ADVERTISEMENT

ಮಂಡ್ಯ | ‘ಜಾತಿ ಜನಗಣತಿ’ ವರದಿ ಜಾರಿಗೆ ಆಗ್ರಹ

ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ: ವೆಂಕಟಗಿರಿಯಯ್ಯ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 7:23 IST
Last Updated 19 ಜೂನ್ 2024, 7:23 IST
ಮಂಡ್ಯ ನಗರದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ‘ಸಾಮಾಜಿಕ ನ್ಯಾಯಕ್ಕಾಗಿ ಸಂಘರ್ಷ ರ‍್ಯಾಲಿ’ ನಡೆಸಿದರು 
ಮಂಡ್ಯ ನಗರದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ‘ಸಾಮಾಜಿಕ ನ್ಯಾಯಕ್ಕಾಗಿ ಸಂಘರ್ಷ ರ‍್ಯಾಲಿ’ ನಡೆಸಿದರು    

ಮಂಡ್ಯ: ‘ರಾಜ್ಯ ಸರ್ಕಾರವು, ಎಚ್. ಕಾಂತರಾಜ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ 'ಜಾತಿ ಜನಗಣತಿ’ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರಾಂತಿಕಾರಿ ನಾಯಕ ಪ್ರೊ.ಬಿ.ಕೃಷ್ಣಪ್ಪ ಅವರ 86ನೇ ಜನ್ಮದಿನೋತ್ಸವ ಮತ್ತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ವ್ಯವಸ್ಥೆ ಖಂಡನಾ ರ‍್ಯಾಲಿ ಹಾಗೂ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 

‘ಅಂಬೇಡ್ಕರ್ ಸೋಲಿಸಿದ ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಕುರಿತು ಮಾತನಾಡುವ ನೈತಿಕತೆಯಿಲ್ಲ. ರಾಜ್ಯ ಮತ್ತು ದೇಶದ ಜನರಿಗೆ ಕಾಂಗ್ರೆಸ್‌ನವರು ಜನರನ್ನು ದಿಕ್ಕು ತಪ್ಪಿಸುವ ಮೂಲಕ ಮಂಕುಬೂದಿ ಎರಚುತ್ತಿದ್ದಾರೆ’ ಎಂದು 

ADVERTISEMENT

ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಜನರಿಗೆ ಉಚಿತವಾಗಿ ಅಕ್ಕಿ ನೀಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರೇ ದಲಿತರಿಗೆ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಾಗಿ ಬಳಸಿದ್ದು ಸರಿಯೇ ಎಂದು ಪ್ರಶ್ನಿಸಿದರು. 

ದಲಿತ, ಶೋಷಿತ ತಳ ಸಮುದಾಯಗಳ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಅಭ್ಯುದಯಕ್ಕಾಗಿ ಶೇ 75ರ ಮೀಸಲಾತಿ ನೀಡಬೇಕು. ಕರ್ನಾಟಕ ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರವು ಕೇಂದ್ರ ಯೋಜನಾ ಆಯೋಗದ ನಿರ್ದೇಶನದಂತೆ ರಾಷ್ಟ್ರೀಯ ಎಸ್ಸಿ, ಎಸ್ಟಿ ಉಪಯೋಜನಾ ಕಾಯ್ದೆ ರೂಪಿಸಿ (ಆಂಧ್ರ-ಕರ್ನಾಟಕ ಸರ್ಕಾರಗಳಂತೆ) ಕೇಂದ್ರ ಬಜೆಟ್‌ನಲ್ಲಿ ಪರಿಶಿಷ್ಟರ ಜನಸಂಖ್ಯೆಗನುಗುಣವಾಗಿ ಅಭಿವೃದ್ಧಿ ಅನುದಾನದಲ್ಲಿ ಶೇ 30ರಷ್ಟು ಅನುದಾನ ಮೀಸಲಿಡುವ ರಾಷ್ಟ್ರೀಯ ಎಸ್ಸಿ– ಎಸ್ಟಿ ಉಪಯೋಗದ ಕಾಯ್ದೆ ರೂಪಿಸಿ, ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಸಮಾವೇಶದಲ್ಲಿ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಆನಂದ್, ರಂಗನಾಥ, ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ.ಅನಿಲ್ ಕುಮಾರ್, ಮುಖಂಡರಾದ ಶಿರಾ ಲೋಕೇಶ್, ಭಾಗ್ಯಮ್ಮ ಆತಗೂರು, ಹೊನ್ನಯ್ಯ ಟಿ.ಮಲ್ಲಿಗೆರೆ, ಎನ್.ಸಿ.ರಾಜು ನಿಡಘಟ್ಟ, ಸುರೇಶ್ ಮರಳಗಾಲ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.