ADVERTISEMENT

ಕೆಆರ್‌ಎಸ್ ಅಣೆಕಟ್ಟೆಯ ಸುತ್ತಮುತ್ತ ಗಣಿಗಾರಿಕೆ ನಿಷೇಧ: ಹೋರಾಟದ ಪ್ರತಿಫಲ

20 ವರ್ಷದಿಂದಲೂ ನಡೆದ ಸುದೀರ್ಘ ಹೋರಾಟಕ್ಕೆ ಜಯ-ಶ್ರೀರಂಗಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲೂ ಕಲ್ಲುಗಣಿಗಾರಿಕೆ ನಿಷೇಧ ಸಾಧ್ಯತೆ

ಹಾರೋಹಳ್ಳಿ ಪ್ರಕಾಶ್‌
Published 9 ಜನವರಿ 2024, 6:24 IST
Last Updated 9 ಜನವರಿ 2024, 6:24 IST

ಪಾಂಡವಪುರ: ಕೆಆರ್‌ಎಸ್ ಅಣೆಕಟ್ಟೆಯ ಸುತ್ತಮುತ್ತ 20 ಕಿ.ಮೀ.ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧ ಮಾಡಿದ ಹೈಕೋರ್ಟ್‌ ಆದೇಶವನ್ನು ಸ್ಥಳೀಯರು, ವಿವಿಧ ಸಂಘಟನೆಗಳ ಮುಖಂಡರು ಸ್ವಾಗತಿಸಿದ್ದಾರೆ, ಹಲವು ವರ್ಷಗಳ ಹೋರಾಟದ ಫಲ ಎಂದೇ ಬಣ್ಣಿಸಿದ್ದಾರೆ.

ಈ ಆದೇಶದಿಂದ ಕೆಆರ್‌ಎಸ್‌ ಬೇಬಿಬೆಟ್ಟ ವ್ಯಾಪ್ತಿ ಮಾತ್ರವಲ್ಲದೇ ಶ್ರೀರಂಗಪಟ್ಟಣ ತಾಲ್ಲೂಕಿನ ಹಲವೆಡೆ ಕಲ್ಲು ಗಣಿಗಾರಿಕೆ ನಿಷೇಧವಾಗುವ ಸಾಧ್ಯತೆ ಇದೆ. ಕೆಆರ್‌ಎಸ್ ಅಣೆಕಟ್ಟೆಯ ಕೂಗಳತೆ ಯಲ್ಲಿರುವ ಬೇಬಿಬೆಟ್ಟದ ಸುತ್ತಲೂ ನಡೆ ಯುತ್ತಿದ್ದ ಗಣಿಗಾರಿಕೆಯಿಂದ ಭೂಮಿ ಕಂಪಿಸುತ್ತಿತ್ತು.

ಸುತ್ತಲ ಗ್ರಾಮದ ರಾಗಿಮುದ್ದನಹಳ್ಳಿ ಹೊಸಬಡಾವಣೆ, ಬೇಬಿ ಗ್ರಾಮ, ಕಾವೇರಿಪುರ, ಶಿಂಡಬೋಗನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳು ಬಿರುಕುಬಿಡುತ್ತಿದ್ದವು. ಗರ್ಭಿಣಿಯರು, ಹಸುಗೂಸುಗಳು, ವಯೋವೃದ್ದರು ಬೆಚ್ಚಿಬೀಳುತ್ತಿದ್ದರು.

ADVERTISEMENT

ದೂಳಿನಿಂದ ಕುಡಿಯುವ ನೀರು ಕಲ್ಮಷಗೊಳ್ಳುವ ಜೊತೆಗೆ ಜಾನುವಾರುಗಳ ಮೇವಿಗೂ ದೂಳು ಅಂಟಿಕೊಳ್ಳುತ್ತಿತ್ತು.  ರೈತರು ಕೃಷಿಯನ್ನೇ ಕೈಬಿಟ್ಟಿದ್ದರು. ಕೃಷಿ ಮತ್ತು ಪರಿಸರ ಹಾಳಾಗಿತ್ತು. ಈಗ ಗಣಿಗಾರಿಕೆಯಿಂದ ನಿಷೇದದಿಂದಾಗಿ ಈ ಭಾಗದ ಜನರು ನಿಟ್ಟಿಸಿರುಬಿಟ್ಟಿದ್ದಾರೆ.

ಬೇಬಿಬೆಟ್ಟದ ಗಣಿಗಾರಿಕೆಯಿಂದಾಗಿ ಕೆಆರ್‌ಎಸ್ ಅಣೆಕಟ್ಟು ಅಪಾಯದಲ್ಲಿದೆ ಎಂದು ಭೂ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಅಣೆಕಟ್ಟು ಬಿರುಕುಬಿಟ್ಟರೆ ಮೈಸೂರು, ಮಂಡ್ಯ, ಬೆಂಗಳೂರು ಭಾಗದ ಜನರಿಗೆ ಕುಡಿಯುವ ನೀರು ಸಮಸ್ಯೆ ಎದುರಾಗುತ್ತಿತ್ತು. ಮಂಡ್ಯ ಜಿಲ್ಲೆಯ ರೈತಾಪಿ ಜನರ ಕೃಷಿಗೆ ದೊಡ್ಡ ಪೆಟ್ಟಾಗುತ್ತಿತ್ತು. ಇದೀಗ ತೀರ್ಪಿನಿಂದ ನಿಟ್ಟುಸಿರುಬಿಡುವಂತಾಗಿದೆ.

