ADVERTISEMENT

ಕೆ.ಆರ್‌.ಎಸ್‌: ಟ್ರಯಲ್‌ ಬ್ಲಾಸ್ಟ್‌ ನಡೆಸಿದರೆ ರೈತ ಸಂಘದಿಂದ ಉಗ್ರ ಹೋರಾಟ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 13:44 IST
Last Updated 29 ಜೂನ್ 2024, 13:44 IST
<div class="paragraphs"><p>ಮಂಡ್ಯ ನಗರದ ಗಾಂಧಿ ಭವನದಲ್ಲಿ&nbsp;ಶನಿವಾರ ಜಿಲ್ಲಾ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಕೆ.ಆರ್‌.ಎಸ್ ಜಲಾಶಯದ ವ್ಯಾಪ್ತಿಯಲ್ಲಿ ಸರ್ಕಾರ ನಡೆಸಲು ಉದ್ದೇಶಿಸಿರುವ ಟ್ರಯಲ್ ಬ್ಲಾಸ್ಟ್ ಬಗ್ಗೆ ಚಿಂತನ ಮಂಥನ ಸಭೆ ನಡೆಸಿದರು</p></div>

ಮಂಡ್ಯ ನಗರದ ಗಾಂಧಿ ಭವನದಲ್ಲಿ ಶನಿವಾರ ಜಿಲ್ಲಾ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಕೆ.ಆರ್‌.ಎಸ್ ಜಲಾಶಯದ ವ್ಯಾಪ್ತಿಯಲ್ಲಿ ಸರ್ಕಾರ ನಡೆಸಲು ಉದ್ದೇಶಿಸಿರುವ ಟ್ರಯಲ್ ಬ್ಲಾಸ್ಟ್ ಬಗ್ಗೆ ಚಿಂತನ ಮಂಥನ ಸಭೆ ನಡೆಸಿದರು

   

ಮಂಡ್ಯ: ‘ರಾಜ್ಯ ಸರ್ಕಾರವು ಕೆ.ಆರ್‌.ಎಸ್‌. ಜಲಾಶಯದ ಸುತ್ತಮುತ್ತ ಟ್ರಯಲ್‌ ಬ್ಲಾಸ್ಟ್‌ಗೆ ಅವಕಾಶ ನೀಡಬಾರದು. ತಕ್ಷಣವೇ ‘ಅಣೆಕಟ್ಟು ಸುರಕ್ಷತಾ ಕಾಯ್ದೆ’ ಜಾರಿಗೆ ತಂದು ರೈತರನ್ನು ಉಳಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ಶನಿವಾರ ಜಿಲ್ಲಾ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಕೆ.ಆರ್‌.ಎಸ್. ಜಲಾಶಯದ ವ್ಯಾಪ್ತಿಯಲ್ಲಿ ಸರ್ಕಾರ ನಡೆಸಲು ಉದ್ದೇಶಿಸಿರುವ ಟ್ರಯಲ್ ಬ್ಲಾಸ್ಟ್ ಬಗ್ಗೆ ಚಿಂತನ ಮಂಥನ ಸಭೆ ನಡೆಸಿದರು.

ADVERTISEMENT

ಗಣಿಗಾರಿಕೆಯವರ ಒತ್ತಾಯಕ್ಕೆ ಮಣಿದು ಟ್ರಯಲ್‌ ಬ್ಲಾಸ್ಟ್‌ಗೆ ಮುಂದಾದರೆ ಕೆ.ಆರ್‌.ಎಸ್‌. ವ್ಯಾಪ್ತಿಯ ರೈತರನ್ನು ಸೇರಿಸಿಕೊಂಡು ಪ್ರತಿಭಟನೆ ನಡೆಸಲಾಗುವುದು. ಇಂತಹ ಹೋರಾಟವನ್ನು ಲಘುವಾಗಿ ಪರಿಗಣಿಸಬಾರದು. ಪ್ರಮುಖ ಮುಖಂಡರ ಜೊತೆ ಚರ್ಚಿಸಿಯೇ ತೀರ್ಮಾನಿಸಲಾಗಿದೆ. ಟ್ರಯಲ್‌ ಬ್ಲಾಸ್ಟ್‌ನಿಂದ ಯಾರಿಗೆ ಅನುಕೂಲ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಬೇಕು. ಹಾಗೆಯೇ ಇದನ್ನು ವೈಜ್ಞಾನಿಕವಾಗಿಯೂ ತೋರಿಸಬೇಕು ಎಂದು ಆಗ್ರಹಿಸಿದರು.

