ADVERTISEMENT

ಶ್ರೀರಂಗಪಟ್ಟಣ | ಮಣ್ಣೆತ್ತಿನ ಅಮಾವಾಸ್ಯೆ: ಆರತಿ ಉಕ್ಕಡದಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 14:30 IST
Last Updated 5 ಜುಲೈ 2024, 14:30 IST
ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಶ್ರೀರಂಗಪಟ್ಟಣ ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ಮಾರಮ್ಮ ದೇವಾಲಯಕ್ಕೆ ಶುಕ್ರವಾರ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು
ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಶ್ರೀರಂಗಪಟ್ಟಣ ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ಮಾರಮ್ಮ ದೇವಾಲಯಕ್ಕೆ ಶುಕ್ರವಾರ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು   

ಶ್ರೀರಂಗಪಟ್ಟಣ: ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ತಾಲ್ಲೂಕಿನ ಆರತಿ ಉಕ್ಕಡದ ಪ್ರಸಿದ್ಧ ಅಹಲ್ಯಾದೇವಿ ದೇವಾಲಯಕ್ಕೆ ಶುಕ್ರವಾರ ಹೆಚ್ಚಿನ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ದೇವಾಲಯದಲ್ಲಿ ಮುಂಜಾನೆ 3 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ಬೆಳಿಗ್ಗೆ 7 ಗಂಟೆ ವೇಳೆಗೆ ದೇವಾಲಯದ ಆವರಣದಲ್ಲಿ ಸಹಸ್ರಾರು ಮಂದಿ ಜಮಾಯಿಸಿದ್ದರು. ದೇವಾಲಯದಿಂದ ಪರ್ಲಾಂಗು ದೂರದ ವರೆಗೂ ಭಕ್ತರು ಸಾಲುಗಟ್ಟಿ ನಿಂತಿದ್ದರು. ‘ತಡೆ’ ಒಡೆಯುವುದು, ಮೊಟ್ಟೆ ಒಡೆಯುವುದು, ‘ಕಟ್ಟೆ’ ಒಡೆಯುವುದು ಇತರ ಸಾಂಪ್ರದಾಯಿಕ ಕೈಂಕರ್ಯಗಳು ನಡೆದವು. ಹರಕೆ ಹೊತ್ತವರು ದೇವಾಲಯದ ಆಸುಪಾಸಿನಲ್ಲಿ ಕುರಿ, ಕೋಳಿಗಳ ಬಲಿ ಒಪ್ಪಿಸಿ ಬಾಡೂಟದ ಸಮಾರಾಧನೆ ನಡೆಸುತ್ತಿದ್ದ ದೃಶ್ಯ ಕಂಡು ಬಂದವು. ಬೆಂಗಳೂರು, ಮೈಸೂರು ಇತರ ಕಡೆಗಳಿಂದಲೂ ಭಕ್ತರು ಆಗಮಿಸಿದ್ದರು. ಪೊಲೀಸರನ್ನು ನಿಯೋಜಿಸಲಾಗಿತ್ತು.

ಪಟ್ಟಣ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯದಕ್ಕೂ ಶುಕ್ರವಾರ ಹೆಚ್ಚಿನ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್‌ ಬಳಿ ಮಹಾಕಾಳಿ ದೇವಾಲಯಕ್ಕೂ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು. ದೇವಾಲಯದ ಪ್ರಧಾನ ಅರ್ಚಕ ಮೋಹನ ಗುರೂಜಿ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪ್ರತ್ಯಂಗೀರ ಹೋಮ ನಡೆಯಿತು. ದೋಷ ನಿವಾರಣೆಗಾಗಿ ತಡೆ ಒಡೆಯುವ ಆಚರಣೆ ನಡೆಯಿತು.

ADVERTISEMENT

ಪಟ್ಟಣದ ಚಾಮುಂಡೇಶ್ವರಿ ದೇವಾಲಯ, ಮುಖ್ಯ ಬೀದಿಯಲ್ಲಿರುವ ಮಹಾಲಕ್ಷ್ಮಿ (ಗಂಗಡಿಕಾರ್‌ ಒಕ್ಕಲಿಗರ ಮಾರಮ್ಮ) ದೇವಾಲಯ, ಕಾಳಿಕಾಂಬ ಕಮಠೇಶ್ವರ ದೇವಾಲಯಗಳಲ್ಲಿ ಕೂಡ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆಗಳು ನಡೆದವು. ಪ್ರಸಾದ ವಿತರಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.