ಮಳವಳ್ಳಿ: ಶತಮಾನದ ಹಿಂದೆ ಕಿರುಗಾವಲು ಗ್ರಾಮದಲ್ಲಿ ಆರಂಭವಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಂದಿಗೂ ರೈತರು, ಮಧ್ಯಮ ವರ್ಗದ ಜನರ ಪಾಲಿಗೆ ಸಂಜೀವಿನಿಯಂತಾಗಿದೆ. ಆಧುನಿಕ ಕಾಲದ ಮಾಲ್‌ನಂತಿರುವ ಈ ಸಂಘ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿ ಗಮನ ಸೆಳೆದಿದೆ.
1912ರಲ್ಲಿ ಆರಂಭವಾದ ಸಂಘಕ್ಕೆ ಈಗ 107 ವರ್ಷ. ₹10 ಮೌಲ್ಯದ 100 ಷೇರುಗಳೊಂದಿಗೆ ಆರಂಭವಾದ ಸಂಘ ಈಗ ಬೃಹದಾಕಾರವಾಗಿ ಬೆಳೆದಿದೆ. ಸದ್ಯ ₹1 ಸಾವಿರ ಮೌಲ್ಯದ 1,365 ಷೇರುದಾರರು ಸಂಘದಲ್ಲಿದ್ದು, ಅಪಾರ ಲಾಭದೊಂದಿಗೆ ಜನರಿಂದ ಜನರಿಗಾಗಿ ಮುನ್ನಡೆಯುತ್ತಿದೆ. ಬದಲಾದ ಕಾಲಘಟ್ಟದಲ್ಲಿ ಸಂಘ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಣೆ ಮಾಡಿಕೊಂಡು ಬಂದಿದ್ದು, ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ಜನರಿಗೆ ಸೇವೆ ನೀಡುತ್ತಿದೆ.
2018–19ನೇ ಸಾಲಿಗೆ ₹21 ಕೋಟಿ ವಹಿವಾಟು ನಡೆಸಿ ₹15.75 ಲಕ್ಷ ನಿವ್ವಳ ಲಾಭ ಗಳಿಸಿರುವುದು ಸಂಘದ ಯಶೋಗಾಥೆಗೆ ಹಿಡಿದ ಕನ್ನಡಿಯಾಗಿದೆ. ಹಿಂದೆ ಒಂದು ಸಣ್ಣ ಕಟ್ಟಡದಲ್ಲಿ ಸಂಘ ತನ್ನ ವಹಿವಾಟು ನಡೆಸುತ್ತಿತ್ತು. ಆದರೆ, ಈಗ ಸಂಘ ಮೂರು ಅಂತಸ್ತಿನ ಸುಸಜ್ಜಿತ ಕಟ್ಟಡ ಹೊಂದಿದೆ. ನಗರ ಪ್ರದೇಶದ ಯಾವುದೇ ಹೈಟೆಕ್ ಮಾಲ್, ಬ್ಯಾಂಕ್ ಕಟ್ಟಡಕ್ಕೂ ಪೈಪೋಟಿ ನೀಡುವಂತಿದೆ.
ಮೊದಲು ರೈತರ ಕೃಷಿಗೆ ಅನುಕೂಲವಾಗುವಂತಹ ಸಣ್ಣ ಮಟ್ಟದ ಸಾಲ, ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ ಮಾರಾಟಕ್ಕೆ ಮಾತ್ರ ಸಂಘ ಸೀಮಿತವಾಗಿತ್ತು. 2015ರ ನಂತರ ಸಂಘದ ಹೆಜ್ಜೆಗಳು ಆಧುನಿಕ ಕಾಲಕ್ಕೆ ತಕ್ಕಂತೆ ಸಂಪೂರ್ಣವಾಗಿ ಬದಲಾದವು. ಮಾಜಿ ಶಾಸಕ ಕೆ.ಎಂ.ಪುಟ್ಟು ಅವರ ಪುತ್ರ ಕೆ.ಪಿ.ನರೇಂದ್ರ ಎಂಬಿಎ ಪದವೀಧರರಾಗಿದ್ದು, ಸಂಘಕ್ಕೆ ಹೊಸ ರೂಪ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಜೊತೆಗೆ ಆಡಳಿತ ಮಂಡಳಿಯವರ ಇಚ್ಛಾಶಕ್ತಿಯಿಂದ ₹1.5 ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣಗೊಂಡಿತು.
ಮೊದಲ ನೆಲ ಅಂತಸ್ತಿನಲ್ಲಿ ರಾಸಾಯನಿಕ ಗೊಬ್ಬರ ಮಾರಾಟ ಮಳಿಗೆ ಸ್ಥಾಪನೆ ಮಾಡಲಾಗುತ್ತಿದೆ. ಮೊದಲ ಅಂತಸ್ತಿನಲ್ಲಿ ಬ್ಯಾಂಕಿಂಗ್ ವ್ಯವಹಾರ, ಲಾಕರ್, ಆಡಳಿತ ಮಂಡಳಿ ಸಭೆ ನಡೆಸಲು ಸುಸಜ್ಜಿತ ಸಭಾಂಗಣ ಇದೆ. ಒಟ್ಟು 11 ನೌಕರರು ಕಾರ್ಯನಿರ್ವಹಣೆ ನಡೆಸುತ್ತಿದ್ದು, ಸಕಲ ಸೌಲಭ್ಯಗಳನ್ನು ಹೊಂದಿದೆ. 3ನೇ ಅಂತಸ್ತಿನಲ್ಲಿ ದೊಡ್ಡ ಸಭಾಂಗಣ ನಿರ್ಮಾಣ ಮಾಡಲಾಗಿದ್ದು, ಪ್ರತಿವರ್ಷ ನಡೆಯುವ ವಾರ್ಷಿಕ ಮಹಾಸಭೆ ಸೇರಿ ಇತರೆ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ.
