ADVERTISEMENT

ಮಳವಳ್ಳಿ: ಪುರಸಭೆ ಗದ್ದುಗೆಗೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 5:56 IST
Last Updated 18 ಆಗಸ್ಟ್ 2024, 5:56 IST
<div class="paragraphs"><p>ಮಳವಳ್ಳಿ ಪಟ್ಟಣದ ಪುರಸಭೆ ಕಾರ್ಯಾಲಯ</p></div>

ಮಳವಳ್ಳಿ ಪಟ್ಟಣದ ಪುರಸಭೆ ಕಾರ್ಯಾಲಯ

   

ಮಳವಳ್ಳಿ: ಒಂದೂವರೆ ವರ್ಷದಿಂದ ಖಾಲಿ ಇದ್ದ ಪಟ್ಟಣದ ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು, ಪರಿಶಿಷ್ಟ ಜಾತಿಗೆ ಅಧ್ಯಕ್ಷ ಸ್ಥಾನ ಹಾಗೂ ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ನಿಗದಿಯಾಗಿದೆ. ಪುರಸಭೆ ಗದ್ದುಗೆ ಹಿಡಿಯಲು ಪೈಪೋಟಿ ಈಗಲೇ ಶುರುವಾಗಿದೆ.

ಮೊದಲ ಅವಧಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಸ್ಥಾನದಲ್ಲಿ ಜೆಡಿಎಸ್ ಸದಸ್ಯೆ ರಾಧಾ ನಾಗರಾಜು ಅಧ್ಯಕ್ಷರಾಗಿ ಹಾಗೂ ಟಿ.ನಂದಕುಮಾರ್, ಎಂ.ಟಿ. ಪ್ರಶಾಂತ್ ಸಾಮಾನ್ಯ ವರ್ಗದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ADVERTISEMENT

ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಆಗುವುದಕ್ಕೂ ಮೊದಲೇ ಪುರಸಭೆಯಲ್ಲಿ ಜೆಡಿಎಸ್‌ಗೆ ಬಿಜೆಪಿ ಬೆಂಬಲ ನೀಡಿತ್ತು. ಎರಡೂವರೆ ವರ್ಷಗಳ ಕಾಲ ಆಡಳಿತ ನಡೆಸಿದ್ದವು. ಒಂದು ವರ್ಷಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಆಯ್ಕೆಯಾಗಿದ್ದರು. ಆದರೆ, ಎರಡನೇ ಅವಧಿಗೆ ಸದಸ್ಯರಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಖಾಲಿಯಾಗಿಯೇ ಇತ್ತು. ಈಗ ಅಧಿಕೃತವಾಗಿಯೇ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಇವರೇ ಪಕ್ಷೇತರ ಸದಸ್ಯರ ಬೆಂಬಲದಿಂದ ಅಧಿಕಾರಕ್ಕೇರುವರೇ ಎನ್ನುವುದು ಕುತೂಹಲ ಮೂಡಿಸಿದೆ.

2023ರ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್‌ನ ಒಂದೆರಡು ಸದಸ್ಯರು ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದರು. 7 ಮಂದಿ ಪಕ್ಷೇತರರಲ್ಲಿ ಕೆಲ ಸದಸ್ಯರು ಕಾಂಗ್ರೆಸ್ ಪರ ಇನ್ನೂ ಕೆಲವರು ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಪಿ.ಎಂ. ನರೇಂದ್ರಸ್ವಾಮಿ ಗೆದ್ದಿರುವುದರಿಂದ ಕೆಲ ಜೆಡಿಎಸ್ ಅಸಮಾಧಾನಿತರು ಹಾಗೂ ಪಕ್ಷೇತರ ಸದಸ್ಯರನ್ನು ಸೆಳೆದು ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ದಕ್ಕುವಂತೆ ಮಾಡುವವರೇ ಎನ್ನುವುದನ್ನು ಕಾದು ನೋಡಬೇಕಿದೆ.

ಪರಿಶಿಷ್ಟ ಜಾತಿಗೆ ಸೇರಿದ ಕಾಂಗ್ರೆಸ್‌ನ ಹಿರಿಯ ಸದಸ್ಯ ಎಂ.ಆರ್. ರಾಜಶೇಖರ್, ಜೆಡಿಎಸ್ ಸಿದ್ದರಾಜು, ಕುಮಾರ್, ಪಕ್ಷೇತರ ಸದಸ್ಯರಾದ ಪುಟ್ಟಸ್ವಾಮಿ, ಪ್ರಮೀಳಾ, ಸವಿತಾ, ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಪಕ್ಷೇತರ ಸದಸ್ಯ ಪುಟ್ಟಸ್ವಾಮಿ ಸಹ ಪ್ರಬಲ ಅಕಾಂಕ್ಷಿಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಮೂರು ಪಕ್ಷಗಳು, ಪಕ್ಷೇತರ ಸದಸ್ಯರು ಅಕಾಂಕ್ಷಿಗಳಾಗಿದ್ದಾರೆ. ಪಕ್ಷೇತರರ ಸಹಕಾರದಿಂದ ಜೆಡಿಎಸ್ ಬಿಜೆಪಿ ಮೈತ್ರಿ ಗಟ್ಟಿಕೊಂಡು ಪುರಸಭೆಯನ್ನು ಮತ್ತೆ ಜೆಡಿಎಸ್ ಹಿಡಿತಕ್ಕೆ ಪಡೆಯಲು ಮಾಜಿ ಶಾಸಕ ಕೆ.ಅನ್ನದಾನಿ ಪ್ರಯತ್ನ ನಡೆಸುವವರೇ ಎನ್ನುವ ಪ್ರಶ್ನೆ ಮೂಡಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇರುವುದರಿಂದ ಸಹಜವಾಗಿಯೇ ಪುರಸಭೆಯಲ್ಲಿ ನಮ್ಮದೇ ಪಕ್ಷದ ಸದಸ್ಯರು ಅಧ್ಯಕ್ಷರಾಗಿರಬೇಕು ಎಂದು ಬಯಸಿದರೆ ಅಧ್ಯಕ್ಷ ಸ್ಥಾನ ಯಾವ ಪಕ್ಷದ ಪಾಲಾಗಲಿದೆ ಎನ್ನುವ ಕುತೂಹಲ ಮೂಡಿದೆ.

ಸದಸ್ಯರ ಬಲಾಬಲ

ಜೆಡಿಎಸ್–9

ಕಾಂಗ್ರೆಸ್–5

ಬಿಜೆಪಿ– 2

ಪಕ್ಷೇತರ–7

ಒಟ್ಟು–23

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.