ADVERTISEMENT

ಮುಡಾ ಹಗರಣ: ಶಾಸಕ ಸಿ.ಎಸ್‌.ಪುಟ್ಟರಾಜು ಸೇರಿ 24 ಆರೋಪಿಗಳ ಎದೆಯಲ್ಲಿ ಡವಡವ

ಎಂ.ಎನ್.ಯೋಗೇಶ್‌
Published 2 ಫೆಬ್ರುವರಿ 2022, 19:30 IST
Last Updated 2 ಫೆಬ್ರುವರಿ 2022, 19:30 IST
ಮಂಡ್ಯದ ವಿವೇಕಾನಂದನಗರ ಬಡಾವಣೆ ಚಿತ್ರ
ಮಂಡ್ಯದ ವಿವೇಕಾನಂದನಗರ ಬಡಾವಣೆ ಚಿತ್ರ   

ಮಂಡ್ಯ: ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಸಿಬಿಐ ತನಿಖೆ ಹಾಗೂ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಶಾಸಕ ಸಿ.ಎಸ್‌.ಪುಟ್ಟರಾಜು ಸೇರಿ ಇತರ ಆರೋಪಿಗಳು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಕಾನೂನಿನ ಕುಣಿಕೆ ಮತ್ತಷ್ಟು ಜಟಿಲಗೊಂಡಿದ್ದು ಎಲ್ಲಾ 24 ಆರೋಪಿಗಳಿಗೆ ಸಂಕಷ್ಟ ಎದುರಾಗಿದೆ.

ವಿವೇಕಾನಂದ ಬಡಾವಣೆ 107 ನಿವೇಶನಗಳ ಹಂಚಿಕೆಯಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿಯಮ ಮೀರಿ ಕುಟುಂಬ ಸದಸ್ಯರಿಗೆ, ಸಂಬಂಧಿಕರಿಗೆ ಹಂಚಿದ ಆರೋಪವನ್ನು ಸಿಬಿಐ ವಿಶೇಷ ನ್ಯಾಯಾಲಯ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಬಹಳ ಗಂಭೀರವಾಗಿ ಪರಿಗಣಿಸಿವೆ. ವಿಚಾರಣಾ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಸಮಗ್ರ ತನಿಖೆ ನಡೆಯಲೇಬೇಕು ಎಂದು ಈಚೆಗೆ ಹೈಕೋರ್ಟ್‌ ಆದೇಶ ನೀಡಿರುವ ಕಾರಣ ಆರೋಪಿಗಳು ತಪ್ಪಿಸಿಕೊಳ್ಳಲು ನಡೆಸುತ್ತಿರುವ ಹಾದಿಗಳು ಮುಚ್ಚಿದಂತಾಗಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಸಾರ್ವಜನಿಕ ಸೇವಕರಿಗೆ (ಜನಪ್ರತಿನಿಧಿಗಳು) ದೊರೆಯುವ ಕಾನೂನಾತ್ಮಕ ರಕ್ಷಣೆ ಪಡೆಯಲು ಶಾಸಕ ಪುಟ್ಟರಾಜು ಅವಿರತ ಶ್ರಮಿಸಿದ್ದರು. ಭ್ರಷ್ಟಾಚಾರ ನಿಗ್ರಹ ಕಾಯ್ದೆಯು 2018ರಲ್ಲಿ ತಿದ್ದುಪಡಿಯಾಗಿದ್ದು ಸಾರ್ವಜನಿಕ ಸೇವಕರ ವಿರುದ್ಧ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರದ ಅನುಮತಿ ಕಡ್ಡಾಯ ಎಂಬ ನಿಯಮ ರೂಪಿಸಲಾಗಿದೆ. ಅದರ ಅಡಿಯಲ್ಲಿ ಕಾನೂನಾತ್ಮಕ ರಕ್ಷಣೆ ಹಾಗೂ ವಿಚಾರಣೆ ರದ್ದತಿ ಕೋರಿ ಶಾಸಕ ಪುಟ್ಟರಾಜು ಹೈಕೋರ್ಟ್‌ ಕದ ತಟ್ಟಿದ್ದರು.

ADVERTISEMENT

ಇದಕ್ಕೂ ಮೊದಲು 2015ರಲ್ಲಿ ಸಿಬಿಐ ತನಿಖಾ ತಂಡ ಇವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಆಗಿನ ಸ್ಪೀಕರ್‌ ಕೆ.ಬಿ.ಕೋಳಿವಾಡ ಅವರಿಗೆ ಪತ್ರ ಬರೆದಿತ್ತು. ಆದರೆ ಸ್ಪೀಕರ್‌, ವಿಚಾರಣೆಗೆ ಅನುಮತಿ ನೀಡಲು ನಿರಾಕರಿಸಿದ್ದರು. ಇದರ ಲಾಭ ಪಡೆಯಲು ಯತ್ನಿಸಿದ್ದ ಪುಟ್ಟರಾಜು ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದು ಮಾಡಬೇಕು ಎಂದು ಕೋರಿದ್ದರು.