ಪ್ರಗತಿಪರ ಚಿಂತಕ ನಂಜರಾಜೇ ಅರಸ್ ಮಾತನಾಡಿ, ಅಧಿಕಾರಿಗಳಿಗೆ ಗಣಿಗಾರಿಕೆ ಬಗ್ಗೆ ಮೃದು ಧೋರಣೆ ಇದೆ. ಅಧಿಕಾರಿಗಳು ಏನೂ ಆಗಲ್ಲ ಅಂತಾರೆ? ಒಂದು ದಿನ ಟ್ರಯಲ್ ಬ್ಲಾಸ್ಟ್ ಮಾಡಿದರೆ ಏನೂ ಆಗಲ್ಲ. ಅನುಮತಿ ಸಿಕ್ಕ ನಂತರ 24 ಗಂಟೆನೂ ಗಣಿಗಾರಿಕೆ ನಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜನರನ್ನು ಬಲಿ ಕೊಡುವ ಈ ವ್ಯವಸ್ಥೆಯನ್ನು ವಿರೋಧಿಸುತ್ತೇವೆ. ಇದನ್ನು ಜನರೇ ದಂಗೆ ಎದ್ದು ತಪ್ಪಿಸಬೇಕು. ರಾಜಕೀಯ ನಾಯಕರಿಗೆ ಪರ್ಸೆಂಟೇಜ್ ಬೇಕು ಅಷ್ಟೇ. ಜನಪರ ಕಾಳಜಿ ಬೇಕಾಗಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ, ಮುಖಂಡರಾದ ಪ್ರಸನ್ನ ಎನ್.ಗೌಡ, ಸಿ.ಕುಮಾರಿ, ಹುಲ್ಕೆರೆ ಮಹದೇವ್, ಕೆ.ಆರ್‌.ರವೀಂದ್ರ, ವಿಜಯ್‌ಕುಮಾರ್, ಲಿಂಗಪ್ಪಾಜಿ, ಪ್ರಿಯಾ ರಮೇಶ್‌, ಲತಾ ಶಂಕರ್, ಮಂಜು ಕೋಣನಹಳ್ಳಿ ಭಾಗವಹಿಸಿದ್ದರು.

****

‘ಸರ್ಕಾರ ಟ್ರಯಲ್ ಬ್ಲಾಸ್ಟ್ ಮಾಡಲು ಉತ್ಸುಕವಾಗಿದೆ. ನಾವು ಮಾಡಬೇಡಿ ಅಂತ ಹೇಳಿದರೂ ಕೇಳುವ ಸ್ಥಿತಿಯಲ್ಲಿಲ್ಲ. ಇದನ್ನು ಹೋರಾಟದ ಮುಖಾಂತರವೇ ಬಗೆಹರಿಸಿಕೊಳ್ಳಬೇಕಿದೆ

– ಎ.ಎಲ್. ಕೆಂಪೂಗೌಡ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

****

ರೈತರ ಮತ್ತು ಸಾರ್ವಜನಿಕರ ಹಿತಾಸಕ್ತಿ ಮರೆತು ಗಣಿಗಾರಿಕೆ ಪರ ಸರ್ಕಾರ ನಿಂತರೆ ಸಿಪಿಎಂ ಪಕ್ಷದವರು ರೈತರ ಜೊತೆ ನಿಂತು ಪ್ರತಿಭಟನೆ ನಡೆಸುತ್ತೇವೆ. ಇದಕ್ಕೆ ಅವಕಾಶ ನೀಡಬಾರದು

– ಟಿ.ಎಲ್‌. ಕೃಷ್ಣೇಗೌಡ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.