ಮಂಡ್ಯ: ‘87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿಗೆ ಅಂದಾಜು ₹1.30 ಕೋಟಿ ಆಯವ್ಯಯ ನಿಗದಿಯಾಗಿದ್ದು, ಎಲ್ಲಾ ಉಪಸಮಿತಿಗಳು ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸಬೇಕು’ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಕೆಲಸಗಳು ಹೆಚ್ಚು ನಡೆಯಲಿ ಎಂದರು.
ಪೋಸ್ಟರ್, ಕಮಾನು, ಹೆದ್ದಾರಿ ಫಲಕಗಳು ಸೇರಿದಂತೆ ವಿವಿಧ ಪ್ರಚಾರ ಸಾಮಗ್ರಿಗಳ ವಿನ್ಯಾಸಗಳು ಆಕರ್ಷಣೀಯವಾಗಿ ಸಿದ್ಧಪಡಿಸಿ. ಪ್ರತಿದಿನ ವಿವಿಧ ಸಮಿತಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಕೆಲಸಗಳನ್ನು ಕ್ರೋಡೀಕರಣ ಮಾಡಿಕೊಂಡು ಸುದ್ದಿಗಳನ್ನು ಬಿಡುಗಡೆ ಮಾಡಿ ಎಂದರು.
ಪ್ರಚಾರ ಸಮಿತಿ ಕ್ರಿಯಾಯೋಜನೆ ಹಾಗೂ ಪ್ರಚಾರ ಸಮಿತಿಯಲ್ಲಿ ಎದುರಾಗುವ ಕುಂದುಕೊರತೆಗಳನ್ನು ಆಲಿಸುವುದರ ಜೊತೆಗೆ ವಿವಿಧ ರೀತಿಯ ಪ್ರಚಾರ ಕಾರ್ಯದ ಮಾಹಿತಿಯನ್ನು ಸಮಿತಿ ಸದಸ್ಯರೊಂದಿಗೆ ಹಂಚಿಕೊಂಡರು.
ಹೆಚ್ಚಿನ ಅನುದಾನಕ್ಕೆ ಬೇಡಿಕೆ
ರೂಪಿಸಿರುವ ಕ್ರಿಯಾ ಯೋಜನೆಗೆ ಹೋಲಿಸಿದರೆ ಪ್ರಚಾರ ಸಮಿತಿಗೆ ನೀಡಿರುವ ಅಂದಾಜು ಅನುದಾನ ಕಡಿಮೆ ಇದೆ. ಆದ್ದರಿಂದ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡುತ್ತೇನೆ. ಪ್ರಾಯೋಜಕತ್ವದಾರರನ್ನು ಸಂಪರ್ಕಿಸುವುದು ಸಹ ಸಮಿತಿಯ ಹೆಗಲ ಮೇಲಿದೆ. ಸಮಿತಿಯ ಸದಸ್ಯರು ತಂಡಗಳನ್ನು ರಚಿಸಿಕೊಂಡು ಪ್ರಯೋಜಕತ್ವಕ್ಕೆ ಸಂಪರ್ಕಿಸಿ ಎಂದರು.
ಸಭೆಯಲ್ಲಿ ಕಸಾಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ, ಕಸಾಪ ಗೌರವ ಕಾರ್ಯದರ್ಶಿಗಳಾದ ಕೃಷ್ಣೇಗೌಡ ಹುಸ್ಕೂರು, ಹರ್ಷ, ಪ್ರಚಾರ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
‘ಮೆರವಣಿಗೆಗೆ ಉತ್ತಮ ಕಲಾತಂಡ ಆಯ್ಕೆ ಮಾಡಿ’
ಮಂಡ್ಯ: ‘87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೆರವಣಿಗೆಯು ಆಕರ್ಷಣೀಯವಾಗಿ ಜನ- ಮನದಲ್ಲಿ ಚಿರಕಾಲ ಉಳಿಯಬೇಕು ಎಂದರೆ ಮೆರವಣಿಗೆಗೆ ಉತ್ತಮ ಕಲಾತಂಡಗಳ ಆಯ್ಕೆ ಮುಖ್ಯ’ ಎಂದು ವಿಧಾನ ಪರಿಷತ್ ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮೆರವಣಿಗೆ ಉಪಸಮಿತಿ ಸಭೆ ನಡೆಸಿ ಮಾತನಾಡಿದರು.
ಮೆರವಣಿಗೆ ಉಪಸಮಿತಿಯಿಂದ ₹95 ಲಕ್ಷ ಕೋರಿ ಪ್ರಸ್ತಾವ ಸಲ್ಲಿಸಲಾಗಿತ್ತು. ತಾತ್ಕಾಲಿಕವಾಗಿ ಅಂದಾಜು ₹70 ಲಕ್ಷ ನೀಡಲಾಗಿದೆ. ನೀಡಲಾಗಿರುವ ಅನುದಾನದಲ್ಲಿ ಮೆರವಣಿಗೆಯನ್ನು ಉತ್ತಮವಾಗಿ ಆಯೋಜಿಸಬೇಕು ಎಂದರು. ಪ್ರತಿ ಜಿಲ್ಲೆಯಿಂದ 3 ಕಲಾತಂಡಗಳ ವಿವರ ಸಮಿತಿಯಲ್ಲಿ ಲಭ್ಯವಿದ್ದು ಒಂದೊಂದು ತಂಡವನ್ನು ಅವರ ಪ್ರದರ್ಶನದ ವಿಡಿಯೊ ತುಣುಕುಗಳನ್ನು ನೋಡಿ ಆಯ್ಕೆ ಮಾಡಬೇಕು. ಆಯ್ಕೆ ಮಾಡುವಾಗ ಬೇರೆ ಬೇರೆ ಕಲಾ ಪ್ರಕಾರಗಳನ್ನು ಆಯ್ಕೆ ಮಾಡಬೇಕು ಎಂದರು.
ಮೆರವಣಿಗೆಯಲ್ಲಿ 87 ಅಟೊಗಳು ಸಮ್ಮೇಳನಗಳ ಅಧ್ಯಕ್ಷರ ಭಾವಚಿತ್ರ ಮತ್ತು ಕನ್ನಡದ ಬಾವುಟದೊಂದಿಗೆ ಅಲಂಕೃತವಾಗಿ ಭಾಗವಹಿಸಲು ಸಿಂಗರಿಸಬೇಕು. ಮೆರವಣಿಗೆಯಲ್ಲಿ 20 ಎತ್ತಿನಗಾಡಿಗಳು ರೈತರ ಗೌರವವನ್ನು ಹೆಚ್ಚಿಸುವ ರೀತಿ ಜಿಲ್ಲೆಯ ಗ್ರಾಮೀಣ ಸೊಗಡಿನ ಕಂಪನ್ನು ಸೂಸುವ ರೀತಿ ಸಜ್ಜುಗೊಳಿಸಲು ಯೋಜನೆ ರೂಪಿಸಿ ಎಂದರು.
ಜಿಲ್ಲೆಯ ಸಂಸ್ಕೃತಿ ಸಾಹಿತಿ ಕೃಷಿ ಸೇರಿದಂತೆ ಇನ್ನಿತರೆ ವೈವಿಧ್ಯಮಯ ವಿಷಯಗಳನ್ನು ಒಟ್ಟುಗೂಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ರೀತಿ 5 ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಬೇಕು ಎಂದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಅರುಣಕುಮಾರ್ ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಕಸಾಪ ಗೌರವ ಕಾರ್ಯದರ್ಶಿ ಹರ್ಷ ಕೃಷ್ಣೇಗೌಡ ಹುಸ್ಕೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂದೀಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.