ADVERTISEMENT

ನಾಗಮಂಗಲ ಗಲಭೆ | ಕಾಣದ ಕೈಗಳನ್ನು ಪತ್ತೆ ಮಾಡಿ: ಶಾಸಕ ಅಶ್ವತ್ಥನಾರಾಯಣ ಆಗ್ರಹ

ನಾಗಮಂಗಲಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 13:38 IST
Last Updated 16 ಸೆಪ್ಟೆಂಬರ್ 2024, 13:38 IST
<div class="paragraphs"><p>ನಾಗಮಂಗಲಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿತು.</p></div>

ನಾಗಮಂಗಲಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿತು.

   

ನಾಗಮಂಗಲ: ‘ಕೇರಳದ ಇಬ್ಬರು ನಾಗಮಂಗಲ ಗಲಭೆಯಲ್ಲಿ ಭಾಗಿಯಾಗಿದ್ದಾರೆ. ಅವರಿಗೆ ಪಿ.ಎಫ್‌.ಐ ನಂಟು ಇದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಘಟನೆ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಮಾಡಲು ಸಮಗ್ರ ತನಿಖೆಯಾಗಬೇಕು’ ಎಂದು ಬಿಜೆಪಿ ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಆಗ್ರಹಿಸಿದರು.

ಪಟ್ಟಣದಲ್ಲಿ ಗಲಭೆಯಿಂದ ಹಾನಿಯಾಗಿರುವ ಅಂಗಡಿಗಳಿಗೆ ಮತ್ತು ಬದ್ರಿಕೊಪ್ಪಲು ಬಡಾವಣೆಗೆ ಸೋಮವಾರ ಅಶ್ವತ್ಥ ನಾರಾಯಣ ನೇತೃತ್ವದ ಬಿಜೆಪಿಯ ಸತ್ಯಶೋಧನಾ ಸಮಿತಿ ಭೇಟಿ ನೀಡಿ ಪರಿಶೀಲನೆ ನಡೆಸಿತು.

ADVERTISEMENT

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಮಾದಕ ವಸ್ತು ಸೇರಿದಂತೆ ಬೇರೆ ಬೇರೆ ಚಟುವಟಿಕೆ ನಡೆಯುತ್ತಿದೆ. ಎಲ್ಲವನ್ನೂ ಪತ್ತೆ ಹಚ್ಚಬೇಕು. ಗಲಭೆ ಪ್ರಕರಣದ ಆಳ-ಅಗಲ ತಿಳಿಯುವ ಕೆಲಸವಾಗಬೇಕಿದ್ದು, ಸತ್ಯಾಸತ್ಯತೆ ಹೊರಬರಬೇಕು ಎಂದು ಒತ್ತಾಯಿಸಿದರು.

ತುಷ್ಟೀಕರಣದ ರಾಜಕಾರಣ

ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಗಣೇಶ ಮೂರ್ತಿ ಇಟ್ಟವರನ್ನೇ ಬಂಧಿಸುತ್ತಾರೆ ಎಂದರೆ ಅವರ ಮನಸ್ಥಿತಿ ಹೇಗಿದೆ ಎಂಬುದು ಅರ್ಥವಾಗುತ್ತದೆ. ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟವಾದ ಎಚ್ಚರಿಕೆ ನೀಡುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇವೆ. ರಾಷ್ಟ್ರೀಯ ತನಿಖಾ ದಳದ (ಎನ್‌.ಐ.ಎ) ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಸದನದಲ್ಲೂ ಚರ್ಚೆ

ನಷ್ಟ ಅನುಭವಿಸಿದ ಅಂಗಡಿ ಮಾಲೀಕರಿಂದ ಮಾಹಿತಿ ಪಡೆದುಕೊಂಡು, ಸಾಂತ್ವನ ಹೇಳಿದ್ದೇವೆ. ಕಾನೂನಾತ್ಮಕವಾಗಿ ಕ್ರಮ ಜರುಗಿಸುವ ಎಲ್ಲ ಮಾಹಿತಿಯನ್ನು ಕಲೆ ಹಾಕಲಿದ್ದೇವೆ. ಘಟನೆಯಿಂದ ನೊಂದವರಿಗೆ ನ್ಯಾಯ ಮತ್ತು ಅಗತ್ಯ ಪರಿಹಾರ ಸಿಗಬೇಕು ಎಂಬುದು ನಮ್ಮ ಉದ್ದೇಶ. ವರದಿ ತಯಾರಿಸಿ, ನಮ್ಮ ಪಕ್ಷದ ವೇದಿಕೆಯಲ್ಲಿ ಇಡುತ್ತೇವೆ ಹಾಗೂ ರಾಜ್ಯ ಸರ್ಕಾರಕ್ಕೂ ಕೊಡುತ್ತೇವೆ. ಸದನದಲ್ಲಿ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸುತ್ತೇವೆ ಎಂದರು.

