ADVERTISEMENT

ದರ್ಶನ್‌ ಪುಟ್ಟಣ್ಣಯ್ಯ ಸೇರಿ ಶಾಸಕರಿಗೆ ಬೆದರಿಕೆ; ದೂರು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 12:42 IST
Last Updated 23 ಫೆಬ್ರುವರಿ 2024, 12:42 IST
ಗಣಿಗ ರವಿಕುಮಾರ್‌
ಗಣಿಗ ರವಿಕುಮಾರ್‌    

ಮಂಡ್ಯ: ‘ರಾಜ್ಯಸಭೆ ಚುನಾವಣೆ, ಬಿಜೆಪಿ– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕುಪ್ಪೇಂದ್ರರೆಡ್ಡಿಗೆ ಮತ ಹಾಕುವಂತೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹಾಗೂ ಇತರ ಪಕ್ಷೇತರ ಶಾಸಕರಿಗೆ ಬೆದರಿಕೆ ಬಂದಿದೆ. ಈ ಕುರಿತು ನಾನು ವಿಧಾನಸೌಧ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇನೆ’ ಎಂದು ಶಾಸಕ ಗಣಿಗ ರವಿಕುಮಾರ್‌ ಶುಕ್ರವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕುಪ್ಪೇಂದ್ರ ರೆಡ್ಡಿ, ಅವರ ಮಗ ಹಾಗೂ ಕೆಲ ಮಾಜಿ ಶಾಸಕರು ಆಮಿಷವೊಡ್ಡುತ್ತಿದ್ದಾರೆ. ₹ 10 ಕೋಟಿ, ₹ 5 ಕೋಟಿ ಹಣದ ಆಸೆ ತೋರಿಸುತ್ತಿದ್ದಾರೆ. ವೋಟು ಹಾಕದಿದ್ದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ವಿಷಯವನ್ನು ನಾನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ’ ಎಂದರು.

‘ಬೆದರಿಕೆ ವಿರುದ್ಧ ಕಾಂಗ್ರೆಸ್‌ ಪಕ್ಷದ ಪರವಾಗಿ ನಾನು ದೂರು ನೀಡಿದ್ದು ಶಾಸಕರಿಗೆ ಭದ್ರತೆ ನೀಡುವಂತೆ ಕೋರಿದ್ದೇನೆ. ಈ ವಿಷಯವನ್ನು ಸ್ಪೀಕರ್‌ ಅವರಿಗೂ ತಿಳಿಸಿದ್ದೇನೆ. ಈ ಕುರಿತು ತನಿಖಾಧಿಕಾರಿ ಕರೆ ಮಾಡಿ ದಾಖಲೆ ಒದಗಿಸುವಂತೆ ಕೋರಿದ್ದಾರೆ. ನಾವು ಅವರಿಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸುತ್ತೇನೆ’ ಎಂದರು.

ADVERTISEMENT

‘ಸೋಮವಾರ ಕೂಡ ಅಧಿವೇಶನ ಇದೆ, ನಮ್ಮ ಯಾವ ಶಾಸಕರೂ ರೆಸಾರ್ಟ್‌ಗೆ ಹೋಗುತ್ತಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು ನನ್ನನ್ನು ಯಾರೂ ಸಂಪರ್ಕ ಮಾಡುವುದಿಲ್ಲ. ನಮ್ಮಲ್ಲಿ 139 ಮತಗಳಿದ್ದು ಬೆದರಿಕೆ ಹಾಕಿ ವೋಟು ಹಾಕಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಕಾಂಗ್ರೆಸ್‌ ಪಕ್ಷ ನಮ್ಮ ಶಾಸಕರನ್ನು ರಕ್ಷಣೆ ಮಾಡಿಕೊಳ್ಳಲಿದೆ’ ಎಂದರು.

‘ಲೋಕಸಭಾ ಚುನಾವಣೆಯಲ್ಲಿ ಸ್ಟಾರ್‌ ಚಂದ್ರು ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವುದೊಂದೇ ಬಾಕಿ ಇದೆ. ಸಮಯ ಬಹಳ ಕಡಿಮೆ ಇದ್ದು ಅವರು ಎಂಟು ಕ್ಷೇತ್ರಗಳಲ್ಲಿ ಓಡಾಡುವ ಅವಶ್ಯಕತೆ ಇದೆ. ಹೀಗಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ನನ್ನೊಂದಿಗೆ ಬರುತ್ತಿದ್ದಾರೆ. ಸ್ಟಾರ್‌ ಚಂದ್ರು ಅವರು ಸಂಸದರಾಗುವುದು ನಿಶ್ಚಿತ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.