ADVERTISEMENT

ಮಳವಳ್ಳಿ | ಅಭಿವೃದ್ಧಿ ಕಾಣದ ಬಡಾವಣೆ; ಜನರ ಬವಣೆ

ಮಳವಳ್ಳಿ ಪಟ್ಟಣದಲ್ಲಿ ಸಮರ್ಪಕ ರಸ್ತೆ, ಒಳಚರಂಡಿ ವ್ಯವಸ್ಥೆಯಿಲ್ಲದೆ ನಾಗರಿಕರ ಪರದಾಟ

ಟಿ.ಕೆ.ಲಿಂಗರಾಜು
Published 16 ಅಕ್ಟೋಬರ್ 2024, 6:58 IST
Last Updated 16 ಅಕ್ಟೋಬರ್ 2024, 6:58 IST
ಮಳವಳ್ಳಿ ಪಟ್ಟಣದ 4ನೇ ವಾರ್ಡ್ ರಸ್ತೆ ಕೆಸರು ಮತ್ತು ಗುಂಡಿಗಳಿಂದ ಕೂಡಿರುವ ದೃಶ್ಯ
ಮಳವಳ್ಳಿ ಪಟ್ಟಣದ 4ನೇ ವಾರ್ಡ್ ರಸ್ತೆ ಕೆಸರು ಮತ್ತು ಗುಂಡಿಗಳಿಂದ ಕೂಡಿರುವ ದೃಶ್ಯ    

ಮಳವಳ್ಳಿ: 1930ರಲ್ಲಿ ರಚಿತವಾದ ಮಳವಳ್ಳಿ ಪಟ್ಟಣದ ಪುರಸಭೆ ರೂಪುಗೊಂಡು ಶತಮಾನೋತ್ಸವ ಸಮೀಪಿಸುತ್ತಿದ್ದರೂ ಇನ್ನೂ ಹಲವು ಬಡಾವಣೆಗಳಿಗೆ ಮೂಲಸೌಲಭ್ಯಗಳು ಸಿಗದಿರುವುದು ಜನಪ್ರತಿನಿಧಿಗಳ ಆಡಳಿತದ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಹಲವಾರು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿರುವ ಹಾಗೂ ಟಿಪ್ಪು ಸುಲ್ತಾನ್ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುತ್ತಿದ್ದರೂ ಎನ್ನಲಾದ ಐತಿಹಾಸಿಕ ಪಟ್ಟಣ ಮಳವಳ್ಳಿ. ಹೊರವಲಯದ ಉಗ್ರಾಣಪುರದದೊಡ್ಡಿ, ಮಂಚನಹಳ್ಳಿ, ಮಾರೇಹಳ್ಳಿ ಪ್ರದೇಶಗಳು ಪಟ್ಟಣ ವ್ಯಾಪ್ತಿಗೆ ಸೇರಿದ್ದರೂ ನಿರೀಕ್ಷೆಯಷ್ಟು ಅಭಿವೃದ್ಧಿ ಹೊಂದಿಲ್ಲ. ಇನ್ನೂ ಹಲವೆಡೆ ಅಭಿವೃದ್ಧಿ ಹೊಂದದ ರಸ್ತೆಗಳು, ಒಳಚರಂಡಿ ಕಾಣದ ಪ್ರದೇಶಗಳು ಇದು ಪಟ್ಟಣವೋ ಹಳ್ಳಿಯೋ ಎಂಬ ಪ್ರಶ್ನೆ ಮೂಡಿಸುತ್ತದೆ.

ಪುರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಇನ್ನೂ ಸಮರ್ಪಕ ರಸ್ತೆ ಹಾಗೂ ಒಳಚರಂಡಿ ನಿರ್ಮಾಣವಾಗಿಲ್ಲ, ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವವರ ಸಂಖ್ಯೆ 50 ಸಾವಿರಕ್ಕೆ ಸಮೀಪಿಸುತ್ತಿದೆ. 23 ವಾರ್ಡ್‌ಗಳಾಗಿ ಪರಿವರ್ತಿಸಿ 28 ವರ್ಷಗಳು ಕಳೆದಿವೆ. ಆದರೂ ಪಟ್ಟಣದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಎನ್.ಇ.ಎಸ್ ಬಡಾವಣೆ ಸೇರಿದಂತೆ ಕೆಲ ವಾರ್ಡ್ ಗಳು ರೂಪುಗೊಂಡು ಹತ್ತಾರು ವರ್ಷಗಳು ಕಳೆದರೂ ಕೆಲ ರಸ್ತೆಗಳು ಇನ್ನೂ ಡಾಂಬರಿನ ಮುಖವನ್ನೇ ಕಂಡಿಲ್ಲ. ಇಂಥ ವ್ಯವಸ್ಥೆಯು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಆಡಳಿತ ವೈಖರಿಯನ್ನು ಎತ್ತಿ ತೋರಿಸುತ್ತದೆ.

ADVERTISEMENT

7ನೇ ವಾರ್ಡ್‌ನ ಕೋರ್ಟ್ ಪಕ್ಕದ ರಸ್ತೆ ಮೂಲಕ ಹಳೆಯ ಕೋರ್ಟ್ ರಸ್ತೆಗೆ ಸಂಪರ್ಕಿಸುವ ರಸ್ತೆ ಅಸುಪಾಸಿನಲ್ಲಿ 60ಕ್ಕೂ ಅಧಿಕ ಮನೆಗಳಿದ್ದು, ಸಮರ್ಪಕ ರಸ್ತೆ ಇಲ್ಲ. ಬಹುತೇಕ ಜನರು ಕಾಲುದಾರಿಯನ್ನೇ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಸಾಕಷ್ಟು ಅವ್ಯವಸ್ಥೆ ಕಾಡುತ್ತದೆ. 18ನೇ ವಾರ್ಡಿನ ಕೆಲವೆಡೆ ರಸ್ತೆ ಹಾಗೂ ಸಮರ್ಪಕ ಒಳಚರಂಡಿ ಇಲ್ಲದೇ ಮಳೆ ಬಂದ ಸಂದರ್ಭದಲ್ಲಿ ನೀರು ರಸ್ತೆ ತುಂಬೆಲ್ಲ ನಿಲ್ಲುತ್ತದೆ. ಗಂಗಾಧರೇಶ್ವರಸ್ವಾಮಿ ದೇವಸ್ಥಾನದ ರಸ್ತೆಯ ಚರಂಡಿಯು ಬಾಯಿ ತೆರೆದಿದ್ದು, ಅದನ್ನು ಮುಚ್ಚಲು ಪುರಸಭೆ ನಿರ್ಲಕ್ಷ್ಯ ತೋರಿದೆ’ ಎಂದು ಮಹಿಳೆಯರು ದೂರಿದ್ದಾರೆ. 

‘20, 21, ಹಾಗೂ 22 ವಾರ್ಡ್‌ನಲ್ಲಿ ಕೆಲ ರಸ್ತೆಗಳು ಮಣ್ಣಿನಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಮಾರಕವಾಗಿದೆ. ಹೌಸಿಂಗ್ ಬೋರ್ಡ್, ಪೇಟೆ ಬೀದಿಯ ಅಡ್ಡರಸ್ತೆಗಳು, ಈದ್ಗಾ ಮೋಹಲ್ಲಾ, ವಡ್ಡರಕಾಲೊನಿ, ಮಂಚನಹಳ್ಳಿ ರಸ್ತೆ, ಮುಸ್ಲಿಂ ಹಾಗೂ ಮಸೀದಿಯ ಕೆಲ ರಸ್ತೆಗಳು ಇನ್ನೂ ಅಭಿವೃದ್ಧಿ ಕಂಡಿಲ್ಲ, ಮೂರು ದಶಕಗಳು ಕಳೆದರೂ ರಸ್ತೆ ಡಾಂಬರೀಕರಣವಿಲ್ಲದೇ ಗುಂಡಿಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಸವಾರರು ಸಂಚರಿಸುವುದು ಕಷ್ಟವಾಗಿದೆ’ ಎಂದು ಪಟ್ಟಣದ ನಿವಾಸಿಗಳು ಸಮಸ್ಯೆ ತೋಡಿಕೊಂಡಿದ್ದಾರೆ. 

