ADVERTISEMENT

ಮಳವಳ್ಳಿ: ಮಹದೇಶ್ವರಸ್ವಾಮಿ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 14:13 IST
Last Updated 3 ನವೆಂಬರ್ 2024, 14:13 IST
ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಉತ್ಸವಮೂರ್ತಿಯ ಮೆರವಣಿಗೆ ಜರುಗಿತು
ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಉತ್ಸವಮೂರ್ತಿಯ ಮೆರವಣಿಗೆ ಜರುಗಿತು   

ಮಳವಳ್ಳಿ: ತಾಲ್ಲೂಕಿನ ದುಗ್ಗನಹಳ್ಳಿ ಗ್ರಾಮದ ಮಹದೇಶ್ವರಸ್ವಾಮಿಯ ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ  ಹುಲಿವಾಹನ ಉತ್ಸವ, ಅನ್ನಸಂತರ್ಪಣೆ ನಡೆಯಿತು. ಭಾನುವಾರ ರಥೋತ್ಸವಕ್ಕೆ ಭಕ್ತಸಾಗರವೇ ಹರಿದು ಬಂತು.

 ಐದು ದಿನ ಜಾತ್ರಾ ಮಹೋತ್ಸವದ ಅಂಗವಾಗಿ ದೇವರಿಗೆ ವಿವಿಧ  ಪೂಜೆಗಳು ನಡೆದವು.  ದೇಸ್ಥಾನ ಹಾಗೂ ಆವರಣದಲ್ಲಿ ಅಳವಡಿಸಿದ್ದ ವಿದ್ಯುತ್ ದೀಪಾಂಲಕಾರ ಗಮನ ಸೆಳೆಯಿತು. ಶುಕ್ರವಾರ ಮಧ್ಯರಾತ್ರಿ ದೇವಸ್ಥಾನದಿಂದ ಎರಡು ಕಿ.ಮೀ.ದೂರದ ಹಂಚೀಪುರದ ಹಾಲು ಹಳ್ಳದಿಂದ ದುಗ್ಗನಹಳ್ಳಿ, ಮುದ್ದೇಗೌಡನದೊಡ್ಡಿ, ಹಂಚೀಪುರ ವ್ಯಾಪ್ತಿಯ ನೂರಾರು ಮಹಿಳೆಯರು ಗಂಗೆಮಾತೆಗೆ ಪೂಜೆ ಸಲ್ಲಿಸಿ ಹಾಲರವಿ ಉತ್ಸವದಲ್ಲಿ ಭಾಗಿಯಾ ದರು.

ಹಾಲರವಿ ಉತ್ಸವದ ಮೆರವಣಿಗೆ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡೊಳ್ಳುಕುಣಿತ, ವೀರಗಾಸೆ, ಕೀಲು ಕುದುರೆ, ಕಂಸಾಳೆ ಕಲಾವಿದರು ಜನರನ್ನು ರಂಜಿಸಿದರು. ಪಟಾಕಿ ಮತ್ತು ಸುಡುಮದ್ದು ಪ್ರದರ್ಶನ ನಡೆಯಿತು. ನಂತರ ಮೆರವಣಿಗೆ ಮೂಲಕ ದೇವಸ್ಥಾನದವರೆಗೆ ಸಾಗಿ ಬಂದರು. ಸಾವಿರಾರು  ಜನರು  ಹಾಲರವಿ ಉತ್ಸವವನ್ನು ಕಣ್ಣಿಂಬಿಕೊಂಡರು.  ಹರಕೆ ಹೊತ್ತ ನೂರಾರು ಮಂದಿ ಬಾಯಿಬೀಗ ಸೇವೆ ಸಲ್ಲಿಸಿ, ದೇವರ ದರ್ಶನ ಪಡೆದರು.

ADVERTISEMENT

ಶನಿವಾರ ಬೆಳಿಗ್ಗೆ ದೇವರಿಗೆ ಎಣ್ಣೆಮಜ್ಜನಸೇವೆ, ತೈಲಾಭಿಷೇಕ, ಬಿಲ್ವಾರ್ಚಣೆ ಸೇವೆ , ಪೂಜೆಗಳನ್ನು ಅರ್ಚಕ ತಂಡದವರು ನೆರವೇರಿಸಿದರು.  ಹುಲಿವಾಹನದಲ್ಲಿ ಮಹದೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಲಾಯಿತು. ಹತ್ತಾರು ಗ್ರಾಮಗಳ ಭಕ್ತರು ದನಗಳು ಹಾಗೂ ಕುರಿಗಳನ್ನು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿಸಿದರು.

ಅನ್ನಸಂತರ್ಪಣೆ: ಶನಿವಾರ ಮಧ್ಯಾಹ್ನ ದೇವಸ್ಥಾನದ ಮುಂಭಾಗದ ಕಾಲೇಜು ಆವರಣದಲ್ಲಿ ದುಗ್ಗನಹಳ್ಳಿ, ಮುದ್ದೇಗೌಡನದೊಡ್ಡಿ, ಹಂಚೀಪುರ ಗ್ರಾಮಸ್ಥರು ಆಯೋಜಿಸಿದ್ದ ಅನ್ನಸಂತರ್ಪಣೆಯಲ್ಲಿ   20 ಸಾವಿರ ಭಕ್ತರು ಭಾಗಿಯಾಗಿ ದೇವರ ಪ್ರಸಾದ ಸ್ವೀಕರಿಸಿದರು. ದಾನಿಗಳು ಅಪಾರ ಪ್ರಮಾಣದ ದಿನಸಿ ಸಾಮಗ್ರಿಗಳನ್ನು ನೀಡಿದ್ದರು.

ರಥೋತ್ಸವ: ಭಾನುವಾರ ಮಧ್ಯಾಹ್ನ ರಥೋತ್ಸವವು ಅದ್ದೂರಿಯಾಗಿ ನಡೆಯಿತು. ಭಕ್ತರು ಹಣ್ಣು-ಜವನ ಎಸೆದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.