ADVERTISEMENT

ಭ್ರೂಣಹತ್ಯೆ: ₹ 440 ಬೆಲೆಯ ಮಾತ್ರೆ ₹ 4 ಸಾವಿರಕ್ಕೆ ಮಾರಾಟ?

ಹೆಣ್ಣುಭ್ರೂಣ ಹತ್ಯೆ; ವೈದ್ಯರ ಶಿಫಾರಸು ಚೀಟಿ ಇಲ್ಲದೆಯೇ ಕಾಳಸಂತೆಯಲ್ಲಿ ಎಂಟಿಪಿ ಕಿಟ್‌ ಮಾರಾಟ

ಎಂ.ಎನ್.ಯೋಗೇಶ್‌
Published 7 ಮಾರ್ಚ್ 2024, 0:33 IST
Last Updated 7 ಮಾರ್ಚ್ 2024, 0:33 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಡ್ಯ: ‘ಭ್ರೂಣಹತ್ಯೆಗೆ ಬಳಸುವ ವೈದ್ಯಕೀಯ ಕಿಟ್‌ಗಳನ್ನು ಜಿಲ್ಲೆಯಾದ್ಯಂತ ಕಾಳಸಂತೆಯಲ್ಲಿ ಅಕ್ರಮವಾಗಿ 10 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗಿದೆ. ₹ 440 ಮುಖಬೆಲೆಯ ಮಾತ್ರೆಗಳನ್ನು ₹ 4 ಸಾವಿರದವರೆಗೂ ಮಾರಿದ್ದಾರೆ’ ಎಂಬ ಅಂಶ ಬೆಳಕಿಗೆ ಬಂದಿದೆ.

‘ಜಿಲ್ಲೆಯಲ್ಲಿ ಅವ್ಯಾಹತವಾಗಿ ಹೆಣ್ಣುಭ್ರೂಣಹತ್ಯೆ ನಡೆದಿದೆ’ ಎನ್ನಲಾದ ಪ್ರಕರಣ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇಂಥ ಕುತೂಹಲಕಾರಿ ಅಂಶಗಳು ಪತ್ತೆಯಾಗಿವೆ.

ADVERTISEMENT

‘2023 ಜನವರಿಯಿಂದ ಡಿ.12ರವರೆಗೆ ಜಿಲ್ಲೆಯ 12 ಸಗಟು ಔಷಧ ಮಾರಾಟ ಮಳಿಗೆಯಲ್ಲಿ 6,626 ಎಂಟಿಪಿ (ಮೆಡಿಕಲ್‌ ಟರ್ಮಿನೇಷನ್‌ ಆಫ್‌ ಪ್ರೆಗ್ನೆನ್ಸಿ) ಕಿಟ್‌ ಮಾರಾಟವಾಗಿವೆ. ಈ ಕಿಟ್‌ನಲ್ಲಿ ಮಿಫೆಪ್ರಿಸ್ಟಾನ್‌, ಮಿಸೋಪ್ರೋಸ್ಟ್‌ ಮಾತ್ರೆಗಳಿದ್ದು, ಅವುಗಳ ಮುಖಬೆಲೆ ₹ 440. ಆದರೆ ಕೆಲ ವೈದ್ಯರು, ಔಷಧಿ ಅಂಗಡಿಗಳ ಮಾಲೀಕರು ನೇರವಾಗಿ ₹ 4 ಸಾವಿರದವರೆಗೂ ಮಾರಾಟ ಮಾಡಿದ್ದಾರೆ’ ಎಂಬುದು ಆರೋಗ್ಯ ಇಲಾಖೆಯ ತನಿಖೆಯಿಂದ ಪತ್ತೆಯಾಗಿದೆ.

‘ತುರ್ತು ಸಂದರ್ಭದಲ್ಲಿ ತಾಯಿ ಹಾಗೂ ಮಗುವಿನ ಜೀವ ಉಳಿಸಲು ಬಳಸುವ ಎಂಟಿಪಿ ಕಿಟ್‌ಗಳನ್ನು ಹೆಣ್ಣುಭ್ರೂಣಹತ್ಯೆಗೆ ಬಳಸಲಾಗಿದೆ. ವೈದ್ಯರ ಸಲಹಾ ಚೀಟಿ ಇಲ್ಲದೆಯೇ ಅಕ್ರಮವಾಗಿ ಮಾರಾಟವಾಗಿರುವುದು ಹೆಣ್ಣುಭ್ರೂಣ ಹತ್ಯೆ ಜಿಲ್ಲೆಯಲ್ಲಿ ತೀವ್ರಗೊಳ್ಳಲು ಕಾರಣ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

‌ಸಹಾಯಕ ಔಷಧ ನಿಯಂತ್ರಕರು ನೀಡಿದ ಮಾಹಿತಿ ಅನುಸಾರ, ಜಿಲ್ಲೆಯಲ್ಲಿ ಸಣ್ಣಪುಟ್ಟ ಔಷಧಿ ಅಂಗಡಿಗಳಲ್ಲೂ ಅನಧಿಕೃತವಾಗಿ ಎಂಟಿಪಿ ಕಿಟ್‌ ಮಾರಾಟವಾಗಿದೆ.

