ಮಂಡ್ಯ: ರಾಜ್ಯದಲ್ಲಿ ಡೆಂಗಿ ಜ್ವರವನ್ನು ಸಂಪೂರ್ಣ ನಿಯಂತ್ರಿಸಲು ಆರೋಗ್ಯ ಇಲಾಖೆಯು ‘ಹಾಟ್‌ಸ್ಪಾಟ್’ ಪ್ರದೇಶದ ಸುತ್ತಮುತ್ತ ಇರುವ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಸೊಳ್ಳೆ ನಿರೋಧಕ ‘ಬೇವಿನ ಎಣ್ಣೆ’ (Neem Oil) ವಿತರಿಸಲು ಕ್ರಮ ಕೈಗೊಂಡಿದೆ.
ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ಬೇವಿನ ಎಣ್ಣೆ ಬಾಟಲಿ (50 ಎಂ.ಎಲ್.) ವಿತರಿಸುತ್ತಿದ್ದಾರೆ. ‘ನಾಲ್ಕು ಚಮಚ ಕೊಬ್ಬರಿ ಎಣ್ಣೆ ಜೊತೆ ಒಂದು ಚಮಚ ಬೇವಿನ ಎಣ್ಣೆಯನ್ನು ಸೇರಿಸಿ ಕೈ–ಕಾಲು ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ಸೊಳ್ಳೆ ಕಚ್ಚುವುದಿಲ್ಲ. ಡೆಂಗಿಜ್ವರವನ್ನೂ ನಿಯಂತ್ರಿಸಬಹುದು’ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.
ಬೆಂಗಳೂರು ನಗರ– 16,184, ಮಂಡ್ಯ ಜಿಲ್ಲೆ– 14,151 ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 5,728 ಬೇವಿನ ಎಣ್ಣೆ ಬಾಟಲಿಗಳನ್ನು ವಿತರಿಸಲಾಗಿದ್ದು, ರಾಜ್ಯದಲ್ಲಿ ಈ ಮೂರು ಜಿಲ್ಲೆಗಳು ಮುಂಚೂಣಿಯಲ್ಲಿವೆ.
‘ಸೊಳ್ಳೆ ನಿರೋಧಕ ಎಣ್ಣೆ ಅಥವಾ ಕ್ರೀಂಗಳನ್ನು ಸ್ಥಳೀಯವಾಗಿ ಖರೀದಿಸಲು ಸಿ.ಎಸ್.ಆರ್.(ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ಮತ್ತು ದಾನಿಗಳ ವಂತಿಕೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ‘ಆಯುಷ್ಮಾನ್ ಭಾರತ್ -ಆರೋಗ್ಯ ಕರ್ನಾಟಕ’ ಅನುದಾನವನ್ನು ಬಳಸಬೇಕು. ಹೆಚ್ಚುವರಿ ಅನುದಾನದ ಬೇಡಿಕೆಯನ್ನು ಆಯಾ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಂದ ಭರಿಸಬೇಕು’ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಸೂಚಿಸಿದ್ದಾರೆ.
‘ಮಂಡ್ಯ ಜಿಲ್ಲೆಯಲ್ಲಿ ಜುಲೈನಲ್ಲಿ ನಿತ್ಯ ಸರಾಸರಿ 20ರಿಂದ 30 ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆಗಸ್ಟ್‌ನಲ್ಲಿ ನಿತ್ಯ 6ರಿಂದ 10 ಪ್ರಕರಣಗಳು ಕಂಡು ಬರುತ್ತಿದ್ದು, ಡೆಂಗಿಜ್ವರ ಇಳಿಮುಖವಾಗಿದೆ. ಜಿಲ್ಲೆಯ 7 ತಾಲ್ಲೂಕುಗಳಲ್ಲಿ 3,572 ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ಒಟ್ಟು 769 ಪ್ರಕರಣಗಳು ಪತ್ತೆಯಾಗಿವೆ. ಪ್ರಸ್ತುತ 19 ಮಂದಿಗೆ ಜ್ವರವಿದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಂತರಾಜು ಮಾಹಿತಿ ನೀಡಿದರು.
ಬೇವಿನ ಎಣ್ಣೆ ವಾಸನೆಗೆ ಸೊಳ್ಳೆಗಳು ಜನರ ಹತ್ತಿರ ಸುಳಿಯುವುದಿಲ್ಲ. ಡೆಂಗಿ ನಿಯಂತ್ರಣಕ್ಕೆ ಈ ಪ್ರಯೋಗ ಸಹಕಾರಿಯಾಗಿದೆ–ಡಾ.ಕೆ.ಮೋಹನ್ ಡಿಎಚ್‌ಒ ಮಂಡ್ಯ
‘ರಾಜ್ಯದಲ್ಲಿ ಜುಲೈ ಅಂತ್ಯಕ್ಕೆ 17227 ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದು ಶೇ 25ರಷ್ಟು ಪ್ರಕರಣಗಳು 6ರಿಂದ 16 ವರ್ಷದೊಳಗಿನ ಮಕ್ಕಳಲ್ಲಿ ಕಂಡುಬಂದಿವೆ. ಹೀಗಾಗಿ ಶಾಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ. ಕಾವೇರಿ ಮಾರ್ಗಸೂಚಿ ಹೊರಡಿಸಿದ್ದಾರೆ. ‘ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಎಸ್.ಡಿ.ಎಂ.ಸಿ. ಸಹಕಾರದೊಂದಿಗೆ ಸೊಳ್ಳೆ ನಿರೋಧಕ ಎಣ್ಣೆ ಅಥವಾ ಕ್ರೀಂಗಳನ್ನು ವಿದ್ಯಾರ್ಥಿಗಳಿಗೆ ಆದ್ಯತೆಯ ಮೇಲೆ ಪೂರೈಸಬೇಕು’ ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.