ಮಂಡ್ಯ: ‘ಕೀಳು ಮಟ್ಟದ ರಾಜಕಾರಣ ಮಾಡುತ್ತಿರುವ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ಸರ್ಕಾರ ಕೂಡಲೇ ವಜಾಗೊಳಿಸಬೇಕು’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ ಒತ್ತಾಯಿಸಿದರು.
‘ಅಡ್ಡಂಡ ಕಾರ್ಯಪ್ಪ ರಂಗಭೂಮಿ ಕೆಲಸ ಮಾಡದೇ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ರಂಗಭೂಮಿಗೆ ಜಾತಿ, ಪಂಥ, ಭಾಷೆ ಮತ್ತು ಪ್ರಾದೇಶಿಕತೆ ಯಾವುದೂ ಇಲ್ಲ, ಎಲ್ಲವನ್ನೂ ಒಂದುಗೂಡಿಸುವ ಶಕ್ತಿ ರಂಗಭೂಮಿಗಿದೆ. ಆದರೆ, ರಂಗಾಯಣ ನಿರ್ದೇಶಕರಾಗಿ ಅಡ್ಡಂಡ ಕಾರ್ಯಪ್ಪ ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ರಂಗಾಯಣದ ನಿರ್ದೇಶಕರಾಗಿ ಮುಂದಿವರಿಸುವ ಯೋಗ್ಯತೆ ಅವರಿಗೆ ಇಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ಸಮಾಜದ ಐಕ್ಯತೆ ಮತ್ತು ಭಾವೈಕ್ಯ ತತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವ ಅವರನ್ನು ತಕ್ಷಣವೇ ಸರ್ಕಾರ ರಂಗಾಯಣ ನಿರ್ದೇಶಕ ಸ್ಥಾನದಿಂದ ರಾಜೀನಾಮೆ ಪಡೆಯಬೇಕು. ಉರಿಗೌಡ, ನಂಜೇಗೌಡರ ಹೆಸರುಗಳನ್ನು ಮುಂದೆ ಮಾಡಿ ಸಾಮಾಜಿಕ ತಲ್ಲಣಗಳನ್ನು ಸೃಷ್ಟಿಸುತ್ತಿದ್ದಾರೆ. ಸುಳ್ಳು ಪಾತ್ರ ಸೃಷ್ಟಿಸಿ ಒಕ್ಕಲಿಗ ಸಮುದಾಯಕ್ಕೆ ಅಪಚಾರ ಮಾಡಲು ಯತ್ನಿಸುತ್ತಿದ್ಧಾರೆ. ಜಾನಪದವನ್ನು ಚಾರಿತ್ರಿಕ ಸಾಕ್ಷ್ಯವನ್ನಾಗಿ ಪರಿವರ್ತಿಸಲು ನಡೆಸಿದ ಪ್ರಯತ್ನಗಳು ವಿಫಲವಾದಾಗ ಹತಾಶೆಯಿಂದ ಜಾತಿನಿಂದನೆ ಮಾಡತೊಡಗಿದ್ದಾರೆ’ ಎಂದರು.
‘ಆದಿಚುಂಚನಗಿರಿ ಮಠದ ಸ್ವಾಮೀಜಿ ಅವರ ವಿರುದ್ಧವೂ ಕೇವಲವಾಗಿ ಮಾತನಾಡಿದ್ದಾರೆ. ಮಠ ಒಕ್ಕಲಿಗರಿಗೆ ಮಾತ್ರ ಸೀಮಿತವಾಗಿಲ್ಲ, ಜಾತಿ ಮೀರಿ ಕೆಲಸ ಮಾಡುತ್ತಿರುವ ಮಠದ ವಿರುದ್ಧ ಮಾತನಾಡಿದ್ದಾರೆ. ಕನಿಷ್ಠ ತಿಳವಳಿಕೆಯೂ ಇಲ್ಲದೆ ಅರ್ಥಹೀನವಾಗಿ ಬಡಬಡಿಸಿದ್ದಾರೆ. ಜಾತಿಯನ್ನು ಮೀರಿ ಕೃಷಿಯನ್ನು ಅಪ್ಪಿಕೊಂಡಿರುವ ಎಲ್ಲಾ ಮಂದಿಯೂ ಕ್ಷೇತ್ರಕ್ಕೆ ಭಕ್ತರಾಗಿದ್ದಾರೆ’ ಎಂದರು.
