ಮೇಲುಕೋಟೆ: ಇಲ್ಲಿನ ಚೆಲುವ ನಾರಾಯಣಸ್ವಾಮಿಗೆ ಶನಿವಾರ ಮಹಾರಥೋತ್ಸವ ಸಂಭ್ರಮದಿಂದ ನೆರವೇರಿತು.
ವೈರಮುಡಿ ಜಾತ್ರಾ ಮಹೋತ್ಸವದ ಏಳನೇ ತಿರುನಾಳ್ ನಿಮಿತ್ತ ನಡೆದ ಬ್ರಹ್ಮರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ನಾಲ್ಕು ಬೀದಿಗಳಲ್ಲಿ ಸಂಚರಿಸಿದ ರಥದಲ್ಲಿ ವಿರಾಜಮಾನನಾದ ಚೆಲುವನಾರಾಯ ಣನನ್ನು ಭಕ್ತರು ಕಣ್ತುಂಬಿಕೊಂಡರು.
ಬೆಳಿಗ್ಗೆ 7.30ರವೇಳೆಗೆ ಯಾತ್ರಾ ದಾನ, ರಥಬಲಿ ನೆರವೇರಿಸಿದ ನಂತರ 8ಕ್ಕೆ ವಜ್ರಖಚಿತ ರಾಜಮುಡಿ ಕಿರೀಟ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಹೂರ್ತ ಪಠಣ ಮಾಡಿ ರಥಾರೋಹಣ ನೆರವೇರಿಸಲಾಯಿತು.
ವೇದ ಮತ್ತು ದಿವ್ಯಪ್ರಬಂಧ ಪಾರಾಯಣದೊಂದಿಗೆ ರಥ ಮಂಟಪದಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ನೆರವೇರಿದವು. ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ನಾಗಮ್ಮ ದಂಪತಿ ಉಪಸ್ಥಿ ತರಿದ್ದು, ರಥಮಂಟಪದಲ್ಲೇ ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ, ಧನಲಕ್ಷ್ಮಿ ದಂಪತಿಯೂ ರಥೋತ್ಸವದಲ್ಲಿ ಭಾಗಿಯಾಗಿ ಸ್ವಾಮಿಯ ಉತ್ಸವಕ್ಕೆ ರೇಷ್ಮೆ ವಸ್ತ್ರ ಸಮರ್ಪಿಸಿ, ದೇವಾಲಯದ ಮುಂಭಾಗ ಮಹಾರಥಕ್ಕೆ ವಿಶೇಷಪೂಜೆ ಸಲ್ಲಿಸಿದರು.
ಬೆಳಿಗ್ಗೆ 9.45ರವೇಳೆಗೆ ಆರಂಭವಾದ ಮಹಾರಥೋತ್ಸವ ಮಾರಿಗುಡಿಬೀದಿ, ರಾಜಬೀದಿ ಹಾಗೂ ವಾನಮಾಮಲೆ ಮಠದ ಬೀದಿಗಳಲ್ಲಿ ಸಂಚರಿಸಿ 11.30 ರವೇಳೆಗೆ ರಥಮಂಟಪ ಸೇರಿತು. ಶ್ರೀದೇವಿ, ಭೂದೇವಿ ಮತ್ತು ಭಗವದ್ರಾ ಮಾನುಜರೊಂದಿಗೆ ರಥಾರೂಢನಾಗಿದ್ದ ಚೆಲುವನಾರಾಯಣಸ್ವಾಮಿಯ ದರ್ಶನ ಮಾಡಿದ ಭಕ್ತರು, ತೇರಿಗೆ ಹಣ್ಣುಜವನ ಎಸೆದು ಮೆಣಸು, ಉಪ್ಪನ್ನು ಸಮರ್ಪಿಸಿದರು. ರಥೋತ್ಸವ ಆರಂಭದ ವೇಳೆ ತೇರು ಎಳೆಯಲು ಭಕ್ತರ ಕೊರತೆಯಾದರೂ ಅರ್ಧಗಂಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದರು.
ಕೋವಿಡ್ ನಿಯಮದಿಂದಾಗಿ ವೈರಮುಡಿ ಉತ್ಸವಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ರಥೋತ್ಸವಕ್ಕೆ ಯಾವುದೇ ನಿರ್ಬಂಧ ಇರಲಿಲ್ಲ. ಕೋವಿಡ್ ಮಾರ್ಗಸೂಚಿ ಪಾಲಿಸಿ ಭಕ್ತರು ದೇವರ ದರ್ಶನ ಪಡೆದರು.
ಪಾಂಡವಪುರ ಉಪವಿಭಾಗಾ ಧಿಕಾರಿ ಶಿವಾನಂದಮೂರ್ತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ, ತಹಶೀಲ್ದಾರ್ ಪ್ರಮೋದ್‌ಪಾಟೀಲ್, ಗ್ರಾ.ಪಂ ಅಧ್ಯಕ್ಷ ಅವ್ವಗಂಗಾಧರ್, ಪಿಡಿಒ ತಮ್ಮೇಗೌಡ ಭಾಗವಹಿಸಿದ್ದರು.
ಪಾಂಡವಪುರ ಸಿಪಿಐ ಪ್ರಭಾಕರ್ ಮತ್ತು ಮೇಲುಕೋಟೆ ಪಿಎಸ್‌ಐ ಗಣೇಶ್ ಬಂದೋಬಸ್ತ್ ಮಾಡಲಾಗಿತ್ತು.
ಪೌರಕಾರ್ಮಿಕರಿಂದ ಕೈಂಕರ್ಯ: ರಥೋತ್ಸವ ಸಾಗುತ್ತಿದ್ದಂತೆ ಅದನ್ನು ಹಿಂಬಾಲಿಸಿದ 15 ಮಂದಿ ಪೌರಕಾ ರ್ಮಿಕರು ಸ್ವಚ್ಛತಾ ಮಾಡಿ ವಿಶೇಷ ಕೈಂಕರ್ಯ ನೆರವೇರಿಸಿದರು.
ಭಕ್ತರು ಬಳಸಿ ಎಸೆದ ಊಟದ ಎಲೆಗಳು, ಲೋಟ, ಹಣ್ಣುಜವನದ ಉಳಿಕೆ, ತೆಂಗಿನಕಾಯಿ ಚೂರುಗಳನ್ನು ಸ್ವಚ್ಛಮಾಡುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.