ಮಂಡ್ಯ: ಬಹುಸಂಖ್ಯಾತ ಒಕ್ಕಲಿಗ ಮತಗಳ ಒಗ್ಗಟ್ಟು, ಮೈತ್ರಿಯಿಂದಾಗಿ ಲಿಂಗಾಯತ, ಬ್ರಾಹ್ಮಣ ಹಾಗೂ ಇತರ ಸಮುದಾಯಗಳ ಧ್ರುವೀಕರಣ, ಕಳೆದ ಚುನಾವಣೆಯಲ್ಲಿ ನಿಖಿಲ್ ಸೋಲಿನ ಅನುಕಂಪ, ಕುಮಾರಸ್ವಾಮಿ ಅವರ ವಿನೀತ ನಡವಳಿಕೆ, ಭಾವನಾತ್ಮಕ ವಿಚಾರ ಮುಂತಾದವು ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯದಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು, ಅವರೊಂದಿಗೆ 8 ಮಂದಿ ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರಿದ್ದರು. ಆದರೂ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲುಂಡರು. ಈಗಲೂ ಇಂಥದ್ದೇ ಫಲಿತಾಂಶ ಮರುಕಳಿಸಿದ್ದು ಕಾಂಗ್ರೆಸ್ ಸರ್ಕಾರದ ಒಬ್ಬ ಸಚಿವ, 7 ಮಂದಿ ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರಿದ್ದರೂ ವೆಂಕಟರಮಣೇಗೌಡ ಅವರಿಗೆ ಅದೃಷ್ಟ ಕೈಕೊಟ್ಟಿದೆ.
ಪುತ್ರ ನಿಖಿಲ್ ಸೋತ ನೆಲದಲ್ಲೇ ಗೆಲುವಿನ ನಗೆ ಬೀರಿರಿವ ಕುಮಾರಸ್ವಾಮಿ ಚಿಕ್ಕಬಳ್ಳಾಪುರ, ರಾಮನಗರದ ನಂತರ ಮಂಡ್ಯಕ್ಕೆ ಕ್ಷೇತ್ರಾಂತರ ಮಾಡಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಕಳೆದ ವಿಧಾನಸಭೆಯಲ್ಲಿ ಸೋತು ಸುಣ್ಣವಾಗಿದ್ದ ಜೆಡಿಎಸ್ ನಾಯಕರಲ್ಲಿ ಭರವಸೆ ಮೂಡಿಸಿದ್ದಾರೆ.
ತುಟಿ ಬಿಚ್ಚದ ಚಂದ್ರು: ಸಚಿವ, ಶಾಸಕರನ್ನೇ ಅವಲಂಬಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿಹಳ್ಳಿ ಸುತ್ತಿದರೂ ತುಟಿ ಬಿಚ್ಚಿ ಮಾತನಾಡಲಿಲ್ಲ. ಸಚಿವ ಶಾಸಕರನ್ನೇ ತಮ್ಮ ಬಾಯಿ ಮಾಡಿಕೊಂಡ ಅವರು ತಮ್ಮ ಇರುವಿಕೆಯನ್ನೇ ಸ್ಪಷ್ಟಪಡಿಸಲಿಲ್ಲ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಎಂದೇ ಚುನಾವಣೆ ಬಿಂಬಿತವಾಗಿತು, ಈಗ ಸಚಿವ ಚಲುವರಾಯಸ್ವಾಮಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ವಿನೀತ ಭಾವನೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸ್ಪರ್ಧಿಸಿದ್ದಕ್ಕೆ ಕುಮಾರಸ್ವಾಮಿ ತೀವ್ರ ಅಸಹಿಷ್ಣುತೆ ವ್ಯಕ್ತಪಡಿಸಿದ್ದರು. ಸುಮಲತಾ ವಿರುದ್ಧ ನಾಲಗೆ ಹರಿಬಿಟ್ಟು ರಾಜ್ಯದಾದ್ಯಂತ ಆಕ್ರೋಶಕ್ಕೆ ಗುರಿಯಾಗಿದ್ದರು, ಜೆಡಿಎಸ್ ಮುಖಂಡರು ಕೂಡ ಸುಮಲತಾ ವೈಯಕ್ತಿಕವಾಗಿ ನಿಂದಿಸಿದ್ದರು.
