ಮೇಲುಕೋಟೆ: ‘ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳು ಬರಪೀಡಿತವೆಂದು ಘೋಷಣೆಯಾದ ಬಳಿಕ ನಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಮುಂದೆ ಸಮಸ್ಯೆ ಬಾರದ ರೀತಿ ಇಂದಿನಿಂದಲೇ ಜಲಜೀವನ್ ಮಿಷನ್‌ಗೆ ಆದ್ಯತೆ ನೀಡುತ್ತಿದ್ದು, ಕ್ಷೇತ್ರದ ಪ್ರತಿಹಳ್ಳಿಗೂ ಯೋಜನೆ ರೂಪಿಸಲಾಗುವುದು’ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಹೋಬಳಿಯ ಕದಲಗೆರೆ ಹಾಗೂ ಕಾಡೇನಹಳ್ಳಿಯಲ್ಲಿ ಸೋಮವಾರ ₹1.04 ಕೋಟಿ ವೆಚ್ಚದಲ್ಲಿ ಜಲಜೀವನ ಮಿಷನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನಮ್ಮ ಕ್ಷೇತ್ರವೂ ಸೇರಿ ಪೂರ್ಣ ಜಿಲ್ಲೆ ಬರಪೀಡಿತ ಕ್ಷೇತ್ರವೆಂದು ಘೋಷಣೆ ಮಾಡಲಾಗಿದೆ. ಹೀಗಾಗಿ ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಹಳ್ಳಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಆಶಯದೊಂದಿಗೆ ಜಲಜೀವನ್ ಮಿಷನ್‌ಗೆ ಚಾಲನೆ ನೀಡಿದ್ದೇನೆ’ ಎಂದರು.
‘ಕ್ಷೇತ್ರದಲ್ಲಿ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ನಮ್ಮ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಸಂಸತ್‌ನಲ್ಲಿ ರೈತರ ಧ್ವನಿಯಾಗಿ ಮಾತನಾಡುತ್ತೇನೆ. ಕಾಡೇನಹಳ್ಳಿ ಗ್ರಾಮದ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಶೀಘ್ರದಲ್ಲೇ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸಲಾಗುವುದು’ ಎಂದರು.
‘ಪಾಂಡವಪುರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆಯ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದೇನೆ, ಹಾಗೇ ಕ್ರಮ ಕೈಗೊಂಡಿದ್ದೇನೆ’ ಎಂದರು.
ಈ ವೇಳೆ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು, ರೈತ ಮುಖಂಡ ಅಮೃತಿ ರಾಜಶೇಖರ್, ಬೆಟ್ಟಸ್ವಾಮಿಗೌಡ, ಸಿಂಗ್ರೀಗೌಡ, ಪುಟ್ಟಣ್ಣ, ಚೆನ್ನೇಗೌಡ, ಪುಟ್ಟಸ್ವಾಮಿ, ರಾಮು, ಯೋಗಣ್ಣ,ಕಾಡೇನಹಳ್ಳಿ ಸತೀಶ್, ಗುತ್ತಿಗೆದಾರ ನವೀನ್ , ಮಹೇಶ್, ಯೋಗರಾಜು, ದಿವಾಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.