ADVERTISEMENT

ಬೇಬಿಬೆಟ್ಟ ಪ್ರದೇಶದಲ್ಲಿ ಪರೀಕ್ಷಾರ್ಥ ಸ್ಫೋಟ; ರೈತ ಮುಖಂಡರ ಆಕ್ರೋಶ

ಗಣಿ ಲಾಬಿಗೆ ಮಣಿಯದಂತೆ ವಿವಿಧ ಸಂಘಟನೆಗಳ ಒತ್ತಾಯ, ಸಭೆ ವಿಫಲ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 16:17 IST
Last Updated 19 ಫೆಬ್ರುವರಿ 2024, 16:17 IST

ಮಂಡ್ಯ; ಬೇಬಿಬೆಟ್ಟ ಪ್ರದೇಶದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸುವಂತೆ ಹೈಕೋರ್ಟ್‌ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕುಮಾರ ವಿವಿಧ ಸಂಘಟನೆಗಳ ಮುಖಂಡರ ಜೊತೆ ಸೋಮವಾರ ಸಭೆ ನಡೆಸಿದರು. ಆದರೆ ಪರೀಕ್ಷಾರ್ಥ ಸ್ಫೋಟ ನಡೆಸಬಾರದು ಎಂದು ಮುಖಂಡರು ಪಟ್ಟು ಹಿಡಿದ ಕಾರಣ ಸಭೆ ವಿಫಲಗೊಂಡಿತು.

ಗಣಿ ಮಾಲೀಕರು ಸಲ್ಲಿಸಿದ್ದ ಮನವಿ ಮೇರೆಗೆ ಹೈಕೋರ್ಟ್‌ ಬೇಬಿಬೆಟ್ಟ ಹಾಗೂ ಆಸುಪಾಸಿನಲ್ಲಿ ಕಲ್ಲು ಗಣಿಗಾರಿಕೆ ನಡೆಸಿದರೆ ಕೆಆರ್‌ಎಸ್‌ ಜಲಾಶಯಕ್ಕೆ ತೊಂದರೆ ಉಂಟಾಗುತ್ತದೆಯೇ ಎಂಬ ಬಗ್ಗೆ ಪರಿಶೀಲಿಸಲು ಪರೀಕ್ಷಾರ್ಥ ಸ್ಫೋಟ ನಡೆಸುವಂತೆ ಹೈಕೋರ್ಟ್‌ ಆದೇಶ ನೀಡಿದೆ. ಜಿಲ್ಲಾಡಳಿತ, ಗಣಿ ಇಲಾಖೆ ಸ್ಫೋಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಅಭಿಪ್ರಾಯ ಪಡೆಯಲು ಜಿಲ್ಲಾಧಿಕಾರಿ ಸಭೆ ಕರೆದಿದ್ದರು.

‘ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಆದೇಶ ಉಲ್ಲಂಘನೆಯಾಗುತ್ತದೆ’ಎಂದು ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಂಘಟನೆಗಳ ಮುಖಂಡರು ಬೇಬಿಬೆಟ್ಟದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಲು ಅವಕಾಶ ನೀಡುವುದಿಲ್ಲ. ಸ್ಫೋಟ ನಡೆಸಲು ಬಂದರೆ ಗೋಬ್ಯಾಕ್‌ ಚಳವಳಿ ನಡೆಸಲಾಗುವುದು. ಅಧಿಕಾರಿಗಳು ಗಣಿ ಮಾಲೀಕರು, ಲಾಭಕೋರ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದರೆ ಬೃಹತ್‌ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ತಂದು ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು. 2006ರಲ್ಲಿ ನಡೆದ ಪರೀಕ್ಷೆಯಲ್ಲಿ ಕಲ್ಲು ಗಣಿಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ತೊಂದರೆ ಇಲ್ಲ ಎಂದು ಈಗಾಗಲೇ ವರದಿ ಪಡೆದಿದ್ದಾರೆ. ಈಗಲೂ ಅದೇರೀತಿ ಅಕ್ರಮ ವರದಿ ಪಡೆಯಲು ಷಡ್ಯಂತ್ರ ಮಾಡಲಾಗುತ್ತಿದೆ. ಪರೀಕ್ಷಾರ್ಥ ಸ್ಫೋಟಕ್ಕೆ ಅವಕಾಶ ನೀಡುವುದಿಲ್ಲ ಎಂದರು.

‘ಬೇಬಿಬೆಟ್ಟ ಅರಣ್ಯ ಪ್ರದೇಶ ಮೈಸೂರು ಅರಮನೆ ಆಸ್ತಿಯಾಗಿದ್ದು ತಮ್ಮ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಕೋರಿ ಪ್ರಮೋದದೇವಿ ಒಡೆಯರ್‌ ಅವರು ಮನವಿ ಸಲ್ಲಿಸಿದ್ದಾರೆ. ಕೇಂದ್ರ ಅರಣ್ಯ ಇಲಾಖೆ ಅನುಮತಿ ಇಲ್ಲದೇ ಅಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಲು ಸಾಧ್ಯವಿಲ್ಲ. ಹೈಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ ಆದೇಶ ಪಡೆಯಲಾಗಿದೆ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ಹೇಳಿದರು.

ಮುಖಂಡರಾದ ಕೆಂಪೂಗೌಡ, ಪ್ರಸನ್ನ ಅರಕೆರೆ, ಕೆನ್ನಾಳು ನಾಗರಾಜ್‌, ಮಂಜು, ರಾಘವೇಂದ್ರ, ಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.