ಇದರಿಂದ ಬುದ್ಧಿ ಕಲಿತ ಕುಮಾರಸ್ವಾಮಿ ಈ ಬಾರಿ ಅಪಾರ ವಿನೀತ ಭಾವದಿಂದ ನಡೆದುಕೊಂಡರು. ರಾಜಕೀಯ ಮಾತುಗಳಿಂದ ದೂರವೇ ಉಳಿದರು, ಸ್ಥಳೀಯ ವಿಚಾರಗಳನ್ನಷ್ಟೇ ಮಾತನಾಡಿದರು. ಜಿಲ್ಲೆಯ ಹಿರಿಯ ನಾಯಕರ, ರಾಜಕಾರಣಿಗಳ ಸಮಾಧಿಗಳಿಗೆ ಸಮಸ್ಕರಿಸಿದರು. ಸಂಸದೆ ಸುಮಲತಾ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರ ಮನೆಗಳಿಗೆ ತೆರಳಿ ಬೆಂಬಲ ಕೋರಿದರು. ಇವೆಲ್ಲವೂ ಕುಮಾರಸ್ವಾಮಿ ಮೇಲಿನ ಜನರಲ್ಲಿ ಅಭಿಮಾನ ಮೂಡಿತು.
ಸ್ಪರ್ಧೆ ನಿರ್ಣಯದ ನಂತರ ಕುಮಾರಸ್ವಾಮಿ ಹೃದಯ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದರು, ಆಸ್ಪತ್ರೆಯಿಂದ ನಾಮಪತ್ರ ಸಲ್ಲಿಸಿದರು. ಶಸ್ತ್ರಚಿಕಿತ್ಸೆ ವಿಚಾರವನ್ನೆತ್ತಿದ ಕಾಂಗ್ರೆಸ್ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಉದಯ್ ಕದಲೂರು ಲೇವಡಿ ಮಾಡಿದರು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಕಳೆದ ಬಾರಿ ಕುಮಾರಸ್ವಾಮಿ ಬೆಲೆ ತೆತ್ತಂತೆ ಈ ಬಾರಿ ಕಾಂಗ್ರೆಸ್ ಮುಖಂಡರು ಬೆಲೆ ತೆತ್ತಿದ್ದಾರೆ.
ಸ್ಟಾರ್ ಚಂದ್ರು ಹಾಗೂ ಸಚಿವ ಚಲುವರಾಯಸ್ವಾಮಿ ನಾಗಮಂಗಲ ತಾಲ್ಲೂಕಿನವರು. ತವರು ಕ್ಷೇತ್ರದ ಮತಗಳ ಅಂತರವೂ ಕುಸಿದಿದ್ದು ಚಂದ್ರು ಸೋಲಿಗೆ ಕಾರಣವಾಗಿದೆ.
ಸುಮಲತಾರಿಂದ ಅಂತರ
ಪ್ರಚಾರದ ವಿಚಾರದಲ್ಲಿ ಕುಮಾರಸ್ವಾಮಿ ಸೇರಿ ಜೆಡಿಎಸ್ ಮುಖಂಡರು ಸುಮಲತಾ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಕುಮಾರಸ್ವಾಮಿ ಬೆಂಗಳೂರಿನಲ್ಲಿ ಸುಮಲತಾ ಅವರ ಮನೆಗೆ ತೆರಳಿ ಬೆಂಬಲ ಕೋರಿದ್ದನ್ನು ಬಿಟ್ಟರೆ ಅವರಿಗೆ ಪ್ರಚಾರಕ್ಕೆ ಅವರಿಗೆ ಆಹ್ವಾನ ನೀಡಲಿಲ್ಲ.
ಸುಮಲತಾ ಪ್ರಚಾರಕ್ಕೆ ಬಂದಿದ್ದರೆ ಇಷ್ಟು ದೊಡ್ಡ ಮತಗಳು ಬರುತ್ತಿದ್ದವೇ ಎಂಬ ಪ್ರಶ್ನೆ ಹಲವರಲ್ಲಿದೆ.
‘ಸುಮಲತಾ ಪ್ರಚಾರಕ್ಕೆ ಬಂದಿದ್ದರೆ ನನ್ನಿಂದಲೇ ಗೆಲುವಾಯಿತು ಎಂದು ಎಲ್ಲೆಡೆ ಹೇಳಿಕೊಳ್ಳುತ್ತಿದ್ದರು. ಈಗ ಅಂತಹ ವಾತಾವರಣ ಇಲ್ಲ ಅವರನ್ನು ಪ್ರಚಾರಕ್ಕೆ ಕರೆಯದೇ ಇರುವುದೇ ಒಳ್ಳೆಯದಾಯಿತು. ಈಗ ಗೆಲುವಿನ ಸಂಪೂರ್ಣ ಶ್ರೇಯ ಕುಮಾರಸ್ವಾಮಿ, ಜೆಡಿಎಸ್ ನಾಯಕರು ಹಾಗೂ ಬಿಜೆಪಿ ಮುಖಂಡರಿಗೆ ಸಲ್ಲುತ್ತದೆ’ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.