ADVERTISEMENT

ಮಂಡ್ಯ | ಬೀದಿನಾಯಿಗಳ ಹಾವಳಿ; ಜನರಿಗೆ ಕಿರಿಕಿರಿ

ನಾಯಿ ಕಡಿತಕ್ಕೆ ಬೆಚ್ಚಿದ ನಾಗರಿಕರು: ಮಾಂಸದ ಅಂಗಡಿ ತ್ಯಾಜ್ಯದಿಂದ ಸಮಸ್ಯೆ ಉಲ್ಬಣ

ಪ್ರಜಾವಾಣಿ ವಿಶೇಷ
Published 28 ಜೂನ್ 2024, 5:24 IST
Last Updated 28 ಜೂನ್ 2024, 5:24 IST
ಮಂಡ್ಯ ನಗರದ ಕೆರೆ ಅಂಗಳದ ಬೀದಿಯಲ್ಲಿ ನಾಯಿಗಳು ಸಾಗುತ್ತಿರುವ ದೃಶ್ಯ
ಮಂಡ್ಯ ನಗರದ ಕೆರೆ ಅಂಗಳದ ಬೀದಿಯಲ್ಲಿ ನಾಯಿಗಳು ಸಾಗುತ್ತಿರುವ ದೃಶ್ಯ   

ಮಂಡ್ಯ: ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು, ಪಾದಚಾರಿಗಳು, ವಾಯು ವಿಹಾರಿಗಳು ಹಾಗೂ ವಿದ್ಯಾರ್ಥಿಗಳು ಭಯದಿಂದ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ನಾಯಿಗಳ ಉಪಟಳಕ್ಕೆ ಬೆಚ್ಚಿಬೀಳುತ್ತಿದ್ದಾರೆ.

ಬೆಳ್ಳಂಬೆಳಿಗ್ಗೆ ವಾಯುವಿಹಾರಕ್ಕೆ ತೆರಳುವ ಸಂದರ್ಭದಲ್ಲಿ ಕಿತ್ತೂರುರಾಣಿ ಚೆನ್ನಮ್ಮ ಸರ್ಕಲ್‌, ಶಂಕರ ನಗರ, ಗಾಂಧಿ ನಗರದ ವಾಟರ್‌ ಟ್ಯಾಂಕ್‌ ಬಳಿ ಮಹದೇಶ್ವರ ದೇವಸ್ಥಾನ, ಹೊಸಹಳ್ಳಿ, ಹಾಲಹಳ್ಳಿ, ನೂರಡಿ ರಸ್ತೆ, ವಿ.ವಿ.ನಗರ, ಕಲ್ಲಹಳ್ಳಿ, ಚಾಮುಂಡೇಶ್ವರಿ ನಗರ, ಪೇಟೆಬೀದಿ, ಕೆರೆ ಅಂಗಳ, ಬೀಡಿ ಕಾಲೊನಿ, ಕಾರೆಮನೆ ಗೇಟ್‌, ಗುತ್ತಲು ಬಡಾವಣೆ ಸೇರಿದಂತೆ 35 ವಾರ್ಡ್‌ಗಳಲ್ಲಿ ನಾಯಿ ಹಾವಳಿ ಹೆಚ್ಚಿದ್ದು ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ನಗರದಲ್ಲಿ ಮಾಂಸದ ಅಂಗಡಿಗಳು ಹಾಗೂ ಕೋಳಿ ಮಾಂಸದ ಅಂಗಡಿಗಳ ಬಳಿ ಗುಂಪು ಕಟ್ಟಿಕೊಂಡಿರುವ ನಾಯಿಗಳ ಹಿಂಡು ಕಾಣಸಿಗುತ್ತದೆ. ಜೊತೆಗೆ ಅಲ್ಲಿನ ತ್ಯಾಜ್ಯವನ್ನು ತಿನ್ನಲೆಂದೇ ಮತ್ತಷ್ಟು ನಾಯಿಗಳು ಕಾಣಿಸಿಕೊಳ್ಳುತ್ತವೆ. ಈ ಮಾಂಸದ ಅಂಗಡಿಗಳಿಂದಲೂ ನಾಯಿಗಳ ಉಪಟಳ ಹೆಚ್ಚಾಗಿದೆ. ಕರ್ನಾಟಕ ಬಾರ್‌ ಸರ್ಕಲ್‌ ಬಳಿ ಕಬಾಬ್‌ ಸೆಂಟರ್‌ ಹೆಚ್ಚಿವೆ. ಅಲ್ಲಿಯೂ ಸಹ ನಾಯಿಗಳನ್ನು ಕಾಣಬಹುದು. ಕಬಾಬ್‌ ತಿಂದ ಜನರು ಕಸದ ಬುಟ್ಟಿಯಲ್ಲಿ ಎಸೆದ ಮೂಳೆಗಳನ್ನು ರಸ್ತೆಯಲ್ಲಿ ಎಳೆದಾಡಿ ತಿನ್ನುತ್ತಿವೆ. 

