ADVERTISEMENT

ಮಂಡ್ಯ ಜಿಲ್ಲೆಯ ಆಧುನಿಕ ಶಿಲ್ಪಿ ‘ಕೆವಿಎಸ್‌’: ಜಿಲ್ಲಾಧಿಕಾರಿ ಕುಮಾರ

ಕೆ.ವಿ. ಶಂಕರಗೌಡ 109 ಒಂದು ದಿನದ ನೆನಪು– ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 14:49 IST
Last Updated 15 ಅಕ್ಟೋಬರ್ 2024, 14:49 IST
<div class="paragraphs"><p>ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಕೆ.ವಿ. ಶಂಕರಗೌಡ 109 ಒಂದು ದಿನದ ನೆನಪು ವಿಚಾರ ಸಂಕಿರಣ’ ಹಾಗೂ ‘ಮತ್ತೆ ಮತ್ತೆ ಶಂಕರಗೌಡ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಜಿಲ್ಲಾಧಿಕಾರಿ ಕುಮಾರ ಉದ್ಘಾಟಿಸಿದರು.  </p></div>

ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಕೆ.ವಿ. ಶಂಕರಗೌಡ 109 ಒಂದು ದಿನದ ನೆನಪು ವಿಚಾರ ಸಂಕಿರಣ’ ಹಾಗೂ ‘ಮತ್ತೆ ಮತ್ತೆ ಶಂಕರಗೌಡ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಜಿಲ್ಲಾಧಿಕಾರಿ ಕುಮಾರ ಉದ್ಘಾಟಿಸಿದರು.

   

– ಪ್ರಜಾವಾಣಿ ಚಿತ್ರ 

ಮಂಡ್ಯ: ‘ಕೆ.ವಿ. ಶಂಕರಗೌಡ ಅವರು ಕೇವಲ ರಾಜಕಾರಣಿ ಮಾತ್ರವಲ್ಲದೇ ಸಾಮಾಜಿಕ ಸುಧಾರಕರಾಗಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಇವರ ಚಿಂತನೆಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಂಡ್ಯ ಜಿಲ್ಲಾಡಳಿತ, ಕೆ.ವಿ. ಶಂಕರಗೌಡ ಅಧ್ಯಯನ ಪೀಠ, ಕರ್ನಾಟಕ ಸಂಘ, ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಕೆ.ವಿ. ಶಂಕರಗೌಡ 109 ಒಂದು ದಿನದ ನೆನಪು ವಿಚಾರ ಸಂಕಿರಣ ಹಾಗೂ ‘ಮತ್ತೆ ಮತ್ತೆ ಶಂಕರಗೌಡ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೆ.ವಿ. ಶಂಕರಗೌಡ ಅವರ ಮೇಲೆ ಅಪಾರವಾದಂತಹ ಗೌರವ ಮತ್ತು ಪ್ರೀತಿ ಇದೆ. ಅವರ ನಿಸ್ವಾರ್ಥ ಸೇವೆ, ಸಾಮಾಜಿಕ ಚಿಂತನೆ ಮೂಲಕ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಅವರನ್ನು ಮಂಡ್ಯ ಜಿಲ್ಲೆಯ ಆಧುನಿಕ ಶಿಲ್ಪಿ ಎಂದರೆ ತಪ್ಪಾಗಲಾರದು ಎಂದರು.

ಶಂಕರಗೌಡ ಅವರು ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ‘ನಿತ್ಯ ಸಚಿವ’ ಎಂಬ ಹೆಸರನ್ನು ಗಳಿಸಿಕೊಂಡರು. ರೈತರ ಮಗನಾಗಿ ಹುಟ್ಟಿ ರೈತಾಪಿ ವರ್ಗದವರಿಗೆ ಅನೇಕ ಕಾರ್ಯಕ್ರಮಗಳನ್ನು ತಂದು ರೈತರ ದನಿಯಾಗಿ ನಿಂತವರು. ಜೊತೆಗೆ ಕಲೆಯ ಬಗ್ಗೆ ಅಪಾರವಾದ ಪ್ರೇಮವನ್ನು ಇಟ್ಟುಕೊಂಡು ಕಲಾವಿದರನ್ನು ಪ್ರೋತ್ಸಾಹಿಸಿದವರು. ಇವರನ್ನು ‘ಮಂಡ್ಯದ ಮಾಣಿಕ್ಯ’ ಎಂದು ಹೇಳಬಹುದು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಕೆ.ವಿ. ಶಂಕರೇಗೌಡರವರ 109ನೇ ಜನ್ಮದಿನವನ್ನು ಇಂದು ಆಚರಿಸುತ್ತಿದ್ದು, ಶಿಕ್ಷಣ, ಕೃಷಿ, ರಾಜಕೀಯ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಕೆ.ವಿ. ಶಂಕರಗೌಡ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ರಾಮೇಗೌಡ ಮಾತನಾಡಿ, ‘ಶಂಕರಗೌಡ ಅವರು ಅನ್ಯಾಯಕ್ಕೆ ತಲೆಬಾಗದೆ ಸತ್ಯದ ದಾರಿಯಲ್ಲಿ ನಡೆಯುವ ವ್ಯಕ್ತಿತ್ವ ಹೊಂದಿದ್ದವರು. ರಾಜಕಾರಣ, ಶಿಕ್ಷಣ ಸಮಾಜ ಸೇವೆ ಹಾಗೂ ಕಲೆಯಲ್ಲಿ ಅನೇಕ ಸಾಧನೆ ಮಾಡಿದವರು. ಮಂಡ್ಯ ಜಿಲ್ಲೆಯ ಶಿಕ್ಷಣ ಸ್ವರೂಪವನ್ನು ಬದಲಾಯಿಸಿದ ಧೀಮಂತ ವ್ಯಕ್ತಿಯಾಗಿದ್ದವರು’ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಸಂಚಾಲಕರಾದ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿದರು. ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಎನ್. ಕರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಡ್ಯದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕಿ ಎಚ್.ಆರ್. ಸುಜಾತಾ, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಮುಂತಾದವರು ಪಾಲ್ಗೊಂಡಿದ್ದರು. 

‘ರಾಜಕಾರಣಿಗಳಿಗೆ ಸಾಂಸ್ಕೃತಿಕ ಪ್ರಜ್ಞೆ ಅವಶ್ಯ’

ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ ‘ನಾನು ವಿದ್ಯಾರ್ಥಿ ಸಮಯದಲ್ಲಿ ಶಂಕರೇಗೌಡ ಅವರ ‘ಕಬ್ಬಿನ ಹಾಲು’ ಪುಸ್ತಕವನ್ನು ಓದಿ ಪ್ರೇರಿತನಾಗಿ ಪದವಿಯನ್ನು ಮುಗಿಸಿ ಪ್ರಾಧ್ಯಾಪಕನಾಗಿ ಇಂದು ಇಲ್ಲಿ ನಿಂತಿದ್ದೇನೆ. ಇಂದಿನ ರಾಜಕಾರಣಿಗಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಇರಬೇಕು. ಜೊತೆಗೆ ಸಾಹಿತಿಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳಬೇಕು. ಸಾಹಿತ್ಯವನ್ನು ಜನರ ಬಳಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಸಾಹಿತ್ಯ ಪರಿಷತ್ ಮೇಲೆ ಇದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.