ADVERTISEMENT

ಮಂಡ್ಯದ ಮೈಷುಗರ್‌ ಕಾರ್ಖಾನೆಯ ಬಾಯ್ಲರ್‌ಗೆ ಸಚಿವರಿಂದ ಅಗ್ನಿಸ್ಪರ್ಶ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 13:00 IST
Last Updated 30 ಜೂನ್ 2024, 13:00 IST
<div class="paragraphs"><p>ಸಚಿವರಿಂದ ಅಗ್ನಿಸ್ಪರ್ಶ</p></div>

ಸಚಿವರಿಂದ ಅಗ್ನಿಸ್ಪರ್ಶ

   

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಮೈಷುಗರ್‌ ಸಕ್ಕರೆ ಕಾರ್ಖಾನೆಯು 2024–25ನೇ ಸಾಲಿನ ಕಬ್ಬು ಅರೆಯಲು ಸಜ್ಜಾಗಿದ್ದು, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಭಾನುವಾರ ಕಾರ್ಖಾನೆಯಲ್ಲಿ ಪೂಜೆ ಸಲ್ಲಿಸಿ, ಬಾಯ್ಲರ್‌ಗೆ ಅಗ್ನಿಸ್ಪರ್ಶ ಮಾಡಿದರು. 

ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಸ್ಥಗಿತವಾಗಿದ್ದ ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭ ಮಾಡಲು ರಾಜ್ಯ ಸರ್ಕಾರದಿಂದ ಕಳೆದ ಸಾಲಿನಲ್ಲಿ ₹50 ಕೋಟಿ ಅನುದಾನ ನೀಡಲಾಗಿದೆ. 2023-24ನೇ ಸಾಲಿನಲ್ಲಿ 2,41,305 ಮೆ.ಟನ್ ಕಬ್ಬು ನುರಿಸಲಾಗಿರುತ್ತದೆ ಹಾಗೂ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಂಪೂರ್ಣವಾಗಿ ಹಣವನ್ನು ಪಾವತಿಸಲಾಗಿರುತ್ತದೆ ಎಂದರು. 

ADVERTISEMENT

ಕಳೆದ ವರ್ಷ ಸರಿಯಾಗಿ ಮಳೆಯಾಗದ ಕಾರಣ ಈ ಬಾರಿ ಕಬ್ಬಿನ ಕೊರತೆ ಉಂಟಾಗಿದೆ. ಈ ಬಾರಿ 2.50 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ಅರೆಯುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈಗಾಗಲೇ 1.90 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನೋಂದಣಿಯಾಗಿದೆ ಎಂದರು. 

ಕಾರ್ಖಾನೆಯ ಲಾಭ, ನಷ್ಟದ ಆಧಾರದ ಮೇಲೆ ಸದ್ಯಕ್ಕೆ ಕಾರ್ಯನಿರ್ವಹಿಸುವುದು ಕಷ್ಟಕರ. ರೈತರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆಯನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಕ್ಕರೆ ಕಾರ್ಖಾನೆ ಲಾಭದಾಯಕವಾಗಿ ನಡೆಯಲಿದೆ ಎಂಬ ನಂಬಿಕೆ ಇದೆ ಎಂದರು.

ಕಾರ್ಖಾನೆಯ ₹52 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಮಾಡುವ ಸಂಬಂಧ ವಿಧಾನ ಪರಿಷತ್‌ ಸದಸ್ಯ ದಿನೇಶ ಗೂಳಿಗೌಡ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಯವರ ಮಾತನಾಡಿ, ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. 

ಡೆಂಗಿ ನಿಯಂತ್ರಣಕ್ಕೆ ಕ್ರಮ:

ರಾಜ್ಯದಾದ್ಯಂತ ಡೆಂಗಿ ಪ್ರಕರಣಗಳು ದಾಖಲಾಗುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆಡಳಿತ, ತಾಲ್ಲೂಕು ಆಡಳಿತ ಜಂಟಿಯಾಗಿ ಡೆಂಗಿ ಪ್ರಕರಣ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ ಕೈಗೊಂಡು, ಜನರಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. 

ಕಾಮಗಾರಿಯಿಂದ ತಡವಾಗಿಲ್ಲ:

ನಾಲೆಗಳ ಆಧುನೀಕರಣ ಕಾಮಗಾರಿ ನಡೆಯುತ್ತಿರುವ ಕಾರಣ ನಾಲೆಗೆ ನೀರು ಬಿಡುವುದು ತಡವಾಗಿಲ್ಲ. ನಾವು ನೀರು ಬಿಡಲು ಸಿದ್ಧರಿದ್ದೇವೆ. ಬೆಳೆಗಳಿಗೆ ನೀರು ಹರಿಸಲು ಕನಿಷ್ಠ ಕೆ.ಆರ್‌.ಎಸ್‌. ಜಲಾಶಯದಲ್ಲಿ 110 ಅಡಿ ನೀರು ಬರಬೇಕು. ನೀರು ಬಿಟ್ಟ ತಕ್ಷಣ ಕೆಲವು ರೈತರು ಭತ್ತದ ಒಟ್ಲು ಹಾಕುತ್ತಾರೆ. ಒಂದು ವಾರ ಕುಡಿಯುವ ನೀರಿಗಾಗಿ ನೀರು ಹರಿಸಿ ಎಂಬುದು ರೈತರ ಬೇಡಿಕೆಯಾಗಿದೆ. ಒಳಹರಿವು ಪ್ರಮಾಣ ನೋಡಿಕೊಂಡು ನಾಲೆಗೆ ನೀರು ಹರಿಸುತ್ತೇವೆ ಎಂದರು. 

ನಾಲೆಗೆ ನೀರು ಹರಿಸಿ ಎಂದು ರೈತರು ಪ್ರತಿಭಟನೆ ಮಾಡುವ ಅಗತ್ಯವಿಲ್ಲ. ನಾಲ್ಕು ದಿನ ನೀರಿನ ಮಟ್ಟ ಮತ್ತು ಒಳಹರಿವು ನೋಡಿಕೊಂಡು ತೀರ್ಮಾನ ಕೈಗೊಳ್ಳುತ್ತೇವೆ. ನೀರು ಬಿಡುವ ಸಂದರ್ಭದಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸುತ್ತೇವೆ. ಈ ಬಗ್ಗೆ ರೈತರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. 

ಶಾಸಕ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಷುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಡಿ. ಗಂಗಾಧರ್, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಆಯುಕ್ತ ರವಿಕುಮಾರ್‌, ಜಿಲ್ಲಾಧಿಕಾರಿ ಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್ ನಾಗರಾಜು, ಜಿಲ್ಲಾ ಪಂಚಾಯಿತಿ ಸಿಇಒ ಶೇಕ್‌ ತನ್ವೀರ್‌ ಆಸಿಫ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು. 

‘ವಿಮಾನ ನಿಲ್ದಾಣಕ್ಕೆ ಎಚ್.ಡಿ.ಕೆ. ಮನಸು ಮಾಡಲಿ’

‘ನೆಲಮಂಗಲ ಮತ್ತು ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬದಲು ಮಂಡ್ಯದಲ್ಲಿ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ ಎಂಬ ಬೇಡಿಕೆಯಿದೆ. ಈ ಬಗ್ಗೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲು ಸಿದ್ಧವಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ. ಅವರು ಮನಸು ಮಾಡಿದರೆ ಮಂಡ್ಯದಲ್ಲೇ ವಿಮಾನ ನಿಲ್ದಾಣ ಮಾಡಬಹುದು’ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವ ಚಲುವರಾಯಸ್ವಾಮಿ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.