ಮಂಡ್ಯ: ಜೀವ ಕೈಯಲ್ಲಿಡಿದುಕೊಂಡು ಜೋಡಿ ರೈಲ್ವೆ ಹಳಿಗಳನ್ನು ದಾಟಿ ಊರು ತಲುಪಬೇಕಾದ ಸಂಕಷ್ಟ ನಾಲ್ಕು ಗ್ರಾಮಗಳ ಜನರದ್ದು. ಪಾದಚಾರಿಗಳ ಅನುಕೂಲಕ್ಕೆ ಸೇತುವೆ ನಿರ್ಮಿಸಿಕೊಡಿ ಎಂದು ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಪರಿಹಾರ ಸಿಕ್ಕಿಲ್ಲ.
ಮಂಡ್ಯ, ಶ್ರೀರಂಗಪಟ್ಟಣ ಹಾಗೂ ಪಾಂಡವಪುರಕ್ಕೆ ತೆರಳಲು ಮಂಡ್ಯ ತಾಲ್ಲೂಕಿನ ನೊದೆಕೊಪ್ಪಲು ಗ್ರಾಮದಲ್ಲಿರುವ ಜೋಡಿ ರೈಲ್ವೆ ಹಳಿಗಳನ್ನು ದಾಟುವ ಅನಿವಾರ್ಯತೆ ಎದುರಾಗಿದೆ. ಕೊತ್ತತ್ತಿ ಹೋಬಳಿಯ ನೊದೆಕೊಪ್ಪಲು, ದುದ್ದ ಹೋಬಳಿ ಚಿಕ್ಕಕೊಪ್ಪಲು, ಮಾದೇಗೌಡನಕೊಪ್ಪಲು ಹಾಗೂ ಅಗಟಹಳ್ಳಿ ಗ್ರಾಮದ ಕೆಲವು ಜನರು ಕಳೆದು ಎರಡು ಮೂರು ವರ್ಷಗಳಿಂದ ಸಮಸ್ಯೆಗೆ ಪರಿಹಾರ ಸಿಗದೆ ಪರದಾಡುತ್ತಿದ್ದಾರೆ.
ಪ್ರತಿನಿತ್ಯ 500ಕ್ಕೂ ಹೆಚ್ಚು ರೈತರು, ಶಾಲಾ– ಕಾಲೇಜು ವಿದ್ಯಾರ್ಥಿಗಳು, ನೌಕರರು ಈ ಜೋಡಿ ರೈಲ್ವೆ ಹಳಿಗಳನ್ನು ದಾಟಿ ಸಂಚಾರ ಮಾಡಬೇಕಿದೆ. ಜಾನುವಾರುಗಳನ್ನು ಹಿಡಿದುಕೊಂಡು ರೈತರು ತಮ್ಮ ಜಮೀನುಗಳಿಗೆ ಹೋಗಲು ಈ ರೈಲ್ವೆ ಹಳಿಯನ್ನೇ ದಾಟಬೇಕಿದೆ.
‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ಕ್ಷೇತ್ರಗಳ ಶಾಸಕರ ಗಮನಕ್ಕೆ ಈ ಸಮಸ್ಯೆಯನ್ನು ತಂದಿದ್ದೇವೆ. ಕೂಡಲೇ ಗ್ರಾಮಸ್ಥರ ಬವಣೆಯನ್ನು ಅರ್ಥಮಾಡಿಕೊಂಡು ಪರಿಹಾರ ಕಲ್ಪಿಸಬೇಕು’ ಎಂದು ಎನ್ನುವುದು ಚಿಕ್ಕಕೊಪ್ಪಲಿನ ಹನುಮಂತು, ಪುಟ್ಟಣ್ಣ, ಮಾದೇಗೌಡ ನಕೊಪ್ಪಲಿನ ನಾಗೇಶ, ಅನಿಲ್, ಅಗಟಹಳ್ಳಿ ಗ್ರಾಮದ ಜಯರಾಮು ಮನವಿ ಮಾಡಿದರು.
‘ಜೋಡಿ ರೈಲ್ವೆ ಹಳಿಗಳ ಮೇಲೆ ಸೇತುವೆ ಮಾಡಿಕೊಡಬೇಕು. ಈಗಿರುವ ಕೆಳಸೇತುವೆಯು 300 ಮೀಟರ್ ದೂರವಿದೆ. ಅದರಲ್ಲಿ ವಾಹನಗಳಷ್ಟೇ ಸಂಚರಿಸಲು ಅನುಕೂಲವಾಗಿದೆ. ಸಾರ್ವಜನಿಕರು ಮತ್ತು ಗ್ರಾಮಸ್ಥರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆದಾಡಲು ಎರಡೂ ಕಡೆ ಪಾದಚಾರಿ ಮಾರ್ಗವಿಲ್ಲ. ಒಟ್ಟಿನಲ್ಲಿ ಪಾದಚಾರಿ ಮಾರ್ಗಕ್ಕೆ ಸ್ಥಳಾವಕಾಶ ಇಲ್ಲದಿರುವಾಗ ತಿರುಗಾಡುವುದು ಹೇಗೆ?’ ಎಂದು ವಿದ್ಯಾರ್ಥಿಗಳಾದ ಸಂದೇಶ್, ಮಂಜುಳಾ, ಲಕ್ಷ್ಮಿ, ನೇತ್ರಾವತಿ, ಅಂಕಿತಾ ಪ್ರಶ್ನಿಸುತ್ತಾರೆ.
