ADVERTISEMENT

ಮೇಲುಕೋಟೆ: ವೈಭವದ ರಾಜಮುಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 15:15 IST
Last Updated 9 ನವೆಂಬರ್ 2024, 15:15 IST
<div class="paragraphs"><p>ರಾಜಮುಡಿ ಉತ್ಸವ</p></div>

ರಾಜಮುಡಿ ಉತ್ಸವ

   

ಮೇಲುಕೋಟೆ: ‘ಕಾರ್ತಿಕ ಮಾಸದ ಅಂಗವಾಗಿ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಗೆ ವಜ್ರಖಚಿತ ರಾಜಮುಡಿ ಹಾಗೂ 16 ಬಗೆಯ ಆಭರಣ ತೊಡಿಸಿ ‘ರಾಜಮುಡಿ ಉತ್ಸವ’ವನ್ನು ವೈಭವದಿಂದ ಶನಿವಾರ ನೆರವೇರಿಸಲಾಯಿತು. 

ದೇವಾಲಯಕ್ಕೆ ಮೈಸೂರು ಅರಸ ರಾಜ ಒಡೆಯರ್‌ ಸಮರ್ಪಿಸಿದ್ದ ರಾಜಮುಡಿ ಕಿರೀಟವನ್ನು ಮಂಡ್ಯ ಜಿಲ್ಲಾ ಖಜಾನೆಯಿಂದ ಪೊಲೀಸ್‌ ಭದ್ರತೆಯಲ್ಲಿ ಸಂಜೆ ಮೇಲುಕೋಟೆಗೆ ತರಲಾಯಿತು. ಇಲ್ಲಿ ಆಂಜನೇಯಸ್ವಾಮಿ ಸನ್ನಿಧಿಯ ಬಳಿ ಕಿರೀಟಕ್ಕೆ ಪೂಜೆ ಸಲ್ಲಿಸಿದ ನಂತರ, ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು.

ADVERTISEMENT

ದೇವಾಲಯದ ಒಳಾಂಗಣದಲ್ಲಿ ಅಧಿಕಾರಿಗಳ ಸಮಕ್ಷಮದಲ್ಲಿ ರಾಜಮುಡಿ ಮತ್ತು ಗಂಡಭೇರುಂಡ ಪದಕ ಹಾಗೂ ಆಭರಣಗಳನ್ನು ಪರಿಶೀಲಿಸಿ ಸ್ಥಾನಿಕರು, ಅರ್ಚಕರು, ಪರಿಚಾರಕರು ಹಾಗೂ ಕಾವಲುಗಾರರ ವಶಕ್ಕೆ ನೀಡಲಾಯಿತು. ರಾತ್ರಿ 7:30ಕ್ಕೆ ಶ್ರೀದೇವಿ ಭೂದೇವಿಯರೊಂದಿಗೆ ಅಲಂಕೃತನಾದ ಚೆಲುವನಾರಾಯಣನಿಗೆ ರಾಜಮುಡಿ ಕಿರೀಟ ಧರಿಸಿ ದಿವ್ಯಪ್ರಬಂಧ ಪಾರಾಯಣದೊಂದಿಗೆ ಉತ್ಸವ ನೆರವೇರಿಸಲಾಯಿತು.

ಈ ವೇಳೆ ಉಪವಿಭಾಗಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಸಂತೋಷ್, ಚೆಲುವನಾರಾಯಣ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಶೀಲಾ, ಸ್ಥಾನಿಕರಾದ ಕಗರಂ ರಾಮಪ್ರೀಯ, ಶ್ರೀನಿವಾಸನ್ ಗುರೂಜಿ, ಮುಕುಂದ, ಸಂಪತ್ ಕುಮಾರನ್, ಅರ್ಚಕರಾದ ವರದರಾಜು ಭಟ್ಟರ್, ಪಾರ್ಥಸಾರಥಿ ಪಾಲ್ಗೊಂಡಿದರು.

