ADVERTISEMENT

ಎನ್‌.ಅಪ್ಪಾಜಿಗೌಡರು ಮನ್‌ಮುಲ್‌ ಅಧ್ಯಕ್ಷ ಸ್ಥಾನ ಕೇಳಿಲ್ಲ: ಸಚಿವ ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 16:16 IST
Last Updated 19 ಫೆಬ್ರುವರಿ 2024, 16:16 IST
ನಾಗಮಂಗಲ ತಾಲ್ಲೂಕಿನ ಕುಂಟಾನುಕೊಪ್ಪಲು ಗ್ರಾಮದ ಮದ್ದೇನಹಟ್ಟಮ್ಮ ದೇವಿಯ ನೂನತ ದೇವಸ್ಥಾನ ಮತ್ತು ವಿಮಾನ ಗೋಪುರ ಪ್ರಧಾನ ಕಳಸ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಜೆಡಿಎಸ್‌ ಮುಖಂಡ ಎನ್.ಅಪ್ಪಾಜಿಗೌಡ ಅಭಿನಂದಿಸಿದರು
ನಾಗಮಂಗಲ ತಾಲ್ಲೂಕಿನ ಕುಂಟಾನುಕೊಪ್ಪಲು ಗ್ರಾಮದ ಮದ್ದೇನಹಟ್ಟಮ್ಮ ದೇವಿಯ ನೂನತ ದೇವಸ್ಥಾನ ಮತ್ತು ವಿಮಾನ ಗೋಪುರ ಪ್ರಧಾನ ಕಳಸ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಜೆಡಿಎಸ್‌ ಮುಖಂಡ ಎನ್.ಅಪ್ಪಾಜಿಗೌಡ ಅಭಿನಂದಿಸಿದರು   

ನಾಗಮಂಗಲ: ‘ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವ ಜೆಡಿಎಸ್‌ ಮುಖಂಡ ಎನ್‌.ಅಪ್ಪಾಜಿಗೌಡ ಅವರು ಮನ್‌ಮುಲ್‌ ಅಧ್ಯಕ್ಷ ಸ್ಥಾನ ಕೇಳಿಲ್ಲ, ನಾವು ಸಹ ಎಲ್ಲಿಯೂ ಘೋಷಣೆ ಮಾಡಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ತಾಲ್ಲೂಕಿನ ದೇವಲಾಪುರ ಹೋಬಳಿಯ ಕುಂಟಾನುಕೊಪ್ಪಲು ಗ್ರಾಮದ ಮದ್ದೇನಹಟ್ಟಮ್ಮ ದೇವಿಯ ನೂನತ ದೇವಸ್ಥಾನ ಮತ್ತು ವಿಮಾನ ಗೋಪುರ ಪ್ರಧಾನ ಕಳಸ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು.

ಅಪ್ಪಾಜಿಗೌಡ ಅವರು ಕಾಂಗ್ರೆಸ್‌ ಸೇರ್ಪಡೆಯಾಗುವ ವಿಷಯ ಸದ್ಯದಲ್ಲಿಯೇ ಎಲ್ಲರಿಗೂ ಗೊತ್ತಾಗಲಿದೆ. ಅವರು ನಮ್ಮ ಹಿತೈಷಿಗಳು, ಮೊದಲಿನಿಂದಲೂ ನಮ್ಮ ಜತೆಗಿದ್ದವರು, ವಿಶ್ವಾಸಿಗಳು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡೆ, ಆದರೆ ಅವರು ಜೆಡಿಎಸ್ ಪಕ್ಷದಲ್ಲಿಯೇ ಉಳಿದುಕೊಂಡಿದ್ದರು. ಅವರು ಈಗ ನಮ್ಮ ಪಕ್ಷಕ್ಕೆ ಬರುವುದರಲ್ಲಿ ತಪ್ಪೇನಿಲ್ಲ? ನಮ್ಮ ಅವರ ವಿಶ್ವಾಸ ಯಾವತ್ತು ಕೆಡದಿರುವುದರಿಂದ ನಮ್ಮ ಜತೆ ಬರುವುದರಲ್ಲಿ ತಪ್ಪೇನಿದೆ. ಬಹುತೇಕ ಆದಷ್ಟು ಬೇಗ ಇದಕ್ಕೆ ಫಲ ಸಿಗಲಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ದೇಶದ ಯಾವ ರಾಜ್ಯದವರಾದರೂ ಸ್ಪರ್ಧಿಸಬಹುದು. ಆದರೆ ನಮ್ಮ ನಿರ್ಣಯ ನಮ್ಮ ಜಿಲ್ಲೆಯ ಜನರಿಗೆ ಗೊತ್ತಿರುವಂತಹ ಜಿಲ್ಲೆಯವರೇ ಸ್ಪರ್ಧಿಸಬೇಕು ಎನ್ನುವುದಾಗಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಜನರ ಪ್ರೀತಿಗಳಿಸಿದೆ. ಈ ಬಾರಿ ಜನತೆ ಕಾಂಗ್ರೆಸ್‌ ಸರ್ಕಾರದ ಕೈಹಿಡಿಯಲಿದ್ದಾರೆ. ಜನರನ್ನು ಪ್ರೀತಿಸುವ ಸರ್ಕಾರವನ್ನು ಜನರು ಪ್ರೀತಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪ್ರಬಲ ಆಕಾಂಕ್ಷಿಯಾಗಿದ್ದು ಪಕ್ಷ ಅಂತಿಮವಾಗಿ ತೀರ್ಮಾನಿಸಲಿದೆ. ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನಗಳನ್ನು ಘೋಷಣೆ ಮಾಡಿದ್ದಾರೆ. ಇದುವರೆಗೂ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಕೊಡುಗೆಯನ್ನು ಬೇರೆ ಯಾರೂ ನೀಡಿಲ್ಲ’ ಎಂದರು.

ಜೆಡಿಎಸ್‌ ಮುಖಂಡ ಎನ್.ಅಪ್ಪಾಜಿಗೌಡ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡ ವೆಂಕಟರಮಣೇಗೌಡ(ಸ್ಟಾರ್‌ ಚಂದ್ರು), ಸಂಪತ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.