‘ಜೋಡಿ ರೈಲ್ವೆ ಹಳಿಗಳಿಗೆ ನೊದೆಕೊಪ್ಪಲು ಗ್ರಾಮದ ಪ್ರವೇಶ ದ್ವಾರದ ಅನತಿ ದೂರದಲ್ಲಿಯೇ ಕೆಳೆ ಸೇತುವೆಯನ್ನು ಮಾಡಲಾಗಿದೆ. ಇಲ್ಲಿ ಸೇತುವೆ ಗೋಡೆ ಅಡ್ಡ
ಇರುವುದರಿಂದ ಎದುರುಗಡೆ ವಾಹನ ಬರುವುದು
ಕಾಣುವುದಿಲ್ಲ. ಹೀಗಾಗಿ ಅಪಘಾತ ಸಂಭವಿಸುತ್ತಿವೆ. ರಾತ್ರಿಯ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಓಡಾಡಲು ಕಷ್ಟವಾಗುತ್ತಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.
‘ಹಾಲಿನ ಡೇರಿಗೆ ಹೋಗಲು ರೈಲ್ವೆ ಕಂಬಿಗಳನ್ನು ದಾಟಿಕೊಂಡೇ ಹೋಗಬೇಕಿದ್ದು, ರೈಲು ಯಾವಾಗ ಬರುತ್ತವೆಯೋ ಎಂಬ ಭಯ ಕಾಡುತ್ತದೆ. ಹೀಗಾಗಿ ಶಾಶ್ವತವಾಗಿ ನಮಗೆ ನಡೆದಾಡಲು ಒಂದು ಸೇತುವೆ ನಿರ್ಮಿಸಿಕೊಟ್ಟರೆ ಸಹಾಯವಾಗುತ್ತದೆ‘ ಎಂದು ರೈತ ಮಹಿಳೆಯರಾದ ದೇವಮ್ಮ, ಚಿಕ್ಕೋಳಮ್ಮ ಮನವಿ ಮಾಡುತ್ತಾರೆ.
‘ಈಗಾಗಲೇ ಗ್ರಾಮ ಪ್ರವೇಶ ದ್ವಾರದ ಸಮೀಪವೇ ರೋಡ್ ಅಂಡರ್ ಬ್ರಿಡ್ಜ್ (ಆರ್‌ಯುಬಿ ) ಇದೆ. ಆದರೆ ಮತ್ತೆ ಅದರ ಸಮೀಪವೇ ಮತ್ತೊಂದು ಸೇತುವೆ ಬೇಕು ಎಂಬುದು ಹಲವು ಗ್ರಾಮಸ್ಥರ ಒತ್ತಾಯವಾಗಿದೆ. ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳ ಕಾಳಜಿಯಿಂದ ನಿರ್ಮಿಸಿಕೊಳ್ಳಬಹುದು’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಸಲಹೆ ನೀಡುತ್ತಾರೆ.
‘ಎರಡು ವರ್ಷಗಳ ಹಿಂದೆ ಮೈಸೂರಿನ ರೈಲ್ವೆ ಇಲಾಖೆ (ಡಿ.ಆರ್.ಎಂ) ಅಧಿಕಾರಿಯ ಗಮನಕ್ಕೆ ರೈಲ್ವೆ ಕೆಳ ಸೇತುವೆ ನಿರ್ಮಿಸಿಕೊಡುವಂತೆ ಮನವಿಯನ್ನು ಕೊಟ್ಟಿದ್ದೆವು. ಅದಕ್ಕೆ ಇಲ್ಲಿಯ ತನಕ ಸಮಸ್ಯೆ ಆಲಿಸಲು ಬಂದಿಲ್ಲ. ಇದು ಹೀಗೆ ಮುಂದುವರಿದರೆ ಸಂಬಂಧಪಟ್ಟ ಅಧಿಕಾರಿಗಳ ಕಚೇರಿ ಎದುರು ನಾಲ್ಕು ಗ್ರಾಮಗಳ ಜನರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ನಡೆಸುತ್ತೇವೆ‘ ಎಂದು ನೊದೆಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎನ್. ಬಲರಾಮು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.