ತೊಟ್ಟಿಲುಮಡು ಜಾತ್ರೆ:

ನ.11ರಂದು (ಸೋಮವಾರ) ಸಂತಾನಭಾಗ್ಯ ಕರುಣಿಸುವ ಚೆಲುವನಾರಾಯಣಸ್ವಾಮಿಯ ಉತ್ಸವವೆಂದೇ ಖ್ಯಾತಿ ಪಡೆದಿರುವ ‘ತೊಟ್ಟಿಲುಮಡು ಜಾತ್ರೆ’ ನಡೆಯಲಿದೆ. ಸಂತಾನಫಲ ಅಪೇಕ್ಷಿತ ಗೃಹಿಣಿಯರು ಮತ್ತು ನವದಂಪತಿಗಳು ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ. ಸಂಜೆ ತೊಟ್ಟಿಲಮಡು ಬಳಿ ಜಾತ್ರೆ ನಡೆಯಲಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ವಿದ್ಯುತ್‌ ದೀಪ ಅಲಂಕಾರ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ತೊಟ್ಟಿಲುಮಡು ಜಾತ್ರೆಯ ಪ್ರಯುಕ್ತ ಚೆಲುವನಾರಾಯಣ ಸ್ವಾಮಿಯ ಅಷ್ಟತೀರ್ಥೊತ್ಸವ ನಡೆಯಲಿದ್ದು, ಸ್ವಾಮಿಯ ಪಾದುಕೆಯನ್ನು ಮೇಲುಕೋಟೆಯ ಗಿರಿಶಿಖರಗಳ ಮಧ್ಯೆ ಇರುವಂತಹ ಅಷ್ಟ ಕಲ್ಯಾಣಿಗಳಲ್ಲಿ ಪಾದುಕೆ ಪೂಜೆ ನೆರವೇರಿಸುವ ಉತ್ಸವ ನಡೆಯಲಿದೆ.

ತಮಿಳುನಾಡು ಸರ್ಕಾರದಿಂದ ಗೌರವ

ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯಕ್ಕೆ ತಮಿಳುನಾಡಿನ ಭಕ್ತರು ಆಗಮಿಸುವ ಕಾರಣ ತಮಿಳುನಾಡಿನ ಕಾಂಚಿಪುರ ವಿಭಾಗದ ಕಮಿಷನರ್ ಕುಮಾರ್ ದೊರೈ, ಇಒ ರಾಜ ಇಲಂಪೆರೂವೊಳದಿ ಅಧಿಕಾರಿಗಳು ಆಗಮಿಸಿ ದೇವರಿಗೆ ವಸ್ತ್ರಸಮರ್ಪಣೆ ಮಾಡಿದರು.

‘ಮೇಲುಕೋಟೆಯಲ್ಲಿ ರಾಜಮುಡಿ, ಕೃಷ್ಣರಾಜಮುಡಿ ಉತ್ಸವಗಳನ್ನು ವೈಭವದಿಂದ ನಡೆಸಲು ಹಾಗೂ ಭಕ್ತರ ವಾಸ್ತವ್ಯಕ್ಕೆ ಭವನ ನಿರ್ಮಿಸಲು ತಮಿಳುನಾಡಿನ ಸರ್ಕಾರ ಸಿದ್ಧವಿದೆ’ ಎಂದು ತಮಿಳುನಾಡಿನ ಕಾಂಚಿಪುರ ವಿಭಾಗದ ಕಮಿಷನರ್ ಕುಮಾರ್ ದೊರೈ ಹೇಳಿದರು.

ರಾಜಮುಡಿ ಉತ್ಸವಕ್ಕಾಗಿ ಜಿಲ್ಲಾ ಖಜಾನೆಯಿಂದ ರವಾನೆಯಾದ ರಾಜಮುಡಿ ಕಿರೀಟ ಹಾಗೂ ಆಭರಣವನ್ನು ಅಧಿಕಾರಿಗಳು ಮತ್ತು ಸ್ಥಾನಿಕರು ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.