ಮಂಡ್ಯ: ನಾಲ್ಕು ವರ್ಷಗಳಿಂದ ನಿಂತಿದ್ದ ಮೈಷುಗರ್ ಕಾರ್ಖಾನೆಗೆ ಪುನಶ್ಚೇತನ ನೀಡಿದ್ದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ತಾಂತ್ರಿಕ ಅಧಿಕಾರಿ ಅಪ್ಪಾ ಸಾಹೇಬ ಪಾಟೀಲ ಅವರನ್ನು ಕಾರ್ಖಾನೆಯಿಂದ ಏಕಾಏಕಿ ಬಿಡುಗಡೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ.
ಕಾರ್ಖಾನೆಯ ಸಮರ್ಪಕ ನಿರ್ವಹಣೆಗೆ ಐಎಎಸ್ ಅಧಿಕಾರಿ ಬದಲಿಗೆ ತಾಂತ್ರಿಕ ಅನುಭವವುಳ್ಳ ಅಧಿಕಾರಿಯೊಬ್ಬರು ವ್ಯವಸ್ಥಾಪಕ ನಿರ್ದೇಶಕರಾಗಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದ ಕಾರಣ ಹಿಂದಿನ ಬಿಜೆಪಿ ಸರ್ಕಾರ ಎ.ಎಸ್. ಪಾಟೀಲ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು. ಉತ್ತರ ಕರ್ನಾಟಕ ಭಾಗದ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸಿದ್ದ ಅನುಭವದ ಆಧಾರದ ಮೇಲೆ 2022ರಲ್ಲಿ ಅವರನ್ನು ನೇಮಕ ಮಾಡಿಕೊಳ್ಳಲಾಗಿತ್ತು.
ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಕಾರ್ಖಾನೆಗೆ ಮತ್ತೆ ಮೊದಲಿನಂತೆಯೇ ಐಎಎಸ್ ಅಧಿಕಾರಿ ನೇಮಕಾತಿಯನ್ನು ಮುಂದುವರಿಸಿತು. ಅದರಂತೆ ಜೂನ್ ತಿಂಗಳಲ್ಲಿ ಐಎಎಸ್ ಅಧಿಕಾರಿ ಎಂ.ಆರ್.ರವಿಕುಮಾರ್ ಅವರು ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಪ್ಪಾ ಸಾಹೇಬ ಪಾಟೀಲ ಅವರನ್ನು ಕೈಬಿಡುವ ಬದಲಿಗೆ ಮುಖ್ಯ ವ್ಯವಸ್ಥಾಪಕ (ತಾಂತ್ರಿಕ) ಹುದ್ದೆ ನೀಡುವ ಬಗ್ಗೆ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.
ಹೊಸ ಹುದ್ದೆಯ ನಿರೀಕ್ಷೆಯಲ್ಲಿರುವಾಗಲೇ ನೂತನ ವ್ಯವಸ್ಥಾಪಕ ನಿರ್ದೇಶಕರಾದ ರವಿಕುಮಾರ್ ಅವರು ಆ.1ರಂದು ಪಾಟೀಲ ಅವರನ್ನು ಕಾರ್ಖಾನೆಯಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ. ಆ ಮೂಲಕ ಕಳೆದೊಂದು ವರ್ಷದಿಂದ ಕಾರ್ಖಾನೆಯನ್ನು ತಳಮಟ್ಟದಿಂದ ಕಟ್ಟಿದ್ದ ಅಪ್ಪಾ ಸಾಹೇಬ ಪಾಟೀಲ ಅವರು ಕಾರ್ಖಾನೆ ಅಂಗಳದಿಂದ ಹೊರ ನಡೆಯುವ ಪರಿಸ್ಥಿತಿ ಬಂದಿದೆ. ಜೊತೆಗೆ ಕಾರ್ಖಾನೆ ನಿರ್ವಹಣೆಗೆ ತಾಂತ್ರಿಕ ಅಧಿಕಾರಿ ಇರಬೇಕು ಎನ್ನುವ ರೈತ ಮುಖಂಡರ ಒತ್ತಾಯಕ್ಕೆ ಕಿಮ್ಮತ್ತು ಇಲ್ಲದಂತಾಗಿದೆ.
ಬರೀ ಭರವಸೆ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಅಧಿಕೃತ ಪ್ರಕಟಣೆ ಹೊರಡಿಸಿ, ಸಂದರ್ಶನ ಮಾಡಿ ಅಪ್ಪಾ ಸಾಹೇಬ ಪಾಟೀಲ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಐಎಎಸ್ ಅಧಿಕಾರಿ ನೇಮಕಾತಿ ನಂತರ ಅವರನ್ನು ಜಿಎಂ (ತಾಂತ್ರಿಕ) ಆಗಿ ಮುಂದುವರಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರೇ ಭರವಸೆ ನೀಡಿದ್ದರು. ಆದರೆ ಅವರ ಭರವಸೆ ಸಾಕಾರಗೊಳ್ಳಲಿಲ್ಲ.