‘ನಗರಸಭೆ ಪ್ರಸ್ತಾವ ವಾಪಸ್‌’

ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದಜೆಗೇರಿಸುವ ನಿಟ್ಟಿನಲ್ಲಿ ಪಟ್ಟಣಕ್ಕೆ ಹೊಂದಿಕೊಂಡಿರುವ ಹಲವು ಗ್ರಾಮಗಳನ್ನು ಸೇರಿಸಿ ಕಳೆದ ಕೆಲ ತಿಂಗಳ ಹಿಂದೆ ಪೌರಾಡಳಿತ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ 2011ರ ಜನಗಣತಿ ಪ್ರಕಾರ ಪಟ್ಟಣದ ಜನಸಂಖ್ಯೆ 37601 ಇರುವುದರಿಂದ ಪ್ರಸ್ತಾವ ವಾಪಾಸ್ ಬಂದಿದ್ದು ಮುಂದಿನ ದಿನಗಳಲ್ಲಿ ನಗರಸಭೆ ಕನಸು ಈಡೇರಲಿದೆ. ಕುಡಿಯುವ ನೀರಿನ ಯೋಜನೆ ಕಾಮಗಾರಿಯಲ್ಲಿನ ನ್ಯೂನತೆ ಸರಿಪಡಿಸುವುದರ ಜತೆಗೆ ನಗರೋತ್ಥಾನ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನಾ ತಿಳಿಸಿದರು.

‘ಹಳ್ಳ ಹಿಡಿದ ಕಾಮಗಾರಿಗಳು’

‘ಹತ್ತು ವರ್ಷಗಳಿಂದ ಪಟ್ಟಣದ ಅಭಿವೃದ್ಧಿಗೆ ನೂರಾರು ಕೋಟಿ ರೂಪಾಯಿ ಅನುದಾನ ಬಂದಿದೆ. ಪ್ರಮುಖವಾಗಿ ಕುಡಿಯುವ ನೀರಿನ ಯೋಜನೆ ಯುಜಿಡಿ ಕಾಮಗಾರಿಗಳಿಗೆ ಬಂದಂಥ ಹಣ ಸಮರ್ಪಕವಾಗಿ ಬಳಕೆಯಾಗಿಲ್ಲ ಕಾಮಗಾರಿಗಳು ಸಹ ತ್ವರಿತವಾಗಿ ನಡೆದಿಲ್ಲ. ಇದರಿಂದ ನಿರೀಕ್ಷೆಯಷ್ಟು ಅಭಿವೃದ್ಧಿಯಾಗಿಲ್ಲ. ಹಲವು ಯೋಜನೆಗಳು ಹಳ್ಳ ಹಿಡಿದ ಪರಿಣಾಮ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿದೆ’ ಎಂದು ಪಟ್ಟಣದ ನಿವಾಸಿಗಳಾದ ಸುಬ್ರಹ್ಮಣ್ಯ ಲಲಿತಾ ದೂರಿದ್ದಾರೆ. 

ಮಳವಳ್ಳಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಂಸದರು ಹಾಗೂ ಶಾಸಕರು ಹೆಚ್ಚಿನ ಅನುದಾನ ನೀಡಬೇಕಿದೆ. ಜನರಿಗೆ ಮೂಲಸೌಕರ್ಯ ಕಲ್ಪಿಸಲು ಪುರಸಭೆ ವತಿಯಿಂದ ಕ್ರಮ ಕೈಗೊಳ್ಳುತ್ತೇವೆ.
ಪುಟ್ಟಸ್ವಾಮಿ, ಪುರಸಭೆ ಅಧ್ಯಕ್ಷ, ಮಳವಳ್ಳಿ
ಮಳವಳ್ಳಿ ಪಟ್ಟಣದ ಗಂಗಾಧರೇಶ್ವರಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ಚರಂಡಿಯ ಅವ್ಯವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.