ಮಂಡ್ಯ: ‘87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಲೋಕದ ದಿಗ್ಗಜರೇ ಅಧ್ಯಕ್ಷರಾಗಬೇಕು. ಸಾಹಿತ್ಯೇತರರನ್ನು ಆಯ್ಕೆ ಮಾಡಿದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಮಂಡ್ಯ ಸಾಹಿತ್ಯಾಸಕ್ತರ ಬಳಗದವರು ಎಚ್ಚರಿಕೆ ನೀಡಿದರು.
ನಗರದಲ್ಲಿ ಮಂಗಳವಾರ ಪ್ರತಿಭಟನಾ ಜಾಥಾ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಜಗದೀಶ ಕೊಪ್ಪ ಮಾತನಾಡಿ, ‘ಕಸಾಪ ಮಹೇಶ ಜೋಶಿ ಅವರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ಇವರ ಹುಚ್ಚಾಟಕ್ಕೆ ತಾಳ ಹಾಕುತ್ತಿರುವ ಸರ್ಕಾರದ ಧೋರಣೆಗೆ ನಮ್ಮ ವಿರೋಧವಿದೆ. ಸಾಹಿತ್ಯೇತರರು ಸಮ್ಮೇಳನಾಧ್ಯಕ್ಷರಾಗುವುದನ್ನು ಸಂಪೂರ್ಣ ವಿರೋಧಿಸುತ್ತೇವೆ. ಆಗಲು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ’ ಎಂದು ಹೇಳಿದರು.
‘ವಿವಿಧ ಕ್ಷೇತ್ರಗಳ ಸಾಧಕರನ್ನು ಕರೆದು ಸಮ್ಮೇಳನದಲ್ಲಿ ಸನ್ಮಾನಿಸಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಕಲ್ಲಡ್ಕ ಪ್ರಭಾಕರ್, ಪ್ರಮೋದ್ ಮುತಾಲಿಕ್ ಅಂಥವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದರೆ ಒಪ್ಪಲು ಸಾಧ್ಯವೇ?. ದೇವೇಗೌಡ, ಎಸ್.ಎಂ.ಕೃಷ್ಣ ಅವರ ಹೆಸರನ್ನು ತೇಲಿ ಬಿಟ್ಟಿದ್ದಾರೆ. ಪುಣ್ಯಕ್ಕೆ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಹೇಳಿಲ್ಲ’ ಎಂದು ವ್ಯಂಗ್ಯವಾಡಿದರು.
ಟಿಪ್ಪು ಕೊಡುಗೆ ಸ್ಮರಿಸಲಿ:
ಅಮೇರಿಕದಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ಅವರ ಮೊಮ್ಮಗಳನ್ನು ಗುರುತಿಸಿ ಸಮ್ಮೇಳನಕ್ಕೆ ಆಹ್ವಾನಿಸಿರುವುದು ಅಧ್ಯಕ್ಷರಿಗೆ ಒಂದು ರೀತಿ ಸಾಧನೆಯಾಗಿರುವಂತೆ ಬಿಂಬಿಸುತ್ತಾರೆ. ಕನ್ನಂಬಾಡಿ ಅಣೆಕಟ್ಟೆ ಕಟ್ಟಲು ಬರೋಬ್ಬರಿ ಒಂದೂವರೆ ಕ್ವಿಂಟಲ್ ಚಿನ್ನ ಮಾರಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸುತ್ತಿಲ್ಲ. ಜೊತೆಗೆ ಜಿಲ್ಲೆಗೆ ಕೊಡುಗೆ ನೀಡಿದ ಟಿಪ್ಪು, ಶೇಷಾದ್ರಿ ಅಯ್ಯರ್ ಅವರ ಮರಿಮಕ್ಕಳು ಇಲ್ಲೇ ಇದ್ದಾರೆ. ಅವರನ್ನೇಕೆ ಆಹ್ವಾನಿಸಲಿಲ್ಲ, ಏನಾದರೂ ಸರಿ ಟಿಪ್ಪು ಅವರ ಸಾಧನೆಗಳನ್ನು ಸಮ್ಮೇಳನದ ಗೋಷ್ಠಿಯಲ್ಲಿ ವಿಷಯವಾಗಿ ಸೇರಿಸಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನದಲ್ಲಿ ‘ಜಾತ್ರೆ’ ಎನ್ನುವ ಪದವೇ ಬರಬಾರದು. ಸಮ್ಮೇಳನಕ್ಕೆ ₹30 ಕೋಟಿ ಖರ್ಚು ಮಾಡುವ ಅಗತ್ಯವಿದೆಯೇ? ಎಷ್ಟು ಸರ್ಕಾರಿ ಶಾಲೆಗಳ ಸೂರು ಸರಿ ಇದೆ? ಸಮ್ಮೇಳನದ ಸಮಸ್ತ ಖರ್ಚು ವೆಚ್ಚಗಳ ‘ಸೋಷಿಯಲ್ ಆಡಿಟ್’ ಆಗಬೇಕು ಎಂದು ಒತ್ತಾಯಿಸಿದರು.
‘ಮಠಾಧಿಪತಿಗಳನ್ನೋ, ರಾಜಕಾರಣಿಗಳನ್ನೋ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದು ಸಾಹಿತ್ಯ ಪರಿಷತ್ತಿಗೆ ಶೋಭೆ ತರುವುದಿಲ್ಲ. ಈ ಸಮ್ಮೇಳನವು ರಾಜಕಾರಣಿಗಳ ಅಥವಾ ಮಠಾಧೀಶರ ಸಮ್ಮೇಳನವಲ್ಲ’ ಎಂದು ಕಿಡಿಕಾರಿದರು.
ಸಾಹಿತಿಗಳಾದ ಪ್ರೊ.ಜಿ.ಟಿ. ವೀರಪ್ಪ, ಚಿಕ್ಕಮರಳಿ ಬೋರೇಗೌಡ, ಮುಖಂಡರಾದ ಗುರುಪ್ರಸಾದ್ ಕೆರಗೋಡು, ಸಿ.ಕುಮಾರಿ, ಬಿ.ಟಿ.ವಿಶ್ವನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.