ADVERTISEMENT

ಮಂಡ್ಯ: ಸೂಳೆಕೆರೆಗೆ ಕಾರ್ಖಾನೆ ತ್ಯಾಜ್ಯ ನೀರು

ರೈತರಿಗೆ ಚರ್ಮ ರೋಗ ಹೆಚ್ಚಳ, ಜಲಚರಗಳಿಗೆ ಕಂಟಕ– ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 5:12 IST
Last Updated 6 ನವೆಂಬರ್ 2024, 5:12 IST
<div class="paragraphs"><p>ಮಂಡ್ಯ ತಾಲ್ಲೂಕಿನ ಕನ್ನಲಿ ಸೂಳೆ ಕೆರೆ ಕಾರ್ಖಾನೆ ತ್ಯಾಜ್ಯ ನೀರಿನಿಂದ ಕಲುಷಿತಗೊಂಡಿರುವುದು(ಎಡಚಿತ್ರ). ಕೆರೆಯಿಂದ ತ್ಯಾಜ್ಯ ನೀರು ಕೃಷಿ ಭೂಮಿಗೆ ನಾಲೆಯಲ್ಲಿ ಹರಿಯುತ್ತಿರುವುದು</p></div>

ಮಂಡ್ಯ ತಾಲ್ಲೂಕಿನ ಕನ್ನಲಿ ಸೂಳೆ ಕೆರೆ ಕಾರ್ಖಾನೆ ತ್ಯಾಜ್ಯ ನೀರಿನಿಂದ ಕಲುಷಿತಗೊಂಡಿರುವುದು(ಎಡಚಿತ್ರ). ಕೆರೆಯಿಂದ ತ್ಯಾಜ್ಯ ನೀರು ಕೃಷಿ ಭೂಮಿಗೆ ನಾಲೆಯಲ್ಲಿ ಹರಿಯುತ್ತಿರುವುದು

   

ಮಂಡ್ಯ: ಹತ್ತಾರು ಹಳ್ಳಿಗಳಿಗೆ ಆಸರೆಯಾಗಿರುವ ಕನ್ನಲಿ ಗ್ರಾಮದ ಸೂಳೆ ಕೆರೆಗೆ  ತ್ಯಾಜ್ಯ ಮಿಶ್ರಿತ ನೀರು ಹರಿದು ಬರುತ್ತಿರುವುದರಿಂದ ರೈತರಿಗೆ ಕೃಷಿ ಮಾಡಲು ತೊಡಕಾಗುತ್ತಿದೆ. ಜನ, ಜಾನುವಾರು ರೋಗ  ಭೀತಿ ಎದುರಿಸುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.

  ಕನ್ನಲಿ ಗ್ರಾಮದಲ್ಲಿರುವ 900 ಎಕರೆಗೂ ಹೆಚ್ಚು ವಿಸ್ತೀರ್ಣದ ಸೂಳೆಕೆರೆ, ಮದ್ದೂರು ತಾಲ್ಲೂಕಿನ ಮುಟ್ಟನಹಳ್ಳಿ, ದೊಡ್ಡರಸಿನಕೆರೆ, ಚಿಕ್ಕರಸಿನಕೆರೆ, ಕ್ಯಾತಘಟ್ಟ, ಉಣ್ಣನದೊಡ್ಡಿ, ಸುಣ್ಣದೊಡ್ಡಿ, ಸಾದೊಳಲು, ಭೊರಾ ಪುರ, ಗೌಡಯ್ಯನದೊಡ್ಡಿ, ಗುಡಿಗೆರೆ, ಬಿದರ ಹೊಸ ಹಳ್ಳಿ, ಮಣಿಗೆರೆ, ದೇವರಹಳ್ಳಿ, ಬೊಮ್ಮನದೊಡ್ಡಿ, ಆಲಭುಜನಹಳ್ಳಿ, ಕೆ.ಎಂ.ದೊಡ್ಡಿ, ಅಣ್ಣೂರು ಗ್ರಾಮಗಳ ರೈತರಿಗೂ  ಜೀವನಾಡಿಯಾಗಿದೆ. 

