ADVERTISEMENT

ಮಂಡ್ಯ ಸಾಹಿತ್ಯ ಸಮ್ಮೇಳನ: ಸಮನ್ವಯ ಸಮಿತಿ ರಚಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 14:44 IST
Last Updated 30 ಜೂನ್ 2024, 14:44 IST
   

ಮಂಡ್ಯ: ಡಿಸೆಂಬರ್ 20, 21 ಹಾಗೂ 22ರಂದು ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜವಾಬ್ದಾರಿ ನಿರ್ವಹಿಸಲು ಸಮನ್ವಯ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಸಾಪ ಪದಾಧಿಕಾರಿಗಳೊಂದಿಗೆ ಭಾನುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಕೆ. ರವಿಕುಮಾರ್ ಚಾಮಲಾಪುರ ನಿಧನದ ಹಿನ್ನೆಲೆಯಲ್ಲಿ ತೆರವಾಗಿರುವ ಅಧ್ಯಕ್ಷರ ಜವಾಬ್ದಾರಿಯನ್ನು ನಿರ್ವಹಿಸಲು ಹಾಗೂ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ದೃಷ್ಟಿಯಿಂದ ಸಮ್ಮೇಳನ ಮುಗಿಯುವವರೆಗೆ ತಾತ್ಕಾಲಿಕ ಸಮಿತಿಯೊಂದನ್ನು ರಚಿಸುವ ನಿರ್ಧಾರಕ್ಕೆ ಬರಲಾಯಿತು.

ADVERTISEMENT

ಸಮಿತಿ ರಚಿಸುವ ಜವಾಬ್ದಾರಿಯನ್ನು ಸಚಿವ ಎನ್.ಚಲುವರಾಯಸ್ವಾಮಿ, ಕೇಂದ್ರ ಕಸಾಪ ಅಧ್ಯಕ್ಷ ಮಹೇಶ ಜೋಶಿ ಹಾಗೂ ಜಿಲ್ಲಾಧಿಕಾರಿ ಕುಮಾರ ಅವರಿಗೆ ವಹಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ‘ಸರ್ಕಾರ ಮಂಡ್ಯದಲ್ಲಿ ಸಮ್ಮೇಳನ ನಡೆಸಲು ಒಪ್ಪಿಗೆ ನೀಡಿದೆ. ಅದಕ್ಕಾಗಿ ಸಿದ್ಧತೆಗಳು ಆರಂಭವಾಗಬೇಕು. ಯಾವುದೇ ಅಪಸ್ವರವಿಲ್ಲದೆ ಸೌಹಾರ್ದ, ಸಹಕಾರ, ಸಮನ್ವಯತೆಯಿಂದ ಕೆಲಸ ನಿರ್ವಹಿಸಲು ನಿಮ್ಮೆಲ್ಲರ ಅಭಿಪ್ರಾಯ ಸಂಗ್ರಹಿಸಲು ಈ ಸಭೆ ಕರೆಯಲಾಗಿದೆ. ಮೂರನೇ ಬಾರಿ ನಡೆಯುತ್ತಿರುವ ಈ ಸಮ್ಮೇಳನ ಯಶಸ್ವಿಯಾಗಿ ನಡೆಯಬೇಕು. ಅದಕ್ಕಾಗಿ ಎಲ್ಲರೂ ಜವಾಬ್ದಾರಿ ತೆಗೆದುಕೊಂಡು ಕೈ ಜೋಡಿಸುವ ಭರವಸೆ ನೀಡಿದರೆ ತಾವು ಮುಂದುವರಿಯುವುದಾಗಿ ತಿಳಿಸಿದರು. ಇದಕ್ಕೆ ಸಭೆ ಒಪ್ಪಿಗೆ ನೀಡಿತು.

ಮಾದರಿ ಸಮ್ಮೇಳನ...

