ಮೇಲುಕೋಟೆ: ಐತಿಹಾಸಿಕ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕ್ಷೇತ್ರದವಾದ ಮೇಲುಕೋಟೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಈ ಕ್ಷೇತ್ರದಲ್ಲಿ ಕೋತಿಗಳ ಉಪಟಳ ಮಿತಿ ಮೀರಿದ್ದು, ಕೋತಿಗಳ ಕಾಟಕ್ಕೆ ಪ್ರವಾಸಿಗರು, ಸ್ಥಳೀಯರು ಹೈರಾಣಾಗಿ ಹೋಗಿದ್ದಾರೆ.
ಇಲ್ಲಿನ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯ ಕಲ್ಯಾಣಿ ಹಾಗೂ ಯೋಗಾನರಸಿಂಹ ಸ್ವಾಮಿ ಬೆಟ್ಟದ ಬಳಿ ತಿಂಡಿ-ತಿನಿಸು, ನೀರಿನ ಬಾಟಲ್ ಮತ್ತು ಐಸ್ ಕ್ರೀಂ ಹಿಡಿದುಕೊಂಡಿರುವ ಪ್ರವಾಸಿಗರೇನಾದರೂ ಕಂಡರೆ ಕೋತಿಗಳು ಕ್ಷಣ ಮಾತ್ರದಲ್ಲಿ ದಾಳಿ ನಡೆಸಿ ಅವರ ಕೈಯಲ್ಲಿರುವುದನ್ನು ಕಿತ್ತು ಮರವೇರುತ್ತವೆ. ಪ್ರವಾಸಿಗರ ಬ್ಯಾಗ್ ಕಿತ್ತುಕೊಂಡು ಓಡಲು ಹೊಂಚು ಹಾಕುತ್ತವೆ.
ಯೋಗಾನರಸಿಂಹ ಸ್ವಾಮಿ ಬೆಟ್ಟದ ಮೇಲೆ ಕೋತಿಗಳದ್ದೇ ರಾಜ್ಯಭಾರ. ಎಲ್ಲೆಲ್ಲೂ ಹಿಂಡು ಹಿಂಡಾಗಿರುವ ಕೋತಿಗಳು ಭಕ್ತರಿಗೆ ಕೊಡಬಾರದ ಕಾಟ ಕೊಡುತ್ತಿವೆ. ಬೆಟ್ಟಕ್ಕೆ ಪೂಜಾ ಸಾಮಾಗ್ರಿಗಳನ್ನು ಬಲವಂತವಾಗಿಯೇ ಕಿತ್ತುಕೊಂಡು ಹೋಗುತ್ತವೆ. ವಾಹನಗಳ ಮೇಲೂ ಕೋತಿಗಳು ದಾಳಿ ಮಾಡಿ ಹಾನಿ ಮಾಡಿರುವ ಘಟನೆಗಳೂ ನಡೆದಿವೆ.
‘ಭಕ್ತರು, ಪ್ರವಾಸಿಗರ ಜೊತೆಗೆ ಸ್ಥಳೀಯರೂ ಕೋತಿಗಳ ಹಾವಳಿಯಿಂದ ಬೇಸತ್ತು ಹೋಗಿದ್ದಾರೆ. ಮನೆಗಳಿಗೆ ನುಗ್ಗುವ ಕೋತಿಗಳು ಅಡುಗೆ ಸಾಮಾಗ್ರಿಗಳ ಕೊಂಡು ಹೋಗಿ ತಿನ್ನುತ್ತವೆ. ಮನೆಯ ಮೇಲ್ಛಾವಣಿಯ ಹಂಚುಗಳನ್ನು ತೆಗೆದು ಮನೆಗೆ ನುಗ್ಗಿ ಧ್ವಂಸ ಮಾಡುತ್ತಿರುವುದನ್ನು ತಡೆಗಟ್ಟುವುದು ಹೇಗೆ ಎನ್ನುವ ಚಿಂತೆ ಎದುರಾಗಿದೆ. ಕೋತಿಗಳ ಹಾವಳಿಗೆ ಹೆದರಿ ಅಂಗಡಿಗೆ ಕಬ್ಬಿಣದ ಜಾರ್ಲಿ ಹಾಕಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ’ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಯೋಗಾನರಸಿಂಹೇಗೌಡ ಬೇಸರ ವ್ಯಕ್ತಪಡಿಸಿದರು.
ಕೋತಿಗಳ ಹಾವಳಿ ತಡೆಗೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಹೈಕೋರ್ಟ್ 2014 ರಲ್ಲಿ ಆದೇಶ ನೀಡಿತ್ತು. ಮಂಗಗಳನ್ನು ಸೆರೆಹಿಡಿಯುವ ಮತ್ತು ಪುನರ್ವಸತಿ ಕಲ್ಪಿಸುವ ಕುರಿತಾದ ಮಾರ್ಗಸೂಚಿ ಪರಿಣಾಮಕಾರಿ ಜಾರಿಗೊಳಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದ್ದು ಈ ಬಗ್ಗೆ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
‘ಮೇಲುಕೋಟೆಯಲ್ಲಿ ಕೋತಿಗಳ ಉಪಟಳ ಹೆಚ್ಚಾದ ಪರಿಣಾಮ ಸ್ಥಳೀಯ ಗ್ರಾ.ಪಂ ಅಧಿಕಾರಿಗಳ ಸಹಕಾರದೊಂದಿಗೆ ಕೋತಿ ಸೆರೆಹಿಡಿದು ಅರಣ್ಯಕ್ಕೆ ಬಿಡಲಾಗಿತ್ತು. ಇದೀಗ ಮತ್ತೆ ಉಪಟಳ ಹೆಚ್ಚಾಗಿದ್ದು. ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’ರಾಜೇಶ್ವರಿ ವನ್ಯಜೀವಿ ವಲಯಾರಣ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.