ADVERTISEMENT

ಮಂಡ್ಯ | ಕಳಪೆ ಆಹಾರ ತಯಾರಿಕೆ; ಐವರು ಸಿಬ್ಬಂದಿ ಅಮಾನತು

ಮಿಮ್ಸ್‌ ರೋಗಿಗಳಿಗೆ ಬೂಸ್ಟ್‌ ಬಂದ ಬ್ರೆಡ್‌ ವಿತರಣೆ– ಕಳಪೆ ಆಹಾರ ತಯಾರಿಕೆ; ಐವರ ಅಮಾನತು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 0:16 IST
Last Updated 23 ಅಕ್ಟೋಬರ್ 2024, 0:16 IST
<div class="paragraphs"><p>ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ ಮತ್ತು ಸದಸ್ಯರ ತಂಡ ಭೇಟಿ ನೀಡಿ, ರೋಗಿಗಳಿಗೆ ಕೊಡುವ ಬ್ರೆಡ್ ಗುಣಮಟ್ಟವನ್ನು ಪರಿಶೀಲಿಸಿದರು </p></div>

ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ ಮತ್ತು ಸದಸ್ಯರ ತಂಡ ಭೇಟಿ ನೀಡಿ, ರೋಗಿಗಳಿಗೆ ಕೊಡುವ ಬ್ರೆಡ್ ಗುಣಮಟ್ಟವನ್ನು ಪರಿಶೀಲಿಸಿದರು

   

–ಪ್ರಜಾವಾಣಿ ಚಿತ್ರ

ಮಂಡ್ಯ: ಇಲ್ಲಿನ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಳಪೆ ಆಹಾರ ಮತ್ತು ಬೂಸ್ಟ್‌ ಬಂದ ಬ್ರೆಡ್‌ ನೀಡುತ್ತಿದ್ದುದನ್ನು ಕಂಡ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ ಅವರು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ADVERTISEMENT

ಆಯೋಗದ ತಂಡ ಮಂಗಳವಾರ ಭೇಟಿ ನೀಡಿದ ಸಂದರ್ಭ, ಅಡುಗೆ ಕೋಣೆಯಲ್ಲಿ 538 ರೋಗಿಗಳಿಗೆ ಅಗತ್ಯವಿದ್ದಷ್ಟು ಆಹಾರವನ್ನು ತಯಾರಿಸಿರಲಿಲ್ಲ. ಗುಣಮಟ್ಟದ ಆಹಾರ ಸಾಮಗ್ರಿ ಮತ್ತು ತರಕಾರಿಯ ದಾಸ್ತಾನೂ ಇರಲಿಲ್ಲ. ಅವಧಿ ಮೀರಿದ ಬ್ರೆಡ್‌ ಇಡಲಾಗಿತ್ತು. ಅದನ್ನು ಕಂಡು ಡಾ.ಕೃಷ್ಣ ಸಿಟ್ಟಾದರು.

‘ಆಹಾರ ಸ್ವಲ್ಪವೂ ರುಚಿಯಾಗಿರುವುದಿಲ್ಲ. ಹಾಲಿನಲ್ಲಿ ಸ್ವಲ್ಪವೂ ಸತ್ವವಿಲ್ಲ’ ಎಂದು ರೋಗಿಗಳು ದೂರಿದರು. ಮತ್ತೆ ಕೆಲವರು, ‘ಇಲ್ಲಿ ಉಚಿತವಾಗಿ ಆಹಾರ ಕೊಡುವ ಬಗ್ಗೆ ಗೊತ್ತೇ ಇಲ್ಲ. ಹೀಗಾಗಿ ಹೊರಗಡೆ ಕ್ಯಾಂಟೀನ್‌ನಲ್ಲಿ ಹಣ ಕೊಟ್ಟು ತಿಂಡಿ–ಊಟ ತರುತ್ತಿದ್ದೇವೆ’ ಎಂದು ಅಲವತ್ತುಕೊಂಡರು.

ಡಾ.ಕೃಷ್ಣ ಮಾತನಾಡಿ, ‘ಜಿಲ್ಲಾಸ್ಪತ್ರೆಯ ವಾರ್ಡ್‌ಗಳಲ್ಲಿ ಸ್ವಚ್ಛತೆ ಇಲ್ಲ. ಶೌಚಾಲಯಗಳು ಗಬ್ಬು ನಾರುತ್ತಿವೆ. ಒಂದೇ ಬೆಡ್‌ ಮೇಲೆ ಇಬ್ಬರು ರೋಗಿಗಳು ಮಲಗಿದ್ದಾರೆ. ರೋಗಿಗಳಿಗೆ ಅಗತ್ಯವಾದಷ್ಟು ಆಹಾರ ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. 

ಐವರ ಅಮಾನತು: ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಸುತ್ತಿದ್ದ ಆರೋಪದ ಮೇರೆಗೆ, ಮಂಡ್ಯ ತಾಲ್ಲೂಕಿನ ಹಳೇಬೂದನೂರು ಗ್ರಾಮದ ಮಹಿಳಾ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರದ (ಮಂಡ್ಯ ಮತ್ತು ದುದ್ದ ಎಂ.ಎಸ್‌.ಪಿ.ಸಿ.) ಐವರು ಸಿಬ್ಬಂದಿಯನ್ನು ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ ಅವರ ಸೂಚನೆ ಮೇರೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಮಾನತುಗೊಳಿಸಿದ್ದಾರೆ. 

ಸುಧಾ ಜಿ.ಎಲ್‌. (ಕಾರ್ಯದರ್ಶಿ), ಕಾಳಮ್ಮ (ಅಧ್ಯಕ್ಷೆ) ಹಾಗೂ ಅಂಬಿಕಾ ಡಿ, ನಯನಾ ಕೆ.ಟಿ., ಕಾವ್ಯಾ ಕೆ.ಸಿ (ಮೂವರು ಸದಸ್ಯರು) ಅಮಾನತುಗೊಂಡವರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.