ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಸೋಮವಾರ ಆರಂಭವಾದ ಮೂರು ದಿನಗಳ ದಸರಾ ಉತ್ಸವ ಬನ್ನಿ ಪೂಜೆಯೊಡನೆ ವಿದ್ಯುಕ್ತವಾಗಿ ಆರಂಭವಾಯಿತು.
ಪಟ್ಟಣ ಸಮೀಪದ ಕಿರಂಗೂರು ಬನ್ನಿ ಮಂಟಪದ ಬಳಿ ಬನ್ನಿ ಮರಕ್ಕೆ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಕುಟುಂಬ ಹಾಗೂ ಬಾಬುರಾಯನಕೊಪ್ಪಲಿನ ಬಿ.ಎಂ. ಸುಬ್ರಹ್ಮಣ್ಯ ಅವರ ಕುಟುಂಬ ಸದಸ್ಯರು ಬನ್ನಿ ಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಚಾಮುಂಡೇಸ್ವರಿ ದೇವಿಗೆ ಸಚಿವರ ಎನ್. ಚಲುವರಾಯಸ್ವಾಮಿ ಅವರಿಂದ ಅಗ್ರ ಪೂಜೆ ನಡೆಯಿತು.
ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್. ಯತೀಶ್, ಜಿ.ಪಂ. ಸಿಇಒ ಶೇಕ್ ತನ್ವೀರ್ ಆಸಿಫ್ ಅವರು ಚಾಮುಂಡೇಶ್ವರಿ ದೇವಿಗೆ ಪೂಜೆ ಮತ್ತು ಕಳಶ ಪೂಜೆ ನೆರವೇರಿಸಿದರು. ಶಾಸಕ ರಮೇಶ ಬಂಡಿಸಿದ್ದೇಗೌಡ ಮತ್ತು ಸುಮತಿ ರಮೇಶ ಬಂಡಿಸಿದ್ದೇಗೌಡ ದಂಪತಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು.
ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದ ವೈದಿಕ ತಂಡ ಬನ್ನಿಪೂಜೆ ಮತ್ತು ಚಾಮುಂಡೇಶ್ವರಿ ಪೂಜೆಯ ವಿಧಿ, ವಿಧಾನಗಳನ್ನು ನಡೆಸಿಕೊಟ್ಟಿತು. ಕಲ್ಯಾಣಿಯಲ್ಲಿ ಗಂಗೆ ಪೂಜೆ, ಮಂಟಪದಲ್ಲಿ ಮಹಾ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನವಗ್ರಹ ದೇವತೆಗಳ ಪ್ರಾರ್ಥನೆ, ಮಹಾಕಾಳಿ, ಮಹಾಲಕ್ಷ್ಮಿ, ಮಹಾ ಸರಸ್ವತಿ ಮತ್ತು ತ್ರಿಗುಣಾಂಬಿಕಾ ಸ್ವರೂಪಿಣಿ ಚಾಮುಂಡೇಶ್ವರಿ ಪೂಜೆಗಳು ನಡೆದವು.
ಬನ್ನಿ ಮರಕ್ಕೆ ಅಷ್ಟ ದಿಕ್ಪಾಲಕ ಬಲಿ ಪ್ರದಾನ ನಡೆಯಿತು. ಅಶ್ವ ಪೂಜೆ ಮತ್ತು ಗಜ ಪೂಜೆಯ ನಂತರ ಚಾಮುಂಡೇಶ್ವರಿ ದೇವಿ ಇದ್ದ ಮಂಟಪವನ್ನು ಕ್ರೇನ್ ಸಹಾಯದಿಂದ ಮಹೇಂದ್ರ ಆನೆಯ ಮೇಲೆ ಪ್ರತಿಷ್ಠಾಪಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.