ಮಂಡ್ಯ: ‘ಬಿಜೆಪಿಯಲ್ಲಿರುವುದೇ ನನಗೆ ದೊಡ್ಡ ಸ್ಥಾನಮಾನ, ಮಂಡ್ಯ ಲೋಕಸಭಾ ಕ್ಷೇತ್ರವನ್ನೇ ತ್ಯಾಗ ಮಾಡಿದ್ದೇನೆ. ಹಾಗಾಗಿ ಯಾವುದೇ ಸ್ಥಾನಮಾನ ಆಸೆಯಿಲ್ಲ. ಅದರ ಆಕಾಂಕ್ಷಿಯೂ ನಾನಲ್ಲ’ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ನಗರದಲ್ಲಿ ಶುಕ್ರವಾರ ಬಿಜೆಪಿಯು ವಕ್ಫ್ ಮಂಡಳಿ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಅಂಬರೀಷ್ ಕುಟುಂಬ ತ್ಯಾಗಮಯಿ ಕುಟುಂಬ, ಚಿತ್ರರಂಗದಲ್ಲಿ ಅಭಿಮಾನಿಗಳು ದೊಡ್ಡ ಗೌರವ ನೀಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅಂಬರೀಷ್ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ನನ್ನನ್ನು ಮಂಡ್ಯ ಕ್ಷೇತ್ರದ ಜನತೆ ಸಂಸದರಾಗಿ ಆಯ್ಕೆ ಮಾಡಿದ್ದರು. ಇಷ್ಟೊಂದು ಸ್ಥಾನಮಾನ ದೊರಕಿದೆ, ಸ್ಥಾನಮಾನ ಪಡೆಯಬೇಕೆಂಬ ದುರಾಸೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಪಕ್ಷದಲ್ಲಿ ಇರುವುದೇ ನನಗೆ ದೊಡ್ಡ ಸ್ಥಾನಮಾನ ಹಾಗೂ ಗೌರವ, ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು, ಜನಪರ ಆಡಳಿತ ನೀಡುತ್ತಿದ್ದಾರೆ, ಅವರ ಕೆಲಸವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡುವ ಉದ್ದೇಶ ಹೊಂದಿದ್ದೇನೆ ಎಂದರು.
ರೈತರು, ಮಠ, ಹಾಗೂ ದೇವಾಲಯದ ಆಸ್ತಿ ಕಬಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಡ ಜನರ ಪಡಿತರ ಚೀಟಿ ರದ್ದು ಮಾಡುತ್ತಿದೆ. ಆ ಮೂಲಕ ಸವಲತ್ತುಗಳನ್ನು ಕಸಿಯುತ್ತಿದೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.