ಜಿಲ್ಲೆಯಲ್ಲಿ 30 ಸಗಟು ಔಷಧ ಮಾರಾಟ ಮಳಿಗೆಗಳಿದ್ದು, 12 ಮಾರಾಟಗಾರರಷ್ಟೇ ಕಿಟ್‌ ಮಾರಾಟದ ಮಾಹಿತಿ ನೀಡಿದ್ದಾರೆ. ಉಳಿದ 18 ಮಾರಾಟಗಾರರಿಗೆ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆ ನೋಟಿಸ್‌ ನೀಡಿದೆ. ‘15 ಸಾವಿರಕ್ಕೂ ಹೆಚ್ಚು ಕಿಟ್‌ ಮಾರಾಟವಾಗಿರುವ ಸಾಧ್ಯತೆ ಇದೆ. ಅವರೂ ಮಾಹಿತಿ ಕೊಟ್ಟರೆ ನಿಖರ ಪ್ರಮಾಣ ಗೊತ್ತಾಗಲಿದೆ’ ಎಂದು ಮೂಲಗಳು ತಿಳಿಸಿವೆ.

‘ಮಾತ್ರೆಗಳನ್ನು ಇಷ್ಟೇ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬ ನಿಖರ ಮಾಹಿತಿ ಇಲ್ಲ. ₹ 4 ಸಾವಿರದವರೆಗೂ ಮಾರಾಟವಾಗಿರುವ ಮಾಹಿತಿ ಸಿಕ್ಕಿದೆ. ಅದಕ್ಕಿಂತ ಹೆಚ್ಚಿಗೂ ಮಾರಾಟವಾಗಿರುವ ಸಾಧ್ಯತೆ ಇದೆ. ನರ್ಸಿಂಗ್‌ ಹೋಮ್‌ಗೆ ಹೊಂದಿಕೊಂಡಂತಿರುವ ಔಷಧಿ ಅಂಗಡಿಗಳಲ್ಲಿ, ಒಂದೇ ಹೆಸರಿನ ವೈದ್ಯರಿಗೆ ಹಲವು ಕಿಟ್‌ ಮಾರಾಟ ಮಾಡಲಾಗಿದೆ. ಅದಕ್ಕೆ ಉನ್ನತ ಮಟ್ಟದ ತನಿಖೆಯ ಅವಶ್ಯಕತೆ ಇದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಕ್ರಮಕ್ಕೆ ಶಿಫಾರಸು; ‘ಎಂಟಿಪಿ ಕಿಟ್‌ ಮಾರಾಟ ಮಾಡಿರುವ ಸಗಟು, ಚಿಲ್ಲರೆ ಔಷಧಿ ಅಂಗಡಿಗಳು ಪ್ರತಿ ಕಿಟ್‌ಗೂ ವೈದ್ಯರ ಸಲಹಾ ಚೀಟಿ ಹಾಗೂ ಮಾರಾಟದ ಬಿಲ್‌ ಹಾಜರುಪಡಿಸಬೇಕು. ವಿಫಲರಾದರೆ ಹೆಣ್ಣುಭ್ರೂಣಹತ್ಯೆ ಪ್ರಕರಣಗಳಿಗೆ ಹೊಣೆಗಾರರನ್ನಾಗಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.

ಹೆಣ್ಣುಭ್ರೂಣ ಹತ್ಯೆ ಆರೋಪದ ತನಿಖೆ ನಡೆಸಲಾಗುತ್ತಿದೆ. ಸಗಟು ಔಷಧಿ ಮಾರಾಟಗಾರರು, ಚಿಲ್ಲರೆ ಮಾರಾಟ ಗಾರರ ಚಟುವಟಿಕೆ ಮೇಲೆ ನಿಗಾ ಇರಿಸಲಾಗಿದೆ
ಡಾ.ಕೆ.ಮೋಹನ್‌, ಜಿಲ್ಲಾ ಆರೋಗ್ಯಾಧಿಕಾರಿ

