ಮಂಡ್ಯ: ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗಾಗಿ ಹಾಗೂ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ಜಿ.ಪಂ. ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ನಂತರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ಮಾತನಾಡಿ, ‘ಕೂಲಿಕಾರ್ಮಿಕರು ಹತ್ತಾರು ಬಾರಿ ಗ್ರಾಮ ಪಂಚಾಯಿತಿಗಳಿಗೆ ಅಲೆದಾಡಿದರೂ ಕೆಲಸ ಕೊಡುತ್ತಿಲ್ಲ. ಕೇಳಿದರೆ ಯಾವುದೇ ಕೆಲಸ ಇಲ್ಲ ಎಂದು ಹೇಳುತ್ತಾರೆ. ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಉದ್ದೇಶ ಪೂರ್ವಕವಾಗಿ ಕಡಿಮೆ ಕೂಲಿ ಹಣ ಹಾಕಿ ಕೆಲಸಕ್ಕೆ ಬಾರದಂತೆ ತಡೆಗಟ್ಟುವ ಹುನ್ನಾರ ನಡೆಸುತ್ತಿದ್ದಾರೆ, ಇದು ನಿಲ್ಲಬೇಕು’ ಎಂದು ಒತ್ತಾಯಿಸಿದರು.
200 ದಿನ ಕೆಲಸ ನೀಡಿ:
ಕಡಿಮೆ ಕೂಲಿ ಹಾಕಿ ಕೂಲಿಕಾರರು ಕೆಲಸಕ್ಕೆ ಬಾರದಂತೆ ಮಾಡುತ್ತಿರುವ ವಂಚನೆಯು ನಿಲ್ಲಬೇಕು. ಬರಗಾಲದ ಈ ಹೊತ್ತಿನಲ್ಲಿ ವರ್ಷಕ್ಕೆ 200 ದಿನ ಕೆಲಸ ₹600 ಕೂಲಿ ಹಣ ಹೆಚ್ಚಿಸಬೇಕು. ತಕ್ಷಣ ಜಿಲ್ಲೆಯಾದ್ಯಂತ ಕೆಲಸ ನೀಡಬೇಕು. ಕಳೆದ 6 ತಿಂಗಳ ಕಾಯಕಬಂಧುಗಳ ಪ್ರೋತ್ಸಾಹಧನವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಎನ್.ಎಂ.ಎಂ.ಎಸ್ ಆ್ಯಪ್ ಮೂಲಕ ದಿನಕ್ಕೆ ಎರಡು ಬಾರಿ ಹಾಜರಾತಿ ಹಾಕುವುದನ್ನು ಕೈಬಿಡಬೇಕು. ಈ ಆ್ಯಪ್ ಮೂಲಕ ಹಾಕುವ ಹಾಜರಾತಿ ಜಿ.ಪಿ.ಎಸ್ ಸ್ಥಳದಲ್ಲೇ ಓಪನ್ ಆಗುತ್ತದೆ. ಆದರೆ ಬೇರೆ ಜಾಗದಲ್ಲಿ ಓಪನ್ ಆಗುತ್ತಿಲ್ಲ. ಕೂಲಿ ಕೆಲಸ ಮಾಡುವ ಎಲ್ಲ ಸ್ಥಳಗಳಲ್ಲಿ ಓಪನ್ ಆಗುವ ರೀತಿ ಮಾಡಬೇಕು ಎಂದು ಆಗ್ರಹಿಸಿದರು.
ಜೆಸಿಬಿಗೆ ಅವಕಾಶ ಬೇಡ:
ನೀರಾವರಿ ಇಲಾಖೆಗೆ ಬರುವ ಕೆರೆಗಳಿಗೆ ಖಾಸಗಿ ವ್ಯಕ್ತಿಗಳು ಜೆ.ಸಿ.ಬಿ ಮೂಲಕ ಮಣ್ಣು ತೆಗೆಯಲು ಅನುಮತಿ ನೀಡಬಾರದು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು. ಬಾಕಿ ಇರುವ ಸಲಕರಣ ವೆಚ್ಚವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಖಜಾಂಚಿ ರಾಣಿ, ಮುಖಂಡರಾದ ಶೋಭಾ, ಜಯಶೀಲಾ, ಪುಟ್ಟಲಕ್ಷ್ಮಮ್ಮ, ಜಯಲಕ್ಷ್ಮಮ್ಮ, ಪ್ರೇಮಮ್ಮ, ಚಂದ್ರಮ್ಮ, ಮಂಜುಳಾ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.
‘ನೀರು–ನೆರಳಿನ ವ್ಯವಸ್ಥೆ ಕಲ್ಪಿಸಿ’
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಡಿ.ಕೆ.ಲತಾ ಮಾತನಾಡಿ, ‘ಕೆಲಸ ಮಾಡುವ ಸ್ಥಳದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ನೀಡಬೇಕು. ಕಾಯಕಬಂಧುಗಳು ಹಾಜರಾತಿ ಹಾಕಿಕೊಳ್ಳುತ್ತೇವೆ ಎನ್ನುವ ಕಡೆ ಪಂಚಾಯ್ತಿಯಿಂದ ನೌಕರರನ್ನು ನೇಮಿಸಿ ಕೊಳ್ಳಬೇಕಾಗಿಲ್ಲ. ಕಾಯಕ ಬಂಧುಗಳು ಜವಾಬ್ದಾರಿ ನಿರ್ವಹಿಸಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.
ಒಟ್ಟು ಕುಟುಂಬದಲ್ಲಿ ಇರುವ ಜಾಬ್ ಕಾರ್ಡ್ ಅನ್ನು ವಿಭಾಗವಾದ ನಂತರ ರೇಷನ್ ಕಾರ್ಡ್ ಆಧಾರದ ಮೇಲೆ ಹೊಸ ಜಾಬ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.