ADVERTISEMENT

ಮಂಡ್ಯ | ತೂಕದಲ್ಲಿ ಮೋಸ: ಆಭರಣ ಮಳಿಗೆಗಳಿಗೆ ಬೀಗ

ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 0:25 IST
Last Updated 25 ಅಕ್ಟೋಬರ್ 2024, 0:25 IST
ಪಾಂಡವಪುರ ಪಟ್ಟಣದಲ್ಲಿ ಗುರುವಾರ ಆಭರಣ ಮಳಿಗೆಗಳ ಮೇಲೆ ರಾಜ್ಯ ಆಹಾರ ಆಯೋಗದ ಸದಸ್ಯರ ತಂಡ ದಾಳಿ ಕಾರ್ಯಾಚರಣೆ ನಡೆಸಿತು
ಪಾಂಡವಪುರ ಪಟ್ಟಣದಲ್ಲಿ ಗುರುವಾರ ಆಭರಣ ಮಳಿಗೆಗಳ ಮೇಲೆ ರಾಜ್ಯ ಆಹಾರ ಆಯೋಗದ ಸದಸ್ಯರ ತಂಡ ದಾಳಿ ಕಾರ್ಯಾಚರಣೆ ನಡೆಸಿತು   

ಮಂಡ್ಯ: ಗ್ರಾಹಕರಿಗೆ ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದ ಜಿಲ್ಲೆಯ ಪಾಂಡವಪುರ ಪಟ್ಟಣದ ಮೂರು ಆಭರಣ ಮಳಿಗೆಗಳಿಂದ ಎಲೆಕ್ಟ್ರಾನಿಕ್‌ ತೂಕದ ಯಂತ್ರಗಳನ್ನು ಗುರುವಾರ ವಶಪಡಿಸಿಕೊಂಡ ರಾಜ್ಯ ಆಹಾರ ಆಯೋಗದ ಸದಸ್ಯರ ತಂಡವು ಮಳಿಗೆಗಳಿಗೆ ಬೀಗ ಜಡಿದಿದೆ.

ಮಹಾಲಕ್ಷ್ಮಿ ಬ್ಯಾಂಕರ್‌ ಅಂಡ್‌ ಜ್ಯುವೆಲರ್ಸ್‌, ಮಹೇಂದ್ರ ಜ್ಯುವೆಲರ್ಸ್‌ ಹಾಗೂ ಲಕ್ಷ್ಮಿ ಜ್ಯುವೆಲರ್ಸ್‌ ಮಾಲೀಕರಿಗೆ ಕಾನೂನು ಮಾಪನಶಾಸ್ತ್ರ ಅಧಿಕಾರಿಗಳು ಎಚ್ಚರಿಕೆ ನೀಡಿ, ನೋಟಿಸ್‌ ಜಾರಿ ಮಾಡಿದ್ದಾರೆ. 

‘ಈ ಮಳಿಗೆಗಳಲ್ಲಿದ್ದ ತೂಕದ ಯಂತ್ರಗಳಲ್ಲಿ ಒಂದರಿಂದ ಒಂದೂವರೆ ಗ್ರಾಂನಷ್ಟು ವ್ಯತ್ಯಾಸ ಬರುತ್ತಿತ್ತು. ಅಂದರೆ, ಒಂದು ಗ್ರಾಂ ಚಿನ್ನದ ಮಾರುಕಟ್ಟೆ ಮೌಲ್ಯ ಪ್ರಸ್ತುತ ₹7 ಸಾವಿರವಿದ್ದು, ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಮೋಸವಾಗುತ್ತಿತ್ತು. ಪರವಾನಗಿ ಪಡೆಯದ ಮತ್ತು ನವೀಕರಣ ಮಾಡಿಸಿಕೊಳ್ಳದ ಕಾರಣಗಳೂ ಸೇರಿದಂತೆ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ನಿಯಮಿತವಾಗಿ ಪರಿಶೀಲಿಸದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ’ ಎಂದು ಆಯೋಗದ ಅಧ್ಯಕ್ಷ ಡಾ.ಎಚ್‌.ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

ಅಮಾನತಿಗೆ ಆದೇಶ:

ಪಾಂಡವಪುರ ತಾಲ್ಲೂಕಿನ ದೊಡ್ಡಬ್ಯಾಡರಳ್ಳಿ ನ್ಯಾಯಬೆಲೆ ಅಂಗಡಿ ಮೇಲೆ ದಾಳಿ ಕಾರ್ಯಾಚರಣೆ ನಡೆಸಿದಾಗ 6 ಕ್ವಿಂಟಲ್ ಅಕ್ಕಿ ಹಾಗೂ 6.5 ಕ್ವಿಂಟಲ್ ರಾಗಿ ತೂಕದಲ್ಲಿ ವ್ಯತ್ಯಾಸ ಕಂಡು ಬಂತು. ಕಾರ್ಯದರ್ಶಿ ವಿರುದ್ಧ ಸ್ಥಳೀಯರಿಂದ ದೂರುಗಳಿದ್ದು, ಅಮಾನತು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಸುಮಂತ್ ರಾವ್, ಮಾರುತಿ ಎಂ, ದೊಡ್ಡಲಿಂಗಣ್ಣರವರ, ಎ.ರೋಹಿಣಿ ಪ್ರಿಯ ಮತ್ತು ಕೆ.ಎಸ್ ವಿಜಯಲಕ್ಷ್ಮಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.