ವ್ಯವಸ್ಥಾಪಕ ಹುದ್ದೆಯಿಂದ ಕೆಳಗಿಳಿದ ನಂತರವೂ ಪಾಟೀಲ ಅವರು ಕಚೇರಿಗೆ ಬರುತ್ತಿದ್ದರು. ಪ್ರತ್ಯೇಕ ಕೊಠಡಿ ಇಲ್ಲದ ಕಾರಣ ಎಂ.ಆರ್. ರವಿಕುಮಾರ್ ಅವರ ಕೊಠಡಿಯಲ್ಲೇ ಕೂರುತ್ತಿದ್ದರು. ಆದರೆ, ಆದರೆ ಕಚೇರಿಗೆ ಬಂದು, ಹೋಗುವವರ ಬಗ್ಗೆ ರವಿಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು, ತಮ್ಮ ಅನುಮತಿ ಇಲ್ಲದೇ ಯಾರೂ ಬರಕೂಡದು ಎಂದು ತಾಕೀತು ಮಾಡಿದ್ದರು. ಇದಾದ ನಂತರ ಪಾಟೀಲ ಅವರು ಕಚೇರಿಗೆ ಬರುವುದನ್ನು ನಿಲ್ಲಿಸಿದ್ದರು.
ಈ ಅವಧಿಯಲ್ಲಿ ರವಿಕುಮಾರ್ ಅವರ ಬಿಡುಗಡೆ ಆದೇಶ ಬಂದಿದೆ ಎಂದು ಮೂಲಗಳು ತಿಳಿಸಿವೆ. ಹಾಲಿ ಮತ್ತು ಮಾಜಿ ವ್ಯವಸ್ಥಾಪಕ ನಿದೇರ್ಶಕರ ನಡುವಿನ ಮುಸುಕಿನ ಗುದ್ದಾಟವೂ ಬಿಡುಗಡೆಗೆ ಕಾರಣ ಎಂಬ ಮಾತುಗಳೂ ಕಾರ್ಖಾನೆಯ ಅಂಗಳದಲ್ಲಿವೆ.
‘ಅಪ್ಪಾ ಸಾಹೇಬ ಪಾಟೀಲ ಅವರು ರೋಗಗ್ರಸ್ಥಗೊಂಡಿದ್ದ ಕಾರ್ಖಾನೆಯನ್ನು ದುರಸ್ತಿಗೊಳಿಸಿ ಕಾರ್ಯಾರಂಭ ಮಾಡುವಂತೆ ನೋಡಿಕೊಂಡಿದ್ದರು. ನಾವು ಹಲವು ಐಎಎಸ್ ಅಧಿಕಾರಿಗಳನ್ನು ನೋಡಿದ್ದೇವೆ, ಅವರಿಂದ ಕಾರ್ಖಾನೆ ನಿರ್ವಹಣೆ ಮಾಡಲು ಆಗಿಲ್ಲ. ಕಾರ್ಖಾನೆ ಯಾವುದೇ ತೊಂದರೆ ಇಲ್ಲದಂತೆ ನಡೆಯಬೇಕಾದರೆ ತಾಂತ್ರಿಕ ಅಧಿಕಾರಿಯ ಅವಶ್ಯಕತೆ ಇದೆ’ ಎಂದು ರೈತ ಹೋರಾಟ ಸಮಿತಿಯ ನಾಯಕಿ ಸುನಂದಾ ಜಯರಾಂ ಹೇಳಿದರು.
ಮಾಜಿ– ಹಾಲಿ ಎಂ.ಡಿಗಳ ನಡುವೆ ಗುದ್ದಾಟ? ಕಾರ್ಖಾನೆಗೆ ಇಲ್ಲದ ತಾಂತ್ರಿಕ ಅಧಿಕಾರಿ ಸಕಾರಗೊಳ್ಳದ ರೈತ ಮುಖಂಡರ ಒತ್ತಾಯ
ಜಿಎಂ (ತಾಂತ್ರಿಕ) ಆಗಿ ನೇಮಕ ಮಾಡಿಕೊಂಡಿರುವ ಮಾಹಿತಿ ವಾಟ್ಸ್‌ಆ್ಯಪ್ ಮೂಲಕ ಬಂದಿತ್ತು ಅಧಿಕೃತ ಆದೇಶದ ನಿರೀಕ್ಷೆಯಲ್ಲಿದ್ದೆ. ಈ ನಡುವೆ ನೂತನ ಎಂಡಿ ನನ್ನನ್ನು ಬಿಡುಗಡೆಗೊಳಿಸಿದ್ದಾರೆ –ಅಪ್ಪಾ ಸಾಹೇಬ ಪಾಟೀಲ ಮಾಜಿ ಎಂ.ಡಿ ಮೈಷುಗರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.