ಏಕರೂಪ ನೀತಿ ಜಾರಿಗೆ ಒತ್ತಾಯ

‘ಹೆಣ್ಣುಭ್ರೂಣಹತ್ಯೆ ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿರುವುದರಿಂದ ಜಿಲ್ಲೆಯಾ ದ್ಯಂತ ಎಂಟಿಪಿ ಕಿಟ್‌ಗಳು ದೊರೆ ಯುತ್ತಿಲ್ಲ. ಕೆಲವರು ಹೊರ ಜಿಲ್ಲೆ ಗಳಿಂದ ತರಿಸುತ್ತಿದ್ದು, ಹೆಣ್ಣು ಭ್ರೂಣ ಹತ್ಯೆ ತಡೆಯಲು ಸಾಧ್ಯ ವಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ತುರ್ತು ಪರಿಸ್ಥಿತಿ ಹೊರತುಪಡಿಸಿ ಯಾವುದೇ ವೈದ್ಯಕೀಯ ಚಟುವಟಿಕೆಗೆ ಕಿಟ್‌ ದೊರೆಯಬಾರದು’ ಎಂಬುದು ತಜ್ಞ ವೈದ್ಯರೊಬ್ಬರ ಅಭಿಪ್ರಾಯ.

‘ಆಸರೆ’ ಆಸ್ಪತ್ರೆ ವಿರುದ್ಧ ಎಫ್‌ಐಆರ್‌

ಬೆಂಗಳೂರು: ನಿಯಮ ಉಲ್ಲಂಘಿಸಿ 74 ಗರ್ಭಪಾತಗಳನ್ನು ನಡೆಸಿದ್ದಾರೆಂಬ ಆರೋಪದ ಮೇಲೆ ನೆಲಮಂಗಲದ ಆಸರೆ ಆಸ್ಪತ್ರೆಯ ಮಾಲೀಕ ರವಿಕುಮಾರ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ದೂರು ನೀಡಿದ್ದು, ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆಸ್ಪ್ರತ್ರೆಯಲ್ಲಿದ್ದ ಶಸ್ತ್ರಚಿಕಿತ್ಸಾ ಕಡತವನ್ನು ಆರೋಗ್ಯ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

‘ನೆಲಮಂಗಲದ ಬಿ.ಎಚ್‌. ರಸ್ತೆಯಲ್ಲಿರುವ ಆಸರೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಕೃತ್ಯ ನಡೆಸಿರುವುದು ಗೊತ್ತಾಯಿತು. ಪರವಾನಗಿ ಪಡೆಯದೆ ಗರ್ಭಪಾತ ನಡೆಸಲಾಗಿದೆ. ವೈದ್ಯಕೀಯ ಗರ್ಭಪಾತ ಕಾಯ್ದೆ–1971 ಅನ್ನು ಉಲ್ಲಂಘಿಸಲಾಗಿದೆ’ ಎಂದು ದೂರು ನೀಡಿದ್ದಾರೆ.

‘ಆಸ್ಪತ್ರೆಯಲ್ಲಿ ನಡೆಸಿದ ಗರ್ಭಪಾತಗಳಿಗೆ ಸಂಬಂಧಿಸಿದ ಕಡತವನ್ನು ನಿರ್ವಹಣೆ ಮಾಡಿಲ್ಲ. ಬದಲಿಗೆ ಗರ್ಭಪಾತಕ್ಕೆ ಸಂಬಂಧಿಸಿದಂತೆ ಎಲ್ಲ ವಿವರಗಳನ್ನು ತಮ್ಮ ಸಂಸ್ಥೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿರುವ ಕಡತದಲ್ಲಿ ನಮೂದಿಸಲಾಗಿದೆ. ಇದು ನಿಯಮ ಉಲ್ಲಂಘನೆ’ ಎಂದು ದೂರಿನಲ್ಲಿ
ಉಲ್ಲೇಖಿಸಲಾಗಿದೆ.

‘ಆಸ್ಪತ್ರೆಯಲ್ಲಿ ನಡೆಸಿರುವ ಗರ್ಭಪಾತ ಪ್ರಕರಣಗಳಿಗೆ ಪೂರಕ ದಾಖಲೆಗಳು (ಅಲ್ಮಾಸೌಂಡ್‌ ರಿಪೋರ್ಟ್‌ಗಳು) ಕೇಸ್‌ ಶೀಟ್‌ನಲ್ಲಿ ಲಭ್ಯ ಇರುವುದಿಲ್ಲ. ಗರ್ಭಪಾತ ನಡೆಸಿದ ತಿಂಗಳ ವಿವರಗಳನ್ನು ಇದುವರೆಗೂ ನಿಗದಿತ ನಮೂನೆಯಲ್ಲಿ ಜಿಲ್ಲಾ ಪ್ರಾಧಿಕಾರಕ್ಕೆ ಸಲ್ಲಿಸಿರುವುದಕ್ಕೆ ಆಸ್ಪತ್ರೆಯಲ್ಲಿ ಯಾವುದೇ ದಾಖಲೆ ಇಲ್ಲ’ ಎಂದು ದೂರಿನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.