ADVERTISEMENT

ಬೈಕ್‌ ಸವಾರರ ಪರದಾಟ:

‘ಹೊಸಹಳ್ಳಿ ಸರ್ಕಲ್‌ನಿಂದ ಬೋವಿ ಕಾಲೊನಿ ಮಾರ್ಗದಲ್ಲಿ ತಾವರೆಗೆರೆ ಹೋಗುವ ವೇಳೆ ದ್ವಿಚಕ್ರ ವಾಹನಕ್ಕೆ ಅಡ್ಡಲಾಗಿ ನಾಯಿಗಳು ನುಗ್ಗುತ್ತವೆ. ಇದು ಹಲವು ಬಾರಿ ನಡೆದಿದೆ. ಮನೆಯಲ್ಲಿ ನಾಯಿ ಸಾಕುತ್ತೇನೆ ಎಂದು ಎಲ್ಲೋ ಇರುವ ಬೀದಿ ನಾಯಿಮರಿಗಳನ್ನು ತಂದು ಕೆಲವರು ಸಾಕುತ್ತಾರೆ, ನಂತರ ಅವನ್ನು ಬೀದಿಯಲ್ಲಿ ಬಿಟ್ಟು ಬಿಡುತ್ತಾರೆ ಇದು ನಿಲ್ಲಬೇಕು. ಏಕೆಂದರೆ ಬೈಕ್‌ ಅಪಘಾತಗಳಿಗೆ ನಾಯಿಗಳು ಕಾರಣವಾಗುತ್ತಿವೆ’ ಎಂದು ತಾವರೆಗೆರೆ ನಿವಾಸಿ ಶಂಕರ್‌ ಆರೋಪಿಸುತ್ತಾರೆ.

‘ಹೊಸಹಳ್ಳಿ ಏರಿಯಾದ ಮೀನು ಮಾರಾಟದ ಅಂಗಡಿಗಳ ಬಳಿ ಯಥೇಚ್ಚವಾಗಿ ನಾಯಿಗಳು ಕಾಣಿಸುತ್ತವೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೂ ಬೊಗಳುತ್ತಾ ಕಚ್ಚಲು ಬರುತ್ತವೆ. ಮಹಿಳೆ ಮತ್ತು ಮಕ್ಕಳು ಅಲ್ಲಿ ಸಂಚರಿಸುವುದಕ್ಕೆ ಕಷ್ಟವಾಗುತ್ತಿದೆ. ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಕ್ರಮವಹಿಸಿ ಅಮೂಲ್ಯ ಪ್ರಾಣ ಉಳಿಸಬೇಕು’ ಎಂದು ಸ್ವರ್ಣಸಂದ್ರ ನಿವಾಸಿ ಶ್ರೀನಿವಾಸ್‌ಶೆಟ್ಟಿ ಒತ್ತಾಯಿಸಿದರು.

‘ಜೂನ್‌ 16ರಂದು ನಗರದ ಅರ್ಚನಾ ಆಸ್ಪತ್ರೆಯ ಎದುರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪುರುಷನಿಗೆ ನಾಯಿ ಕಚ್ಚಿದೆ. ಅಶೋಕ ನಗರದ ಅಕ್ಕಪಕ್ಕ ಮಾಂಸದ ಹೋಟೆಲ್‌ಗಳಿದ್ದು, ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ’ ಎಂದು ಮೆಡಿಕಲ್‌ ಸ್ಟೋರ್‌ ಮಾಲೀಕ ಸುನಿಲ್‌ ಕುಮಾರ್‌ ಆತಂಕ ವ್ಯಕ್ತಪಡಿಸುತ್ತಾರೆ.

