ಶ್ರೀರಂಗಪಟ್ಟಣ: ಗ್ರಾಮೀಣ ಪ್ರದೇಶದ ಜನರಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚು ಎಂದು ಮೈಸೂರು ಸೇಂಟ್ ಜೋಸೆಫ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ನಿತಿನ್ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸೇಂಟ್ ಜೋಸೆಫ್ ಆಸ್ಪತ್ರೆಯ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಶಿಬಿರದಲ್ಲಿ ಜನರ ಆರೋಗ್ಯ ತಪಾಸಣೆ ನಡೆಸಿ ಅವರು ಮಾತನಾಡಿದರು.
‘ಹಳ್ಳಿಗಳಲ್ಲಿ ವಾಸ ಮಾಡುವ ಜನರು ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಕಾಳುಗಳನ್ನು ಹೆಚ್ಚು ಬಳಸಬೇಕು. ಶುದ್ಧವಾದ ಆಹಾರ ಮತ್ತು ನೀರು ಸೇವಿಸಬೇಕು. ಮಹಿಳೆಯರು ಕಾಲ ಕಾಲಕ್ಕೆ ತಮ್ಮ ರಕ್ತದ ಹಿಮೋಗ್ಲೋಬಿನ್ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
ಮಹಿಳೆಯರ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್‌ನ ಲಕ್ಷಣಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಡಾ.ಕಾವ್ಯ ತಿಳಿಸಿಕೊಟ್ಟರು. ಶಿಬಿರದಲ್ಲಿ ಸೇಂಟ್ ಜೋಸೆಫ್ ಆಸ್ಪತ್ರೆಯ ಸಿಬ್ಬಂದಿ ನೂರಾರು ಜನರ ರಕ್ತ ಪರೀಕ್ಷೆ ನಡೆಸಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಗಣಪತಿ ಭಟ್ ಶಿಬಿರವನ್ನು ಉದ್ಘಾಟಿಸಿದರು. ಸಂಸ್ಥೆಯ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಕುಂತಲಾಗೌಡ, ಸೇವಾ ಪ್ರತಿನಿಧಿ ಸುಮತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.