ADVERTISEMENT

ಅಂಬಿ ಹಣೆಗೆ ಮಂಡ್ಯ ಮಣ್ಣಿನ ತಿಲಕವಿಟ್ಟರು!

ಭಾರವಾದ ಹೃದಯದೊಂದಿಗೆ, ತುಂಬಿದ ಕಣ್ಣಾಲಿಯೊಂದಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 8:59 IST
Last Updated 26 ನವೆಂಬರ್ 2018, 8:59 IST
ಅಂಬರೀಷ್‌ ಮೃತದೇಹವನ್ನು ಬೆಂಗಳೂರಿಗೆ ಕೊಂಡೊಯ್ಯುವಾಗ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌ ಮಂಡ್ಯ ಮಣ್ಣಿನ ತಿಲಕವಿಟ್ಟರು
ಅಂಬರೀಷ್‌ ಮೃತದೇಹವನ್ನು ಬೆಂಗಳೂರಿಗೆ ಕೊಂಡೊಯ್ಯುವಾಗ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌ ಮಂಡ್ಯ ಮಣ್ಣಿನ ತಿಲಕವಿಟ್ಟರು   

ಮಂಡ್ಯ: ಭಾರವಾದ ಹೃದಯದೊಂದಿಗೆ, ತುಂಬಿದ ಕಣ್ಣಾಲಿಯೊಂದಿಗೆ ಜಿಲ್ಲೆಯ ಜನರು ಅಂಬರೀಷ್‌ ಮೃತದೇಹಕ್ಕೆ ಬೀಳ್ಕೊಟ್ಟರು. ಜನರ ಅಭಿಮಾನಕ್ಕೆ ಕಣ್ಣೀರಾದ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌ ಅಂಬರೀಷ್‌ ಹಣೆಗೆ ಮಂಡ್ಯ ಮಣ್ಣಿನ ತಿಲಕವಿಟ್ಟರು.

ಬೆಳಿಗ್ಗೆ 10.50ರಲ್ಲಿ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಮೃತದೇಹ ಎತ್ತಿದಾಗ ಸುತ್ತಲೂ ಕಿಕ್ಕಿರಿದು ತುಂಬಿದ್ದ ಲಕ್ಷಾಂತರ ಜನರು ಕಣ್ಣಲ್ಲಿ ನೀರು ತುಂಬಿಕೊಂಡರು. ಭಾವುಕ ಸನ್ನಿವೇಶದಲ್ಲಿ ‘ಕುಚಿಕು’ ಗೀತೆ ಕೇಳಿಬಂದಾಗ ಗೊಳೋ ಎಂದು ಅತ್ತರು. ಪೊಲೀಸರು, ಭದ್ರತಾ ಸಿಬ್ಬಂದಿಯ ಕಣ್ಣಲ್ಲೂ ನೀರು ಉಕ್ಕಿ ಬಂತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು, ನಟ ಯಶ್‌ ಮುಂತಾದ ಗಣ್ಯರೂ ಅಳು ತಡೆಯಲು ಸಾಧ್ಯವಾಗಲಿಲ್ಲ.

ಬೆಳಿಗ್ಗೆ 10.27ಕ್ಕೆ ಸೇನಾ ಹೆಲಿಕಾಪ್ಟರ್‌ ಕ್ರೀಡಾಂಗಣಕ್ಕೆ ಬಂದಿಳಿಯಿತು. ಹರಿದು ಬರುತ್ತಿದ್ದ ಜನರ ಸಾಲನ್ನು ದಕ್ಷಿಣ ದ್ವಾರದಲ್ಲೇ ತಡೆದು ನಿಲ್ಲಿಸಲಾಯಿತು. ನಂತರ ಅಭಿಷೇಕ್‌, ಸುಮಲತಾ ಜನರಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸುತ್ತ ಹೆಲಿಕಾಪ್ಟರ್‌ನತ್ತ ನಡೆದರು. ಮೃತದೇಹವನ್ನು ಹೆಲಿಕಾಪ್ಟರ್‌ಗೆ ಇಡುವ ಮುನ್ನ ಶವಪೆಟ್ಟೆಗೆ ತೆರೆದು ಸುಮಲತಾ, ಅಭಿಷೇಕ್‌ ಮಣ್ಣಿನ ತಿಲಕವಿಟ್ಟರು. ಮೃತದೇಹದ ಜೊತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು, ಯಶ್‌ ಸೇರಿ ಅಂಬರೀಷ್‌ ಕುಟುಂಬದ ಆರು ಮಂದಿ ತೆರಳಿದರು.

