಾವಿ ವ್ಯಕ್ತಿಗಳ ಮೂಲಕ ಒತ್ತಡ ತಂದು ಸ್ಥಳಾಂತರಗೊಳ್ಳದಂತೆ ನೋಡಿಕೊಂಡಿದ್ದಾರೆ. ಏಕೆಂದರೆ ಪ್ರತಿ ತಿಂಗಳು ಬರುತ್ತಿರುವ ₹55 ಸಾವಿರ ಬಾಡಿಗೆ ನಿಂತು ಹೋಗುತ್ತದೆ’ ಎಂಬುದು ಪೋಷಕರ ಆರೋಪ.

‘ಹೊಸಕಟ್ಟಡಕ್ಕೆ ಮಂಜೂರಾಗದ ಅನುದಾನ’

ಡಾ.ಬಿ.ಆರ್.ಅಂಬೇಡ್ಕರ್ ಹೆಣ್ಣಮಕ್ಕಳ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ 19 ಜುಲೈ 2019ರಲ್ಲಿಯೇ ಮಹದೇಶ್ವರಪುರ ಗ್ರಾಮದ ಬಳಿಯೇ ಸರ್ಕಾರ ಐದು ಎಕರೆ ಜಾಗ ಮಂಜೂರು ಮಾಡಿದೆ. ಆದರೆ ಜಾಗ ಮಂಜೂರಾಗಿ ಐದು ವರ್ಷ ಕಳೆದರೂ ಹೊಸಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ಹಣ ಮಂಜೂರು ಮಾಡಿಲ್ಲ. ಹೊಸ ಕಟ್ಟಡ ನಿರ್ಮಾಣ ಕೂಡ ನೆನೆಗುದಿಗೆ ಬಿದ್ದಿರುವುದಕ್ಕೆ ಕೆಲವು ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.