ADVERTISEMENT

ಮಂಡ್ಯ: ಚಾಲಕ ಜಗದೀಶ್‌ ಸಾವು ಪ್ರಕರಣ; ಆಂಬುಲೆನ್ಸ್‌ ತಡೆದ ಜೆಡಿಎಸ್‌ ಮುಖಂಡ ಸುರೇಶ್‌ಗೌಡ

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 16:50 IST
Last Updated 11 ಜುಲೈ 2023, 16:50 IST

ಮಂಡ್ಯ: ಆತ್ಮಹತ್ಯೆಗೆ ಯತ್ನಿಸಿದ್ದ, ಸಾರಿಗೆ ಸಂಸ್ಥೆಯ ನಾಗಮಂಗಲ ಡಿಪೊ ಚಾಲಕ ಎಚ್‌.ಆರ್‌.ಜಗದೀಶ್‌ ಅವರನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ಜೆಡಿಎಸ್‌ ಮುಖಂಡ, ಮಾಜಿ ಶಾಸಕ ಸುರೇಶ್‌ಗೌಡ ಆಂಬುಲೆನ್ಸ್‌ ತಡೆದಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲೇನಿದೆ?

ಘಟನೆ ನಡೆದ ಜುಲೈ 5ರಂದು ಮಧ್ಯರಾತ್ರಿ 1 ಗಂಟೆಯ ವೇಳೆಯಲ್ಲಿ ನಾಗಮಂಗಲದ ಟಿ.ಬಿ.ವೃತ್ತದಲ್ಲಿ ಬರುತ್ತಿದ್ದ ಆಂಬುಲೆನ್ಸ್‌ ಅನ್ನು ಸುರೇಶ್‌ಗೌಡ ತಡೆಯುತ್ತಾರೆ. ನಂತರ ಆಂಬುಲೆನ್ಸ್‌ ಒಳಗೆ ತೆರಳುವ ಅವರು ‘ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ?’ ಎಂದು ಕೇಳುತ್ತಾರೆ. ಅಲ್ಲಿದ್ದವರು ‘ಮೈಸೂರಿನ ಮಣಿಪಾಲ್‌ ಆಸ್ಪತ್ರೆಗೆ’ ಎಂದು ಹೇಳುತ್ತಾರೆ. ಅದಕ್ಕೆ ಸುರೇಶ್‌ಗೌಡರು ‘ಇಲ್ಲಿಯೇ ಚಿಕಿತ್ಸೆ ನೀಡಲು ಸಾಧ್ಯವಿಲ್ಲವೇ?’ ಎಂದು ಪ್ರಶ್ನಿಸುತ್ತಾರೆ. ಈ ದೃಶ್ಯಗಳು ವಿಡಿಯೊದಲ್ಲಿ ದಾಖಲಾಗಿವೆ.

ADVERTISEMENT

‘ಚಾಲಕ ಜಗದೀಶ್‌ ಬದುಕಬಾರದೆಂಬ ಉದ್ದೇಶದಿಂದಲೇ ಸುರೇಶ್‌ಗೌಡ ಆಂಬುಲೆನ್ಸ್‌ ತಡೆದಿದ್ದಾರೆ. ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದಾರೆ.

ಈ ಕುರಿತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲಿ ಪ್ರಸ್ತಾಪಿಸಿ ಚಲುವರಾಯಸ್ವಾಮಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು.

ಸದನದಲ್ಲಿ ಉತ್ತರ ನೀಡಿದ್ದ ಚಲುವರಾಯಸ್ವಾಮಿ, ‘ಚಾಲಕ ಜಗದೀಶ್‌ಗೆ ಸಮರ್ಪಕ ಚಿಕಿತ್ಸೆ ಸಿಗಬಾರದೆಂಬ ಉದ್ದೇಶ ಜೆಡಿಎಸ್‌ ಮುಖಂಡರಿಗೆ ಇತ್ತು. ಅದಕ್ಕಾಗಿಯೇ ಎಚ್‌.ಡಿ.ಕುಮಾರಸ್ವಾಮಿ ಆದಿಚುಂಚನಗಿರಿ ಆಸ್ಪತ್ರೆಗೆ ಕರೆ ಮಾಡಿ ತಾನು ಬರುವವರೆಗೂ ಚಾಲಕನನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಬಾರದು ಎಂದು ತಿಳಿಸಿದ್ದರು, ಮಾಜಿ ಶಾಸಕ ಸುರೇಶ್‌ಗೌಡ ಮಧ್ಯರಾತ್ರಿಯಲ್ಲಿ ಆಂಬುಲೆನ್ಸ್‌ ತಡೆದಿದ್ದರು’ ಎಂದು ತಿಳಿಸಿದ್ದರು.

‘ಆಂಬುಲೆನ್ಸ್‌ ತಡೆದಿರುವುದನ್ನು ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತನಾಗುತ್ತೇನೆ’ ಎಂದು ಸುರೇಶ್‌ಗೌಡ ಸವಾಲು ಹಾಕಿದ್ದರು. ‘ಇದೀಗ ಆಂಬುಲೆನ್ಸ್‌ ತಡೆದಿರುವ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸುರೇಶ್‌ಗೌಡರು ನಿವೃತ್ತಿ ಘೋಷಿಸಬೇಕು’ ಎಂದು ಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದ್ದಾರೆ.

ಆಡಿಯೊ ವೈರಲ್‌

ಈ ನಡುವೆ ಆಂಬುಲೆನ್ಸ್‌ ಚಾಲಕ ಹಾಗೂ ವ್ಯಕ್ತಿಯೊಬ್ಬರು ಮಾತನಾಡಿರುವ ಆಡಿಯೊ ಕೂಡ ಹರಿದಾಡಿತ್ತು. ಅದರಲ್ಲಿ ‘ಸುರೇಶ್‌ಗೌಡರು ಆಂಬುಲೆನ್ಸ್‌ ತಡೆಯಲಿಲ್ಲ, ಕೇವಲ ಆರೋಗ್ಯ ವಿಚಾರಿಸಿದರು’ ಎಂದು ಆಂಬುಲೆನ್ಸ್‌ ಚಾಲಕ ಹೇಳಿದ್ದಾರೆ.

ಸಿಐಡಿ ತನಿಖೆ

ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿ ವಹಿಸಿದ್ದು ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌ ನೇತೃತ್ವದ ತಂಡ ನಾಗಮಂಗಲದಲ್ಲಿ ಬೀಡು ಬಿಟ್ಟಿದೆ. ಸಾರಿಗೆ ಸಂಸ್ಥೆ ಅಧಿಕಾರಿಗಳು, ವೈದ್ಯರನ್ನು ವಿಚಾರಣೆಗೆ ಒಳಪಡಿಸಿದೆ.

‘ಸಿಐಡಿ ವಿಚಾರಣೆ ಪ್ರಗತಿಯಲ್ಲಿದ್ದು ಪೊಲೀಸರಿಗೆ ಸಹಕಾರ ನೀಡುತ್ತಿದ್ದೇವೆ’ ಎಂದು ಸಾರಿಗೆ ಸಂಸ್ಥೆ ಉಪ ವಿಭಾಗಾಧಿಕಾರಿ ನಾಗರಾಜ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.