ರಸ್ತೆಯಲ್ಲಿ ಆಹಾರ ಬಿಸಾಕಬೇಡಿ:

‘ತಿಂದ ಆಹಾರಗಳನ್ನು ರಸ್ತೆಯಲ್ಲಿ ಬಿಸಾಕಬಾರದು, ಮನೆ–ಮನೆಗೆ ಬರುವ ಕಸ ಸಂಗ್ರಹಣಾ ವಾಹನಗಳಿಗೆ ಕಸ ನೀಡಬೇಕು. ಈ ಮೂಲಕ ನಗರದಲ್ಲಿ ಸ್ವಚ್ಛತೆ ಕಾಪಾಡಲು ನಾಗರಿಕರು ಸಹಕರಿಸಬೇಕು. ಮಾಂಸದ ಅಂಗಡಿಗಳು ಸಹ ತ್ಯಾಜ್ಯ ವಿಲೇವಾರಿಗೆ ನಗರಸಭೆಯೊಂದಿಗೆ ಕೈಜೋಡಿಸಬೇಕು. ಇದೆಲ್ಲವೂ ಸಾಧ್ಯವಾದರೆ ನಾಯಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತದೆ. ನಗರದಲ್ಲಿ ನಾಯಿ ಕಡಿತಕ್ಕೆ ಒಳಗಾಗಿರುವ ವ್ಯಕ್ತಿಯೊಬ್ಬರು ಸಹಾಯ ಧನ ಕೋರಿ ಅರ್ಜಿ ಹಾಕಿದ್ದಾರೆ. ಅದನ್ನು ಪರಿಶೀಲಿಸಿ ಸಹಾಯಧನ ನೀಡಲಾಗುವುದು’ ಎಂದು ನಗರಸಭೆ ಆಯುಕ್ತ ಆರ್.ಮಂಜುನಾಥ್‌ ತಿಳಿಸಿದರು. 

ಮಂಡ್ಯ ನಗರದ ಬೀದಿಗಳಲ್ಲಿ ಗುಂಪು ಗುಂಪಾಗಿ ನಿಂತಿರುವ ನಾಯಿಗಳು

ಏನಂತಾರೆ..?   

ಅರೆಬೆಂದ ಶವ ಎಳೆದಾಡಿದ ನಾಯಿಗಳು ಕಳೆದ ಎರಡು ತಿಂಗಳ ಹಿಂದೆ ಶಂಕರ ನಗರದ ರುದ್ರಭೂಮಿಯಲ್ಲಿ ಅರೆಬೆಂದ ಮೃತದೇಹವನ್ನು ನಾಯಿಗಳು ಹೊರತಂದು ಎಳೆದಾಡುತ್ತಿದ್ದವು. ಅದನ್ನು ಗಮನಿಸಿದ ನಾವು ಉರಿಯುತ್ತಿದ್ದ ಬೆಂಕಿಯಲ್ಲಿ ಮತ್ತೆ ಹಾಕಿದೆವು. ಇದರಿಂದ ಸ್ವಲ್ಪ ಭಯವಾಯಿತು. ಇನ್ನಾದರೂ ನಾಯಿಗಳ ಹಾವಳಿ ತಪ್ಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕಿದೆ.

– ಎಂ.ಎಲ್‌.ತುಳಸೀಧರ ನಿವಾಸಿ ಗಾಂಧಿ ನಗರ ಮಂಡ್ಯ.

1168 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕಳೆದ ವರ್ಷ 820 ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಸ್ತುತ ವರ್ಷ 1744 ನಾಯಿಗಳಿಗೆ ₹30 ಲಕ್ಷ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಇಲ್ಲಿತನಕ 1168 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದರ ಜೊತೆಗೆ ನಾಯಿಗಳಿಗೆ ಆ್ಯಂಟಿ ರೇಬಿಸ್‌ ವ್ಯಾಕ್ಸಿನೇಷನ್‌ ಕೂಡ ಮಾಡಿಸುತ್ತಿದ್ದು ರೇಬಿಸ್‌ ರೋಗ ಹರಡದಂತೆ ಎಚ್ಚರ ವಹಿಸಲಾಗಿದೆ.

ಆರ್‌.ಮಂಜುನಾಥ್‌ ಆಯುಕ್ತ ನಗರಸಭೆ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.