ಮಳವಳ್ಳಿ: ಲೋಕಸಭೆ ಚುನಾವಣೆ ನಡೆದು ಫಲಿತಾಂಶ ಬರುವ ಮುನ್ನವೇ ಪುರಸಭಾ ಚುನಾವಣೆ ಘೋಷಣೆಯಾಗಿದೆ. ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ, ಕಾಂಗ್ರೆಸ್ ಮುಖಂಡ ಪಿ.ಎಂ.ನರೇಂದ್ರಸ್ವಾಮಿ ಅವರು ಮತ್ತೊಂದು ಹಣಾಹಣಿಗೆ ಸಜ್ಜಾಗುತ್ತಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ಕಳೆದ ಅವಧಿಯಲ್ಲಿ ಜೆಡಿಎಸ್ 11, ಕಾಂಗ್ರೆಸ್ 7, ಪಕ್ಷೇತರ 4 ಹಾಗೂ ಬಿಜೆಪಿ 1 ಸ್ಥಾನದಲ್ಲಿ ಜಯ ಗಳಿಸಿದ್ದರು. ಐದು ವರ್ಷಗಳವರೆಗೆ ಪಕ್ಷೇತರ ಸದಸ್ಯರದ್ದೇ ಮೇಲುಗೈಯಾಗಿತ್ತು. ಮೊದಲಿಗೆ ಪರಿಶಿಷ್ಟ ಜಾತಿ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲು ನಿಗದಿಯಾಗಿದ್ದು, ಪಕ್ಷೇತರ ಸದಸ್ಯೆ ಸರೋಜಮ್ಮ ಅವರನ್ನು ಶಾಸಕರಾಗಿದ್ದ ನರೇಂದ್ರಸ್ವಾಮಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಡಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಕಾಂಗ್ರೆಸ್‌ನ 7 ಸದಸ್ಯರಲ್ಲಿ ಇಬ್ಬರು ಗೈರು ಹಾಜರಾಗಿದ್ದರೂ, ಪಕ್ಷದ ಐವರು ಸದಸ್ಯರು, ಪಕ್ಷೇತರ ನಾಲ್ವರು, ಬಿಜೆಪಿ ಒಬ್ಬರು, ಶಾಸಕರ ಮತ, ಸಂಸದೆಯಾಗಿದ್ದ ರಮ್ಯಾ ಅವರ ಮತ ಸೇರಿಸಿ 12 ಮತಗಳನ್ನು ಪಡೆದು ಸರೋಜಮ್ಮ ಅಧ್ಯಕ್ಷೆಯಾಗಿದ್ದರು. ಪಕ್ಷೇತರ ಸದಸ್ಯರೊಬ್ಬರು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ಗೆ ಬೆಂಬಲಿಸಿ ಆ ಪಕ್ಷದ ಮಣಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.
ಎರಡು ವರ್ಷಗಳ ನಂತರ ಸರೋಜಮ್ಮ ಅವರನ್ನು ಅವಿಶ್ವಾಸದಿಂದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಯಿತು. ನಂತರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಸಾವಿತ್ರಿ ಅವರು ಅಧ್ಯಕ್ಷೆಯಾಗಿ ಆಯ್ಕೆಯಾದರು. ಅವರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಸಿ.ಎಸ್. ಪುಟ್ಟರಾಜು, ಜೆಡಿಎಸ್‌ನ 11 ಸದಸ್ಯರು ಸೇರಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡರು. ಈ ಇಬ್ಬರ ಅವಧಿ ಎರಡೂವರೆ ವರ್ಷ ಮುಗಿದ ನಂತರ ಅಧ್ಯಕ್ಷ ಸ್ಥಾನ ಬಿಸಿಎಂ (ಎ) ಮೀಸಲಾಗಿದ್ದು, ಜೆಡಿಎಸ್ ರಿಯಾಜಿನ್ ಅವರು ಕಾಂಗ್ರೆಸ್, ಬಿಜೆಪಿ, ಹಾಗೂ ಪಕ್ಷೇತರ ಸದಸ್ಯರ ಬೆಂಬಲದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿ ಅವಧಿ ಪೂರ್ಣಗೊಳಿಸಿದರು. ಬಿಜೆಪಿಯ ಸುಮಾ ನಾಗೇಶ್
ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಹೀಗೆ ಐದು ವರ್ಷ ಪಕ್ಷೇತರ ಸದಸ್ಯರು ಬೆಂಬಲಿಸಿದ ಕಡೆ ಅಧಿಕಾರ ದೊರೆಯಿತು. ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ರಿಯಾಜ್ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರ ಬೆಂಬಲ ಪಡೆದರೆ ಜೆಡಿಎಸ್‌ನಿಂದ ಮೆಹಬೂಬ್ ಪಾಷ ಸ್ಪರ್ಧಿಸಿ ಸೋಲು ಕಂಡರು.
ಈ ಮಧ್ಯೆ ಮೆಹಬೂಬ್ ಪಾಷಾ ಅವರು ರಿಯಾಜಿನ್ ವಿಪ್ ಉಲ್ಲಂಘಿಸಿದ್ದಾರೆಂದು ಆರೋಪಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ರಿಯಾಜಿನ್ ಅವರ ಸದಸ್ಯತ್ವ ಅನರ್ಹವಾಗುವಂತೆ ನೋಡಿಕೊಂಡರು. ರಿಯಾಜಿನ್ ಅವರು ಹೈಕೋರ್ಟ್‌ಮೊರೆ ಹೋಗಿದ್ದು ಇನ್ನೂ ಇತ್ಯರ್ಥವಾಗಿಲ್ಲ. ಆದರೆ, ಈಗ ಚುನಾವಣೆ ಬಂದಿದೆ.
ಮೀಸಲಾತಿ ನಿಗದಿ ಹೀಗಿದೆ
ವಾರ್ಡ್ 1– ಸಾಮಾನ್ಯ, 2– ಹಿಂದುಳಿದ ವರ್ಗ ಎ (ಮಹಿಳೆ), 3– ಪರಿಶಿಷ್ಟ ಪಂಗಡ, 4– ಪರಿಶಿಷ್ಟ ಜಾತಿ, 5– ಸಾಮಾನ್ಯ, 6– ಪರಿಶಿಷ್ಟ ಜಾತಿ, 7– ಹಿಂದುಳಿದ ವರ್ಗ ಎ, 8– ಸಾಮಾನ್ಯ (ಮಹಿಳೆ), 9– ಪರಿಶಿಷ್ಟ ಜಾತಿ (ಮಹಿಳೆ), 10– ಹಿಂದುಳಿದ ವರ್ಗ ಬಿ, 11– ಪರಿಶಿಷ್ಟ ಜಾತಿ, 12– ಹಿಂದುಳಿದ ವರ್ಗ ಎ (ಮಹಿಳೆ), 13– ಸಾಮಾನ್ಯ ಮಹಿಳೆ, 14 ಪರಿಶಿಷ್ಟ ಜಾತಿ (ಮಹಿಳೆ), 15– ಸಾಮಾನ್ಯ, 16– ಹಿಂದುಳಿದ ವರ್ಗ ಎ, 17–ಸಾಮಾನ್ಯ ಮಹಿಳೆ, 18– ಸಾಮಾನ್ಯ, 19– ಸಾಮಾನ್ಯ, 20– ಸಾಮಾನ್ಯ (ಮಹಿಳೆ), 21– ಸಾಮಾನ್ಯ (ಮಹಿಳೆ), 22– ಸಾಮಾನ್ಯ (ಮಹಿಳೆ), 23– ಸಾಮಾನ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.