ಕಸಾಪ ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ, ‘ಹಾವೇರಿಯಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನದಲ್ಲಿ ಮಂಡ್ಯದಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಮಂಡ್ಯದಲ್ಲಿ ನಡೆಯುವ ಸಮ್ಮೇಳನ ಮುಂದೆ ನಡೆಯುವ ಸಮ್ಮೇಳನಗಳಿಗೆ ಮಾರ್ಗದರ್ಶಿಯಾಗಬೇಕು. ಆ ರೀತಿ ಸಮ್ಮೇಳನ ನಡೆಸಲು ಎಲ್ಲರೂ ಸಹಕರಿಸಬೇಕು’ ಎಂದು ತಿಳಿಸಿದರು.

ಶಾಸಕ ಪಿ.ರವಿಕುಮಾರ್‌, ಸಮ್ಮೇಳನ ಪುಸ್ತಕ ಪ್ರಕಟಣಾ ಸಮಿತಿ ಅಧ್ಯಕ್ಷ ಎಚ್.ಎಸ್.ಮುದ್ದೇಗೌಡ, ಕಸಾಪ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ, ಮೀರಾ ಶಿವಲಿಂಗಯ್ಯ, ಡಿ.ಪಿ. ಸ್ವಾಮಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೃಷ್ಣೇಗೌಡ ಹುಸ್ಕೂರು, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಚಂದ್ರಲಿಂಗು, ಪ್ರಕಾಶ್ ಮೇನಾಗರ, ಬಸವೇಗೌಡ ಖರಡ್ಯ, ಮಂಜುನಾಥ್ ಬಲ್ಲೇನಹಳ್ಳಿ, ಸುಜಾತಕೃಷ್ಣ, ಕ್ರಾಂತಿಸಿಂಹ, ಎಂ.ಸಿ.ಭಾಸ್ಕರ್ , ಅಂಜನಾ ಶ್ರೀಕಾಂತ್, ವಿ.ಹರ್ಷ ಪಣ್ಣೆದೊಡ್ಡಿ ಮುಂತಾದವರು ತಮ್ಮ ಸಲಹೆ ನೀಡಿದರು.

ಸಭೆಯಲ್ಲಿ ಕೇಂದ್ರ ಕಸಾಪ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಪಟೇಲ್ ಪಾಂಡು, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ. ಧರಣೇಂದ್ರಯ್ಯ, ಗೌರವಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಸಂಘ-ಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್, ಸುನಿಲ್‍ಕುಮಾರ್, ಅಪೂರ್ವ ಚಂದು ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

ಸ್ಥಳ ವೀಕ್ಷಣೆ...

ಸಭೆಯ ನಂತರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಈಗಾಗಲೇ ಗುರುತಿಸಿರುವ ಬೆಂಗಳೂರು- ಮೈಸೂರು ಹೆದ್ದಾರಿಯ ಅಮರಾವತಿ ಹೋಟೆಲ್ ಹಿಂಭಾಗದ ಪ್ರದೇಶ ಹಾಗೂ ನಾಗಮಂಗಲ ರಸ್ತೆಯ ಚಿಕ್ಕಮಂಡ್ಯ ಭಾಗದಲ್ಲಿರುವ ಗದ್ದೆಯ ಬಯಲು ಪ್ರದೇಶವನ್ನು ಜಿಲ್ಲಾಧಿಕಾರಿ ಕುಮಾರ ಮತ್ತು ಕಸಾಪ ಪದಾಧಿಕಾರಿಗಳು ವೀಕ್ಷಿಸಿದರು.

ಚಿಕ್ಕಮಂಡ್ಯ ವ್ಯವಸಾಯ ಪ್ರದೇಶದಲ್ಲಿ ಬೆಳೆ ಬೆಳೆಯಲು ಹಾಗೂ ನಿರ್ವಹಣೆ ಹೆಚ್ಚು ತ್ರಾಸದಾಯಕವಾಗುವ ಸಂಭವವಿರುವುದರಿಂದ, ಬಹುತೇಕ ಸಮತಟ್ಟಾದ ಹಾಗೂ ಗಟ್ಟಿ ಭೂಮಿಯಿಂದ ಕೂಡಿರುವ ಅಮರಾವತಿ ಪ್ರದೇಶ ಸಮ್ಮೇಳನಕ್ಕೆ ಸೂಕ್ತ ಎಂಬ ಅಭಿಪ್ರಾಯಗಳು ಕೇಳಿಬಂತು. ಕೆಲವೇ ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.