ADVERTISEMENT

ಶ್ರೀರಂಗಪಟ್ಟಣ | ನೆಲಮಾಳಿಗೆ ಅಗೆದ ದುಷ್ಕರ್ಮಿಗಳು

ಶ್ರೀರಂಗಪಟ್ಟಣದ ಕೋಟೆ ಹಾಗೂ ಕಂದಕದ ನಡುವೆ ಈಚೆಗೆ ಪತ್ತೆಯಾದ ಐತಿಹಾಸಿಕ ಸ್ಥಳ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 13:22 IST
Last Updated 19 ಅಕ್ಟೋಬರ್ 2024, 13:22 IST
ಶ್ರೀರಂಗಪಟ್ಟಣದ ಕೋಟೆ ಮತ್ತು ಕಂದಕದ ನಡುವೆ ಈಚೆಗೆ ಪತ್ತೆಯಾಗಿರುವ ಐತಿಹಾಸಿಕ ನೆಲಮಾಳಿಗೆ ಸ್ಮಾರಕದ ಒಳ ಭಾಗವನ್ನು ದುಷ್ಕರ್ಮಿಗಳು ಅಗೆದಿರುವುದು
ಶ್ರೀರಂಗಪಟ್ಟಣದ ಕೋಟೆ ಮತ್ತು ಕಂದಕದ ನಡುವೆ ಈಚೆಗೆ ಪತ್ತೆಯಾಗಿರುವ ಐತಿಹಾಸಿಕ ನೆಲಮಾಳಿಗೆ ಸ್ಮಾರಕದ ಒಳ ಭಾಗವನ್ನು ದುಷ್ಕರ್ಮಿಗಳು ಅಗೆದಿರುವುದು   

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಕೋಟೆ ಮತ್ತು ಕಂದಕದ ನಡುವೆ ಈಚೆಗೆ ಪತ್ತೆಯಾಗಿರುವ ಐತಿಹಾಸಿಕ ಜೋಡಿ ನೆಲಮಾಳಿಗೆಗಳ ಒಳ ಭಾಗವನ್ನು ದುಷ್ಕರ್ಮಿಗಳು ಅಗೆದು ಹಾಕಿದ್ದಾರೆ.

ಇಲ್ಲಿನ ಮೈಸೂರು ಗೇಟ್‌ಗೆ ಕೂಗಳತೆಯ ದೂರದಲ್ಲಿ, ನೈರುತ್ಯ ದಿಕ್ಕಿನಲ್ಲಿರುವ ನೆಲಮಾಳಿಗೆಯ ತಳ ಭಾಗವನ್ನು ಅಗೆಯಲಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಈ ಕೃತ್ಯ ನಡೆದಿದೆ.

ಸುಮಾರು 8 ಅಡಿ ಅಗಲ ಮತ್ತು 15 ಅಡಿ ಉದ್ದ ಇರುವ ನೆಲಮಾಳಿಗೆಗಳ ಚುರಕಿ ಗಾರೆಯ ನೆಲಹಾಸನ್ನು ಅಗೆದು ಛಿದ್ರಗೊಳಿಸಲಾಗಿದೆ. ಸುಮಾರು ಎರಡು ಅಡಿ ಆಳದಷ್ಟು ಬಗೆದಿರುವುದು ಕಂಡು ಬಂದಿದೆ. ಗಟ್ಟಿ ನೆಲಹಾಸನ್ನು ಹಾರೆ ಅಥವಾ ಪಿಕಾಸಿಯನ್ನು ಬಳಸಿ ಬಳಸಿ ಅಗೆದಿರುವ ಸಾಧ್ಯತೆ ಇದೆ. ಈ ನೆಲಮಾಳಿಗೆಗಳ ಮುಂದಿನ ಲಾಳಾಕಾರದ ಕಟ್ಟಡದ ಎರಡು ಕಲ್ಲಿನ ದಿಮ್ಮಿಗಳನ್ನು ಕೂಡ ಕಿತ್ತು ಹಾಕಲಾಗಿದೆ. ಇದು ನಿಧಿಗಳ್ಳರ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ.

ADVERTISEMENT

‘ಈ ಜೋಡಿ ನೆಲಮಾಳಿಗೆ ಸ್ಮಾರಕಗಳನ್ನು ಸಂರಕ್ಷಣೆ ಮಾಡದ ಕಾರಣ ಇವುಗಳ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ. ಗಿಡ ಗಂಟಿಗಳ ಮಧ್ಯೆ ಮುಚ್ಚಿ ಹೋಗಿದ್ದ ಈ ಸ್ಮಾರಕಗಳ ಪರಿಸರವನ್ನು ವಿವಿಧ ಸಂಘ, ಸಂಸ್ಥೆಗಳ ಕಾರ್ಯಕರ್ತರು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಕಾಣುವಂತೆ ಮಾಡಿದ್ದಾರೆ. ಆದರೆ ಪ್ರಾಚ್ಯವಸ್ತು ಇಲಾಖೆ ಇವುಗಳ ಸಂರಕ್ಷಣೆಗೆ ಅಗತ್ಯ ಕ್ರಮ ವಹಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ’ ಎಂದು ಸಮರ್ಪಣಾ ಟ್ರಸ್ಟ್‌ ಅಧ್ಯಕ್ಷ ಕಡತನಾಳು ಕೆ.ಎಸ್‌. ಜಯಶಂಕರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈ ನೆಲಮಾಳಿಗೆಗಳು ರಚನಾ ಶೈಲಿಯ ದೃಷ್ಟಿಯಿಂದ ವಿಶಿಷ್ಟವಾಗಿವೆ. ಟಿಪ್ಪು ಸುಲ್ತಾನ್‌ ಕಾಲದ ಈ ಸ್ಮಾರಕಗಳು ಮುಂದಿನ ಪೀಳಿಗೆಗೂ ಉಳಿಯುವಂತೆ ಕ್ರಮ ವಹಿಸುವ ಅಗತ್ಯವಿದೆ’ ಎಂದು ಸ್ಥಳಕ್ಕೆ ಭೇಟಿ ನಿಡಿದ್ದ ಇತಿಹಾಸ ಸಂಶೋಧಕರಾದ ಹರ್ಷವರ್ಧನ ಮತ್ತು ಗುರುಮೂರ್ತಿ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.