ಕಾಡುಗಳಲ್ಲಿ ತರಬೇತಿ

ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರರಾವ್‌ ಮಾತನಾಡಿ, ‘ಬದ್ರಿಕೊಪ್ಪಲು ಗ್ರಾಮದ ಯುವಕರು ಭಯದಿಂದ ಊರು ತೊರೆದಿದ್ದಾರೆ. ಕೆಲವರನ್ನು ಬಂಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಕೇರಳ ಮೂಲದವರು ಇಲ್ಲಿಗೆ ಬಂದಿದ್ದು, ಕಾಡುಗಳಲ್ಲಿ ತರಬೇತಿ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಆಯ್ಕೆ ಮಾಡಿಕೊಂಡು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಇದು ಪೂರ್ವನಿಯೋಜಿತ ಎಂದು ಅನಿಸುತ್ತಿದೆ. ಮುಸ್ಲಿಮರಿಗಿಂತ ಹಿಂದೂಗಳಿಗೆ ಹೆಚ್ಚು ನಷ್ಟವಾಗಿದೆ ಎಂದರು.

ಬಿಜೆಪಿಯ ಸತ್ಯಶೋಧನಾ ಸಮಿತಿಯ ಶಾಸಕ ಬೈರತಿ ಬಸವರಾಜ, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್‌ಗೌಡ ಮತ್ತು ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರರಾವ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

ಜಿಹಾದಿಗಳ ಆಟ ಮಿತಿ ಮೀರಿದೆ: ವಿಎಚ್‌ಪಿ

ನಾಗಮಂಗಲ: ‘ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಜಿಹಾದಿಗಳ ಆಟ ಮಿತಿ ಮೀರಿದೆ. ನಿನ್ನೆ ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೇನ್‌ ಧ್ವಜ ಹಾರಿಸಲಾಗಿದೆ. ರಾಜ್ಯದ ವಿವಿಧೆಡೆ ಗಲಭೆಗಳಾಗುತ್ತಿವೆ. ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ನೀತಿಯೇ ಇದಕ್ಕೆ ಕಾರಣ’ ಎಂದು ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ್ಯ ಧರ್ಮಪ್ರಚಾರ ಪ್ರಮುಖ ಸೂರ್ಯನಾರಾಯಣ ಅವರು ಗಂಭೀರ ಆರೋಪ ಮಾಡಿದ್ದಾರೆ.

‘ನಿಷೇಧಿತ ಸಂಘಟನೆಯಾದ ಪಿ.ಎಫ್‌.ಐ ರಾಜ್ಯದಲ್ಲಿ ಶಾಂತಿ ಕೆಡಿಸಲು ಸಂಚು ಮಾಡುತ್ತಿದೆ. ಮಾಸ್ಕ್‌ ಖರೀದಿ, ಪೆಟ್ರೋಲ್‌ ಬಾಂಬ್‌ ಎಲ್ಲವೂ ಪೂರ್ವನಿಯೋಜಿತ. ರೌಡಿಶೀಟರ್‌ಗಳು ಕೂಡ ನಾಗಮಂಗಲ ಗಲಭೆಯಲ್ಲಿ ಭಾಗಿಯಾಗಿದ್ದಾರೆ. ‘ಕೋಕಾ ಕೇಸ್‌’ ದಾಖಲಿಸಬೇಕು. ಎನ್‌ಐಎಯಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಬಂಧನ ಬೀತಿಯಿಂದ 400 ಮಂದಿ ಊರು ಬಿಟ್ಟಿದ್ದಾರೆ. ಅವರಿಗೆ ನಿರೀಕ್ಷಣಾ ಜಾಮೀನು ಕೊಡಿಸುತ್ತೇವೆ. ನ್ಯಾಯಾಂಗ ಹೋರಾಟಕ್ಕೂ ನೆರವು ನೀಡುತ್ತೇವೆ
– ವಿವೇಕ ಸುಬ್ಬಾರೆಡ್ಡಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.