ADVERTISEMENT

ಕಿಕ್ಕೇರಿ: ಕಳ್ಳನಕೆರೆಯಲ್ಲಿ ಹಲವರಿಗೆ ಕಚ್ಚಿದ ನಾಯಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 16:10 IST
Last Updated 16 ನವೆಂಬರ್ 2024, 16:10 IST
ಕಿಕ್ಕೇರಿ ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ ನಾಯಿಗಳ ಕಾಟ
ಕಿಕ್ಕೇರಿ ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ ನಾಯಿಗಳ ಕಾಟ   

ಕಿಕ್ಕೇರಿ: ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ ಶನಿವಾರ ನಾಯಿಯೊಂದು ಹಲವು ಜನರನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ.

ರೈತರು ಜಮೀನು ಕಡೆಗೆ ತೆರಳುವಾಗ ಈ ಘಟನೆ ನಡೆದಿದ್ದು, ನಾಯಿ ದಾಳಿಗೆ ಒಳಗಾದವರು ಬಹುತೇಕ ರೈತರಾಗಿದ್ದು ಜಮೀನುಗಳಿಗೆ ಒಂಟಿಯಾಗಿ ತೆರಳಲು ಭಯಪಡುವಂತೆ ಆಗಿದೆ.

ಗ್ರಾಮದ ಪುನೀತ್ ಕುಮಾರ್, ದಿಲೀಪ್, ಸುರೇಶ ಹಾಗೂ ನಿವೃತ್ತ ಶಿಕ್ಷಕ ಗಂಗಾಧರ್ ಅವರಿಗೆ ನಾಯಿ ಕಚ್ಚಿದ್ದು, ಗ್ರಾಮ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಯಿಗಳ ಕಾಟ ಈಚೆಗೆ ಬಹಳ ಹೆಚ್ಚಾಗಿದ್ದು, ನಾಯಿಗಳ ನಿಯಂತ್ರಣಕ್ಕೆ ಕಡಿವಾಣ ಇಲ್ಲವಾಗಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ರಾತ್ರಿ ವೇಳೆ ಗ್ರಾಮದ ಹೊಲ, ತೋಟ, ಕಬ್ಬಿನ ಗದ್ದೆಗಳಲ್ಲಿ ತಂಗುತ್ತಿವೆ. ಬೆಳಿಗ್ಗೆಯೇ ದಿಢೀರನೆ ಗ್ರಾಮಕ್ಕೆ ನುಗ್ಗುತ್ತಿದ್ದು, ರೈತರು ಹಾಲಿನ ಡೇರಿ, ಹೊಲ ಗದ್ದೆಗೆ ತೆರಳಲು ಕೋಲು ಹಿಡಿದುಕೊಂಡು ಹೋಗಬೇಕಾದ ಸ್ಥಿತಿ ಬಂದಿದೆ.

‘ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗಿದ್ದು, ಪೋಷಕರೇ ನಿಗದಿತ ಸ್ಥಳಕ್ಕೆ ಬಿಡಬೇಕಿದೆ. ರಾತ್ರಿ ವೇಳೆ ಗ್ರಾಮದವರೇ ಊರಿಗೆ ಪ್ರವೇಶ ಮಾಡಲು ಭಯಪಡುವ ಸ್ಥಿತಿ ಎದುರಾಗಿದೆ. ಜನ- ಜಾನುವಾರು ಮೇಲೆ ಎಗರುವ ನಾಯಿಗಳ ಉಪಟಳಕ್ಕೆ ಕಡಿವಾಣ ಇಲ್ಲದಂತಾಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಲಿಂಗರಾಜೇಗೌಡ ಅಳಲು ತೋಡಿಕೊಂಡರು.

ಗಾಯಾಳುಗಳನ್ನು ಕಿಕ್ಕೇರಿಯ ಸಮುದಾಯ ಅರೋಗ್ಯ ಕೇಂದ್ರಕ್ಕೆ ಕರೆತಂದಿದ್ದು, ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಚುಚ್ಚು ಮದ್ದು ಇಲ್ಲದೆ ಹಾಸನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು.

‘ನಾಯಿಗಳ ನಿಯಂತ್ರಣಕ್ಕೆ ಕಾನೂನಾತ್ಮಕವಾಗಿ ಕ್ರಮವಹಿಸಲು ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ಕಿಕ್ಕೇರಿ ಗ್ರಾಪಂ ಪಿಡಿ‌ಒ ಚಲುವರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.