‘ವರ್ಣ ವ್ಯವಸ್ಥೆಯ ತಳಮಟ್ಟದಲ್ಲಿರುವ ಎಲ್ಲಾ ಜಾತಿಯ ಜನರು ಶ್ರೀ ಕ್ಷೇತ್ರಕ್ಕೆ ನಡೆದುಕೊಳ್ಳುತ್ತಾರೆ. ಇದು ಕಾರ್ಯಪ್ಪರಿಗೆ ಅರ್ಥವಾಗಬೇಕಾದರೆ ಅಮಾವಾಸ್ಯೆ ದಿನ ಶ್ರೀಕ್ಷೇತ್ರಕ್ಕೆ ಬಂದು ನೋಡಲಿ. ಮೂರು ಪಕ್ಷಗಳಲ್ಲಿ ತಮ್ಮ ಛಾಪು ಮೂಡಿಸಿರುವ ನಾಯಕರ ಹೆಸರುಗಳನ್ನು ಎಳೆದು ತಂದಿದ್ದಾರೆ. ಈ ಕೆಲಸವನ್ನು ಮಾಡುವುದಕ್ಕೆ ವಿಧಾನಸೌಧದಲ್ಲಿ ಸಾಕಷ್ಟು ಮಂದಿ ಇದ್ದಾರೆ. ರಂಗಾಯಣ ನಿರ್ದೇಶಕನಾಗಿ ರಾಜಕಾರಣ ಮಾಡಬೇಕಾ’ ಎಂದು ಪ್ರಶ್ನಿಸಿದರು.
‘ಹುದ್ದೆಗೆ ರಾಜೀನಾಮೆ ನೀಡಿ ವಿಧಾನಸೌಧದಲ್ಲಿ ಬಾಯಿ ಬಡೆದುಕೊಳ್ಳಲಿ. ಈ ರೀತಿಯ ವರ್ತನೆ ರಂಗಾಯಣಕ್ಕಾಗಲಿ, ರಂಗಭೂಮಿಗಾಗಲಿ ಶೋಭೆ ತರುವುದಿಲ್ಲಮ, ವೈಫಲ್ಯಗಳನ್ನು ಮರೆಮಾಚಲು, ರಂಗಭೂಮಿಯನ್ನು ಕಟ್ಟಿ ಬೆಳೆಸಲಾಗದೆ ಸರ್ಕಾರದ ಮರ್ಜಿಗೆ ಇಳಿದ ಅಡ್ಡಂಡ ಸಿ ಕಾರ್ಯಪ್ಪ, ಒಂದು ಕಾಲಘಟ್ಟದಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಬೇಕೆಂದು ಕೋಗೆಬ್ಬಿಸಿದ್ದರು. ಅಖಂಡ ಕರ್ನಾಟಕದ ಅಸ್ತಿತ್ವಕ್ಕೆ ಧಕ್ಕೆ ತರಲು ಪ್ರಯತ್ನಿಸಿದ ವ್ಯಕ್ತಿ’ ಎಂದು ಆರೋಪಿಸಿದರು.
ಸಾಹಿತಿ ಡಾ.ಮ.ರಾಮಕೃಷ್ಣ, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ಹರೀಶ್‌ಕುಮಾರ್, ಕಾರ್ಯದರ್ಶಿ ಪಿ.ಲೋಕೇಶ್ ಚಂದಗಾಲು, ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕೆ.ವಿ.ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಡಾ.ಎಸ್.ಬಿ.ಶಂಕರೇಗೌಡ, ಸಮರ್ಥನಾ ಮಹಿಳಾ ವೇದಿಕೆ ಅಧ್ಯಕ್ಷೆ ನಾಗರೇವಕ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.