ಅಮೃತ ಮಹಲ್ ಕಾವಲ್ ಉಳಿವು:

ಮೈಸೂರಿನ ಮಹರಾಜರು ಬೇಬಿಬೆಟ್ಟದ ಸುತ್ತಮತ್ತಲಿನ ಒಂದು ಸಾವಿರಕ್ಕೂ ಹೆಚ್ಚು ಅಮೃತ ಕಾವಲ್ ಭೂಮಿಯನ್ನು ರೈತರಿಗೋಸ್ಕರ ಮೀಸಲಿರಿಸಿದ್ದರು. ಕೆಆರ್‌ಎಸ್ ಅಣೆಕಟ್ಟ ಕಟ್ಟಿದ ಬೋವಿ ಸಮುದಾಯದ ಪೂರ್ವಿಕರು ನೆಲೆಸಿದ್ದ, ಈಗ ಕಾವೇರಿಪುರ ಗ್ರಾಮ ಕೂಡ ಉಳಿದಿದೆ. ಕಾವೇರಿಪುರದ ಜನರು ಸಣ್ಣಪುಟ್ಟ ಕೈಕುಳಿಯಿಂದ ಕಲ್ಲುಹೊಡೆದು ಜೀವನ ಸಾಗಿಸುತ್ತಿದ್ದರು. ಆಧುನಿಕ ಗಣಿಗಾರಿಕೆ ಬಂದ ಮೇಲೆ ಇವರು ಕೈಕುಳಿ ಕೆಲಸಕ್ಕೆ ಕುತ್ತು ಬಂದಿತ್ತು. ಈಗ ಗಣಿಗಾರಿಕೆ ನಿಷೇಧದಿಂದ ಇಲ್ಲಿನವರಿಗೆ ಪರ್ಯಾಯವಾದ ಉದ್ಯೋಗ ಕಲ್ಪಿಸಬೇಕಿದೆ.

ಹೋರಾಟದ ಹೆಜ್ಜೆಗಳು: ಕಳೆದ 20 ವರ್ಷಗಳ ಹಿಂದೆ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಕೆಆರ್‌ಎಸ್ ಸುತ್ತ ಗಣಿಗಾರಿಕೆ ನಿಷೇಧಿಸುವಂತೆ ದನಿ ಎತ್ತಿ ಪ್ರತಿಭಟನೆ ನಡೆಸಿದ್ದರು. ರೈತ ಸಂಘ ಈ ಹೋರಾಟವನ್ನು ಮುಂದುವರಿಸಿತ್ತು. ಬೇಬಿಗ್ರಾಮದ ಬೇಬಿಬೆಟ್ಟ ಉಳಿಸಿ ಸಮಿತಿ ಕೂಡ ನಿರಂತರ ಹೋರಾಟ ನಡೆಸಿತ್ತು ಸಮಾಜದ ಚಿಂತಕ ಮೈಸೂರಿನ ದಿ.ಪ.ಮಲ್ಲೇಶ್ ಅವರ ನೇತೃತ್ವದಲ್ಲಿ ‘ಕಾವೇರಿ ಉಳಿಸಿ, ಶಾಶ್ವತ ಗಣಿಗಾರಿಕೆ ನಿಷೇಧಿಸಿ, ಆಂದೋಲನ ಸಮಿತಿ’ಕೂಡ 2021ರಲ್ಲಿ ಹಲವು ಹೋರಾಟಗಳನ್ನು ನಡೆಸಿತ್ತು. ಹಿರಿಯ ಗಾಂಧಿವಾದಿ ದಿವಂಗತ ಎಚ್‌.ಎಸ್‌. ದೊರೆಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿತ್ತು.

ಹೋರಾಟಕ್ಕೆ ಸಂದ ಜಯ
ತೀರ್ಪಿನಿಂದ ರೈತರ ಹೋರಾಟಕ್ಕೆ ಜಯಸಂದಿದೆ. 20 ವರ್ಷದ ಹಿಂದೆಯೇ ಕೆ.ಎಸ್.ಪುಟ್ಟಣ್ಣಯ್ಯನವರು ಗಣಿಗಾರಿಕೆಯಿಂದ ಅಪಾಯವಿದೆ ಎಂದು ದನಿಎತ್ತಿದ್ದರು. ಅಲ್ಲಿಂದ ಇಲ್ಲಿಯವರೆಗೂ ರೈತ ಸಂಘ ಹೋರಾಟ ಮಾಡಿಕೊಂಡೇ ಬರುತ್ತಿದೆ. ನಿಷೇಧಿಸಿದ್ದನ್ನು ಅಭಿನಂದಿಸುತ್ತೇನೆ ಎ. ಎಲ್.ಕೆಂಪೂಗೌಡ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ನ್ಯಾಯಾಲಯದಿಂದ ನೆಮ್ಮದಿ
ಬೇಬಿಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸಿರುವುದು ನಮಗೆ ನೆಮ್ಮದಿ ತಂದಿದೆ. ಗಣಿಗಾರಿಕೆಯಿಂದ ನಮ್ಮೂರು ಸೇರಿದಂತೆ ಸುತ್ತಮುತ್ತಲ ಊರುಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದವು. ಹೈಕೋರ್ಟ್‌ಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇವೆ ಸಿದ್ದರಾಜು ಬೇಬಿಗ್ರಾಮ, ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.