ಮಂಡ್ಯ: ಕೇಂದ್ರ ಆಹಾರ ಸಂಸ್ಕರಣಾ ಮಂತ್ರಾಲಯ, ರಾಜ್ಯ ಕೃಷಿ ಇಲಾಖೆ ವತಿಯಿಂದ ಸೋಮವಾರ ನಗರದಲ್ಲಿ ನಡೆದ ಸಿರಿಧಾನ್ಯ ಮೇಳ, ಬೆಲ್ಲದ ಪರಿಷೆಯಲ್ಲಿ ‘ಮಂಡ್ಯ ಬೆಲ್ಲ’ ಬ್ರ್ಯಾಂಡ್ ಅನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಬಿಡುಗಡೆ ಮಾಡಿದರು.
‘ಮಂಡ್ಯ ಬೆಲ್ಲ ರೈತ ಉತ್ಪಾದಕರ ಕಂಪನಿ ಲಿಮಿಟೆಡ್’ಗೆ ಸಾವಿರಕ್ಕೂ ಹೆಚ್ಚು ಬೆಲ್ಲ ಉತ್ಪಾದಕರು ಹಾಗೂ ಕಬ್ಬು ಬೆಳೆಗಾರರು ಹೆಸರು ನೋಂದಾಯಿಸಿದ್ದಾರೆ. ಅವರು ಉತ್ಪಾದಿಸುವ ಬೆಲ್ಲ ‘ಮಂಡ್ಯ ಬೆಲ್ಲ’ ಬ್ರ್ಯಾಂಡ್ ಅಡಿಯಲ್ಲಿ ಮಾರುಕಟ್ಟೆಗೆ ಬರಲಿದೆ. ‘ಆತ್ಮನಿರ್ಭರ ಭಾರತ’ ಯೋಜನೆಯ ಅಡಿ ಕೇಂದ್ರ ಸರ್ಕಾರದಿಂದ ಧನಸಹಾಯ ಪಡೆದಿರುವ ಉತ್ಪಾದಕರು ರಾಸಾಯನಿಕ ಮುಕ್ತ ಬೆಲ್ಲ ಉತ್ಪಾದಿಸಲಿದ್ದಾರೆ.
‘ಪ್ರಧಾನಮಂತ್ರಿ ಕಿರು ಉದ್ಯಮ ಪ್ರೋತ್ಸಾಹ (ಪಿಎಂಎಫ್‌ಎಂಇ) ಯೋಜನೆ ಅಡಿ ಬೆಲ್ಲಕ್ಕೆ ರಾಷ್ಟ್ರದಾದ್ಯಂತ ಮಾರುಕಟ್ಟೆ ದೊರೆಯಲಿದೆ, ರಫ್ತು ಮಾಡುವ ಉದ್ದೇಶವಿದೆ. ಮಾರುಕಟ್ಟೆ ವಿಸ್ತರಣೆಗಾಗಿ ಕಂಪನಿಗೆ ₹37 ಲಕ್ಷ ಸಾಲದ ಮಂಜೂರಾತಿ ಪತ್ರವನ್ನು ಎಸ್‌ಬಿಐ ಬೆಲ್ಲದ ಪರಿಷೆಯಲ್ಲಿ ವಿತರಿಸಿದೆ’ ಎಂದು ಕಂಪನಿಯ ಅಧ್ಯಕ್ಷ ಕಾರಸವಾಡಿ ಮಹದೇವು ತಿಳಿಸಿದರು.
ಮೇಳದಲ್ಲಿ 135 ಮಳಿಗೆ ತೆರೆಯಲಾಗಿತ್ತು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಸಿರಿಧಾನ್ಯ ಆಹಾರ ಉತ್ಪಾದಕರು ಉತ್ಪನ್ನಗಳ ಪ್ರದರ್ಶನ–ಮಾರಾಟ ಮಾಡಿದರು. ವಿವಿಧ ಜಿಲ್ಲೆಗಳ ರೈತ ಉತ್ಪಾದಕರು ಸಿರಿಧಾನ್ಯಗಳನ್ನು ಸಂಸ್ಕರಣೆ ಮಾಡಿ ತಯಾರಿಸಿದ್ದ ಸಿರಿಧಾನ್ಯ ಆಹಾರ ಪದಾರ್ಥಗಳನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
Cut-off box -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.