ADVERTISEMENT

ಮಂಡ್ಯ | 2 ವರ್ಷಗಳ ನಂತರ ಕೆಆರ್‌ಎಸ್‌ ಜಲಾಶಯ ಭರ್ತಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 12:48 IST
Last Updated 24 ಜುಲೈ 2024, 12:48 IST
<div class="paragraphs"><p>ಮಂಡ್ಯಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯು&nbsp;ಎರಡು ವರ್ಷಗಳ ಬಳಿಕ ಇಂದು (ಬುಧವಾರ) ಸಂಜೆ ವೇಳೆಗೆ ಭರ್ತಿಯಾಗಿದೆ.</p></div>

ಮಂಡ್ಯಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯು ಎರಡು ವರ್ಷಗಳ ಬಳಿಕ ಇಂದು (ಬುಧವಾರ) ಸಂಜೆ ವೇಳೆಗೆ ಭರ್ತಿಯಾಗಿದೆ.

   

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆಯು ಎರಡು ವರ್ಷಗಳ ಬಳಿಕ ಬುಧವಾರ ಸಂಜೆ ವೇಳೆಗೆ ಭರ್ತಿಯಾಗಿದೆ.

ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗೆ ನೀರು ತಲುಪಿದೆ. ಜಲಾಶಯದಲ್ಲಿ ಪ್ರಸಕ್ತ 49.452 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದರಲ್ಲಿ 41.073 ಟಿಎಂಸಿ ಅಡಿ ಮಾತ್ರ ಉಪಯುಕ್ತ ಮಾಡಬಹುದಾಗಿದ್ದು, 8 ಟಿಎಂಸಿ ಅಡಿ ನೀರು ‘ಡೆಡ್‌ ಸ್ಟೋರೇಜ್‌’ ಎಂದು ಪರಿಗಣಿಸಲಾಗುತ್ತದೆ. 

ADVERTISEMENT

ಕಳೆದ ವರ್ಷ ಭೀಕರ ಬರಗಾಲದಿಂದ ಅಣೆಕಟ್ಟೆ ತುಂಬಿರಲಿಲ್ಲ. ಹೀಗಾಗಿ ರೈತರಿಗೆ ಬೇಸಿಗೆ ಬೆಳೆ ಬೆಳೆಯಲು ನಾಲೆಗಳಲ್ಲಿ ನೀರು ಬಿಟ್ಟಿರಲಿಲ್ಲ. ಇರುವ ನೀರನ್ನು ಕುಡಿಯುವುದಕ್ಕಾಗಿ ಮತ್ತು ತಮಿಳುನಾಡಿನ ಪಾಲು ಕೊಡುವುದಕ್ಕೆ ಬಳಸಲಾಗಿತ್ತು. ಈ ಬಾರಿ ಅಣೆಕಟ್ಟೆ ತುಂಬಿರುವುದರಿಂದ ಜಿಲ್ಲೆಯ ರೈತರು ಸಂತಸ ವ್ಯಕ್ತಪಡಿಸಿ, ಕಾವೇರಿ ಮಾತೆಯ ಮೂರ್ತಿಗೆ ಪೂಜೆ ಸಲ್ಲಿಸಿದ್ದಾರೆ.

ಜಲಾಶಯಕ್ಕೆ ಬುಧವಾರ 35,694 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಡ್ಯಾಂ ತುಂಬಿರುವ ಕಾರಣ ಅಷ್ಟೇ ಪ್ರಮಾಣದ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿದೆ. ಮಂಗಳವಾರ 11,827 ಕ್ಯೂಸೆಕ್‌ ಹೊರ ಹರಿವು ದಾಖಲಾಗಿತ್ತು. 

ಪ್ರವಾಹ ಮುನ್ನೆಚ್ಚರಿಕೆ:

ಕೃಷ್ಣರಾಜಸಾಗರ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಬರುತ್ತಿದ್ದು, ಕೃಷ್ಣರಾಜಸಾಗರ ಜಲಾಶಯದಿಂದ ಸುಮಾರು 30,000 ರಿಂದ 50,000 ಕ್ಯುಸೆಕ್‌ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು. ಈ ಪ್ರಮಾಣವು ಹೆಚ್ಚಾಗುವ ಸಂಭವವೂ ಇರುತ್ತದೆ.

ಆದ್ದರಿಂದ ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಮತ್ತು ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಎಚ್ಚರಿಕೆ ವಹಿಸಿ, ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಕೃಷ್ಣರಾಜಸಾಗರದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಜಯಂತ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.