ADVERTISEMENT

17 ಗಂಟೆ ಅಂತಿಮ ದರ್ಶನ

ಭಾನುವಾರ ಸಂಜೆ 5.15ರಿಂದ ಸೋಮವಾರ ಬೆಳಿಗ್ಗೆ 10.45ರವರೆಗೂ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಸಂಜೆ 7.30ರವರೆಗೂ ಕ್ರೀಡಾಂಗಣದಲ್ಲೇ ಇದ್ದರು. ಮೈಸೂರಿನಲ್ಲಿ ತಂಗಿದ್ದ ಅವರು ಮತ್ತೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಬಂದರು. ಸಚಿವ ಸಿ.ಎಸ್‌.ಪುಟ್ಟರಾಜು ರಾತ್ರಿ ಇಡೀ ಕ್ರೀಡಾಂಗಣದಲ್ಲೇ ಇದ್ದು ಜನರನ್ನು ನಿಯಂತ್ರಿಸಿದರು.

ಮಧ್ಯರಾತ್ರಿ ಲಾಠಿ ಚಾರ್ಜ್‌

ರಾತ್ರಿ 11 ಗಂಟೆಯ ನಂತರ ಕ್ರೀಡಾಂಗಣಕ್ಕೆ ಬರುತ್ತಿದ್ದ ಜನರ ಸಂಖ್ಯೆ ಹೆಚ್ಚಾಯಿತು. ಹೀಗಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ನಟ ಯಶ್‌ ಜನರನ್ನು ನಿಯಂತ್ರಿಸಲು ಶ್ರಮಿಸಿದರು.

ಮುಖ್ಯಮಂತ್ರಿಗೆ ಮೆಚ್ಚುಗೆ

ಅಂಬರೀಷ್‌ ಮೃತದೇಹವನ್ನು ಮಂಡ್ಯಕ್ಕೆ ತರಲು ಕಾರಣರಾದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಜನರು ಮಚ್ಚುಗೆಯ ಮಳೆ ಸುರಿಸಿದರು. ಸೋಮವಾರ ಬೆಳಿಗ್ಗೆ ಜಿಲ್ಲಾ ಕ್ರೀಡಾಂಗಣಕ್ಕೆ ಕುಮಾರಸ್ವಾಮಿ ಬಂದಾಗ ಜನರು ಜೈಕಾರ ಮೊಳಗಿಸಿದರು. ಜನಪದ ಕಲಾವಿದರು‘ಅಂಬರೀಷಣ್ಣನನ್ನು ಹೊತ್ತು ತಂದ ಕುಮಾರಣ್ಣ’ ಎಂದು ಗೀತೆ ಕಟ್ಟಿ ಹಾಡಿದರು.

ಎಸ್‌ಪಿ ದುರ್ವರ್ತನೆ: ಆಕ್ರೋಶ

ಭದ್ರತೆಯಲ್ಲಿ ತೊಡಗಿದ್ದ ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಸಿಂಗ್‌ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಅವರು ಮೃತದೇಹದ ಎದುರು ಕುರ್ಚಿಯಲ್ಲಿ ಕಾಲುಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು. ಕೈಯನ್ನು ಮೇಲೆತ್ತಿ ನಿದ್ದೆಯ ಭಂಗಿ ಪ್ರದರ್ಶಿಸಿದರು. ಇದನ್ನು ಕಂಡ ಜನರು ಕಾಲು ಕೆಳಗಿಳಿಸಿ ಎಂದು ಕೂಗಿದರು. ಅವರು ಮೇಲೇಳುವವರೆಗೂ ಜನರು ಅವರ ವಿರುದ್ಧ ಘೋಷಣೆ ಕೂಗಿದರು.

ರಮ್ಯಾ ಬಾರದಿದ್ದಕ್ಕೆ ಆಕ್ರೋಶ

ಅಂತಿಮ ದರ್ಶನ ಪಡೆಯಲು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಬಾರದಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದರು. ‘ಸಾವಿಗೆ ಬರಲೂ ರಮ್ಯಾ ಮನಸ್ಸು ಕರಗಲಿಲ್ಲ ಎಂದರೆ ಆಕೆ ಮಂಡ್ಯ ಮಗಳು ಎನಿಸಿಕೊಳ್ಳಲು ಲಾಯಕ್ಕಿಲ್ಲ. ಇನ್ನು ನಮ್ಮ ಪಾಲಿಗೆ ಅವರು ಬದುಕಿದ್ದೂ ಸತ್ತಂತೆ’ ಎಂದು ದೇವರಾಜ್ ಎಂಬುವವರು ತಿಳಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.