ADVERTISEMENT

ಕಾರ್ಖಾನೆ ತ್ಯಾಜ್ಯ: ‘1 ಸಾವಿರ ಮೀಟರ್‌ನಷ್ಟು ಉದ್ದನೆಯ ಏರಿ ಒಳಗೊಂಡಿದೆ.  ಏಳು ಗ್ರಾಮಗಳ ಜನ ಜಾನುವಾರು ಈ ಕೆರೆಯ ನೀರನ್ನು ಬಳಸುತ್ತಿದ್ದಾರೆ. ಮೈಷುಗರ್‌ ಕಾರ್ಖಾನೆಯಿಂದ ಹೊರ ಬಿಡುವ ತ್ಯಾಜ್ಯ ಮಿಶ್ರಣ ನೀರು 6 ತಿಂಗಳಿನಿಂದ ಕೆರೆಗೆ ಹರಿಯುತ್ತಿದೆ.  900 ಎಕರೆಗೂ ಹೆಚ್ಚು ಕೃಷಿ ಜಮೀನುಗಳಲ್ಲಿ ಬೆಳೆ ಬೆಳೆಯಲು ಆಗುತ್ತಿಲ್ಲ’ ಎಂದು ಕನ್ನಲಿ ಗ್ರಾಮದ ರೈತ ಮನು ಆತಂಕ ವ್ಯಕ್ತಪಡಿಸಿದರು.

‘ನಗರದ ಮೈಷುಗರ್‌ ಕಾರ್ಖಾನೆಯಿಂದ ಹರಿಯುವ ನೀರು  12 ಕಿ.ಮೀ. ದೂರದಲ್ಲಿರುವ ಕನ್ನಲಿ ಗ್ರಾಮದ ಸೂಳೆಕೆರೆಗೆ ಬಂದು ಸೇರುತ್ತದೆ. ಕೆರೆಯಲ್ಲಿರುವ ನೀರು ಕಲುಷಿತಗೊಂಡು ಜಲಚರಗಳು ಪ್ರಾಣ ಬಿಡುತ್ತಿವೆ.  ಮೀನುಗಳೂ ಆಗಿಂದಾಗ್ಗೆ ಸಾವನ್ನಪ್ಪುತ್ತಿರುತ್ತವೆ.  ಮೀನಿನ ವ್ಯಾಪಾರಕ್ಕೆ ಸಂಚಾರ ಬರುತ್ತದೆ ಎಂಬ  ಭಯದಿಂದ ಸತ್ತ ಮೀನುಗಳನ್ನು ಸದ್ದಿಲ್ಲದೆ  ಬೇರೆಡೆ ಬಿಸಾಕಿ ಕೈತೊಳೆದುಕೊಳ್ಳುತ್ತಾರೆ. ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ, ಚರ್ಮ ರೋಗಗಳು ಹೆಚ್ಚುತ್ತಿವೆ’ ಎಂದು ಗ್ರಾಮದ ರೈತ ಮುಖಂಡರಾದ ಕೃಷ್ಣಪ್ಪ, ಪ್ರವೀಣ್‌ಕುಮಾರ್‌, ಜಗದೀಶ್‌, ಬಸವರಾಜು, ನವೀನ್‌ಕುಮಾರ್, ಬೊಮ್ಮೇಶ್‌ ಆರೋಪಿಸುತ್ತಾರೆ.

ಒತ್ತುವರಿ ವ್ಯಾಪಕ:  ಸೂಳೆಕೆರೆಯ ಸ್ಥಳವನ್ನು ಒತ್ತುವರಿ ಮಾಡಿಕೊಂಡಿರುವುದು ಹೆಚ್ಚಿದೆ.ಕೆರೆಯ ವಿಸ್ತೀರ್ಣ ಚಿಕ್ಕದಾಗುತ್ತಿದೆ. ಒಂದೆಡೆ ನೀರು ಕಪ್ಪು ಹಿಡಿದು ಕೊಳಕಾಗುತ್ತಿದ್ದರೆ ಮತ್ತೊಂದೆಡೆ ಕೆರೆ ಏರಿಯ ಸುತ್ತಲೂ ಗಿಡಗಂಟಿ ಬೆಳೆದು ಕೆರೆ ಮುಚ್ಚಿಹೋಗುತ್ತಿದೆ. 

‘ರೈತರು ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸೂಳೆಕೆರೆ ಸಂರಕ್ಷಣೆಗೆ ಮುಂದಾಗಿ ಇದನ್ನೇ ನಂಬಿಕೊಂಡಿರುವ ರೈತರನ್ನು ಉಳಿಸಬೇ’ಕು ಎಂದು ಗ್ರಾಮದ ಮುಖಂಡರಾದ ಮಹೇಶ್‌, ರಾಜಶೇಖರ್‌ ಒತ್ತಾಯಿಸಿದರು.