ಈ ಕಟ್ಟಡದ ಪಕ್ಕದಲ್ಲಿ ಮತ್ತೊಂದು ಸುಸಜ್ಜಿತ ಕಟ್ಟಡವಿದ್ದು, ನಗರ ಪ್ರದೇಶದ ಯಾವುದೇ ಮಾಲ್‌ಗಳಿಗೂ ಕಡಿಮೆ ಇಲ್ಲದಂತೆ ದಿನನಿತ್ಯ ಬಳಕೆಯ ದಿನಸಿ ಪದಾರ್ಥ, ಸೌಂದರ್ಯವರ್ಧಕ ಸೇರಿ 1,400ಕ್ಕೂ ರೀತಿಯ ವಸ್ತುಗಳ ಮಾರಾಟ ಮಾಡಲಾಗುತ್ತಿದೆ.
‘ಗ್ರಾಮೀಣ ಪ್ರದೇಶದ ರೈತರು, ಮಧ್ಯಮವರ್ಗದ ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುವುದು ಕಷ್ಟ. ಜನರು ಮೀಟರ್ ಬಡ್ಡಿ ದಂಧೆಕೋರರ ಬಳಿ ಹಣ ಪಡೆದು ಸಂಕಷ್ಟಕ್ಕೀಡಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ಸಂಘದಿಂದ ಸಣ್ಣ ವ್ಯಾಪಾರಿಗಳಿಗೆ, ಮಧ್ಯಮವರ್ಗದವರಿಗೆ ಸಾಲ ನೀಡಿದ್ದು, ಉತ್ತಮ ರೀತಿಯಲ್ಲಿ ವಸೂಲಾಗುತ್ತಿದೆ. ಮುಂದೆ ಒಂದು ಹಾರ್ಡ್‌ವೇರ್ ಪ್ರಾರಂಭಿಸಬೇಕು ಎನ್ನುವ ಆಲೋಚನೆ ಇದೆ. ವರ್ಷಕ್ಕೆ ಕನಿಷ್ಠ ₹40 ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದ್ದೇವೆ’ ಎಂದು ಸಂಘದ ಅಧ್ಯಕ್ಷ ಕೆ.ಪಿ.ನರೇಂದ್ರ ಹೇಳಿದರು.
ಷೇರುದಾರರು ಮೃತಪಟ್ಟರೆ ಧನಸಹಾಯ
ಸಹಕಾರ ಸಂಘದ ಷೇರುದಾರರಾಗಿ ವಹಿವಾಟು ನಡೆಸಿರುವ ಯಾವುದೇ ವ್ಯಕ್ತಿ ಮೃತಪಟ್ಟರೆ ಅವರ ಶವಸಂಸ್ಕಾರಕ್ಕೆ ₹10 ಸಾವಿರ ಸಹಾಯಧನ ನೀಡಲಾಗುತ್ತಿದೆ. ಕಿರುಗಾವಲು, ಮಾಗನಹಳ್ಳಿ, ಬುಳ್ಳಿಕೆಂಪನದೊಡ್ಡಿ ಗ್ರಾಮದ ವ್ಯಾಪ್ತಿಯ ರೈತರು ಷೇರುದಾರರಾಗಿದ್ದಾರೆ. 2,100 ಪಡಿತರದಾರ ಕಾರ್ಡ್‌ದಾರರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. 2009ರಲ್ಲಿ ಇಡೀ ವ್ಯವಹಾರವನ್ನು ಗಣಕೀಕೃತಗೊಳಿಸಲಾಗಿದೆ. ಈ ವರ್ಷದ ಡಿಸೆಂಬರ್ ವೇಳೆಗೆ ₹15 ಕೋಟಿ ವ್ಯವಹಾರ ನಡೆಸಿ ಸಾಧನೆ ಮೆರೆದಿದೆ.
₹6 ಕೋಟಿ ಸಾಲ ವಿತರಣೆ
ಸಂಘವು ರೈತರಿಗೆ ಕೃಷಿ ಸಾಲ, ಸ್ತ್ರೀಶಕ್ತಿ ಸಂಘಗಳಿಗೆ ಸಾಲ, ವಾಹನ, ಒಡವೆ ಸಾಲ ನೀಡುತ್ತಿದ್ದು, ಮಧ್ಯಮ ಹಾಗೂ ಸಣ್ಣ ವ್ಯಾಪಾರಿಗಳಿಗೆ ಕನಿಷ್ಠ ದಾಖಲೆ ಪತ್ರಗಳ ಮೂಲಕ ₹1 ಲಕ್ಷದವರೆಗೂ ಸಾಲ ನೀಡಲಾಗುತ್ತಿದೆ. ₹4 ಕೋಟಿ ಠೇವಣಿ ಇದ್ದು, ಇದುವರೆಗೂ ₹6 ಕೋಟಿ ಸಾಲ ನೀಡಲಾಗಿದೆ. ಶೇ 95ರಷ್ಟು ಸಾಲ ವಸೂಲಾತಿ ನಡೆದಿದ್ದು, ಸಹಕಾರ ಸಂಘಕ್ಕೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಸೇರಿ ಹಲವು ಮನ್ನಣೆಗಳು ದೊರೆತಿವೆ. ಇಷ್ಟೆಲ್ಲಾ ಹಣಕಾಸು ವಹಿವಾಟು ಮಾಡಿರುವ ಸಂಘ, ಸರ್ಕಾರದಿಂದ ಯಾವುದೇ ಹಣದ ನೆರವು ಪಡೆಯದೇ ಸಾಧನೆಯತ್ತ ಮುನ್ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.