ಸೂಳೆ ಕೆರೆಯಿಂದ ತ್ಯಾಜ್ಯ ನೀರು ಕೃಷಿ ಭೂಮಿಗೆ ನಾಲಾ ಮುಖಾಂತರ ಹರಿಯುತ್ತಿರುವುದು

ನಮ್ಮ ವ್ಯಾಪ್ತಿಗೆ ಬರಲ್ಲ: ನೀರಾವರಿ ಇಲಾಖೆ

‘ತ್ಯಾಜ್ಯ ನೀರು ಹರಿಸಲು ಮೈಷುಗರ್‌ ಕಾರ್ಖಾನೆಯವರು ಸಂಬಂಧಪಟ್ಟ ಇಲಾಖೆಯಿಂದ ಒಪ್ಪಿಗೆ ಪಡೆದುಕೊಂಡಿದ್ದಾರೆ ಎಂಬುವ ಮಾಹಿತಿ ಇದೆ.  ಡಿ.ಸಿ.ತಮ್ಮಣ್ಣ ಮದ್ದೂರಿನ ಶಾಸಕರಾಗಿದ್ದ ಆಡಳಿತದಲ್ಲಿ ಭೂತನಹೊಸೂರು ಬಳಿ ತ್ಯಾಜ್ಯ ನೀರು ಸಂಗ್ರಹಿಸಿ ಅದನ್ನು ಫಿಲ್ಟರ್‌ ಮಾಡಿ ಹರಿಸುವ ಯೋಜನೆಯಿತ್ತು. ಆದರೆ ಏನಾಗಿದೆ ಎಂಬುದು ಗೊತ್ತಿಲ್ಲ. ಕಾರ್ಖಾನೆಯಿಂದ ಹರಿಯುವ ತ್ಯಾಜ್ಯ ನೀರು ನಮ್ಮ ಕಾರ್ಯ ವ್ಯಾಪ್ತಿಗೆ ಬರದಿರುವ ಕಾರಣ ತಡೆಗಟ್ಟುವುದು ಕಷ್ಟ. ಆದರೆ ತಹಶೀಲ್ದಾರ್‌ಗಳ ಗಮನಕ್ಕೆ ತಂದು ಸರಿಪಡಿಸುವ ಕೆಲಸ ಮಾಡುತ್ತೇವೆ’ ಎಂದು ನೀರಾವರಿ ಇಲಾಖೆಯ ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

‘ಮೈಷುಗರ್‌ ಬದಲಿ ವ್ಯವಸ್ಥೆ ಮಾಡಲಿ’

‘ನಮ್ಮೂರಿನ ಕೆರೆಗೆ ‘ಸೂಳೆ ಕರೆ’ ಎಂಬ ಹೆಸರನ್ನು ನಮ್ಮ ಹಿರಿಯರು ನಾಮಕರಣ ಮಾಡಿದ್ದಾರೆ. ಆದರೆ ಸಂಪೂರ್ಣ ಇತಿಹಾಸ ನಮಗೆ ಲಭ್ಯವಿಲ್ಲ, ಮುತ್ತಾತನ ಕಾಲದಿಂದಲೂ ಸೂಳೆ ಕೆರೆ ಎಂದೇ ಕರೆಯಲಾಗುತ್ತಿದೆ.  ಉತ್ತರ ನಾಲೆಯಿಂದ 3,600 ಹೆಕ್ಟೇರ್‌ ಪ್ರದೇಶಕ್ಕೆ ಹಾಗೂ ದಕ್ಷಿಣ ದಿಕ್ಕಿನಿಂದ 3,800ಕ್ಕೂ ಹೆಚ್ಚು ಹೆಕ್ಟೇರ್‌ ಕೃಷಿ ಪ್ರದೇಶಕ್ಕೆ ನೀರು ಬಳೆಕೆಯಾಗುತ್ತಿರುವುದರಿಂದ ಮೈಷುಗರ್ ಕಾರ್ಖಾನೆಯಿಂದ ಹರಿಯುವ ತ್ಯಾಜ್ಯ ನೀರು ನಿಲ್ಲಿಸಿ, ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲಿ’ ಎಂದು ರೈತ ಮುಖಂಡ ಕನ್ನಲಿ ನವೀನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.