ಅವರ ಮನವಿಯನ್ನು ತಳ್ಳಿಹಾಕಿರುವ ಹೈಕೋರ್ಟ್‌ ಕಾಯ್ದೆಯ ತಿದ್ದುಪಡಿ ನಂತರ ಕಾನೂನಾತ್ಮಕ ರಕ್ಷಣೆ ನೀಡಲು ನಿರಾಕರಿಸಿದೆ. 2016ರಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಂಡು ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಆ ಸಂದರ್ಭದಲ್ಲಿ ಪುಟ್ಟರಾಜು ಶಾಸಕರಾಗಿರಲಿಲ್ಲ, ಹೀಗಾಗಿ ಕಾಯ್ದೆಯ ಕಾನೂನಾತ್ಮಕ ರಕ್ಷಣೆ ಅವರಿಗೆ ದೊರೆಯುವುದಿಲ್ಲ ಎಂದು ತಿಳಿಸಿದೆ. ಇದರಿದಾಗಿ ಆರೋಪಿಗಳು ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದು ಅವರು ಕಟಕಟೆಗೆ ಬರುವುದು ಅನಿವಾರ್ಯವಾಗಿದೆ.

2018ರಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ತಿದ್ದುಪಡಿ ತಂದ ನಂತರ ಆರೋಪಿಗಳಿಗೆ ರಕ್ಷಣೆ ನೀಡಲು ನಿರಾಕರಿಸಿದ ರಾಜ್ಯದ ಪ್ರಮುಖ ಪ್ರಕರಣ ಇದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ಸಿ.ಎಸ್‌.ಪುಟ್ಟರಾಜು, ಎಂ.ಶ್ರೀನಿವಾಸ್‌, ರಮೇಶ್‌ಬಾಬು ಬಂಡಿಸಿದ್ದೇಗೌಡ, ವಿದ್ಯಾ ನಾಗೇಂದ್ರ ಸೇರಿ 24 ಆರೋಪಿಗಳು ವಿಶೇಷ ಸಿಬಿಐ ನ್ಯಾಯಾಲಯದ ವಿಚಾರಣೆ ಎದುರಿಸಬೇಕಾಗಿದೆ.

ಸುಪ್ರೀಂ ಕೋರ್ಟ್‌ನಲ್ಲೂ ಆದೇಶ: ಪ್ರಕರಣದ 8ನೇ ಆರೋಪಿ ಮುರಳೀಧರ್‌ ಅವರ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ ರದ್ದು ಮಾಡಿತ್ತು. ಅದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಹೈಕೋರ್ಟ್‌ ಆದೇಶವನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್‌ ಆರೋಪಿಗಳ ವಿರುದ್ಧ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು ಎಂದು ಆದೇಶ ನೀಡಿತ್ತು. ಹೀಗಾಗಿ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಮುರಳೀಧರ್‌ ಆಸೆಯೂ ಕೊನೆಗೊಂಡಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಮುರಳೀಧರ್‌ ಪ್ರಕರಣದ ವಿಚಾರಣೆ ಬಾಕಿ ಇದ್ದ ಕಾರಣ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ತಡವಾಗಿತ್ತು. ವಿಚಾರಣೆಗೆ ಸುಪ್ರೀಂ ಕೋರ್ಟ್‌ ಕೂಡ ಹಸಿರು ನಿಶಾನೆ ತೋರಿದ ನಂತರ 2021, ಮಾರ್ಚ್‌ನಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಎಲ್ಲಾ 24 ಆರೋಪಿಗಳಿಗೆ ಸಮನ್ಸ್‌ ನೀಡಿತ್ತು. ಎಲ್ಲಾ ಆರೋಪಿಗಳು ಜಾಮೀನು ಪಡೆದಿದ್ದರು.

ವಿಚಾರಣೆ ಪ್ರಕ್ರಿಯೆ ಮುಗಿಯುವವರೆಗೂ ದೇಶ ತೊರೆಯದಂತೆ ಆರೋಪಿಗಳಿಗೆ ಕೋರ್ಟ್‌ ಸೂಚಿಸಿತ್ತು. ದಂತ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಶಾಸಕ ಪುಟ್ಟರಾಜು ಮನವಿ ಮಾಡಿದ್ದರು. ಆರೋಗ್ಯದ ದೃಷ್ಟಿಯಿಂದ ಅವರಿಗೆ ಅನುಮತಿ ಸಿಕ್ಕಿತ್ತು.

‘ಪುಟ್ಟರಾಜು ಅರ್ಜಿ ವಜಾ ಮಾಡುವ ಮೊದಲು ಹೈಕೋರ್ಟ್‌ ಹಲವು ಮಾದರಿ ಪ್ರಕರಣಗಳನ್ನು ಉಲ್ಲೇಖ ಮಾಡಿದೆ. ಹೀಗಾಗಿ ಆರೋಪಿಗಳು ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಸರ್ಕಾರಿ ವಕೀಲರೊಬ್ಬರು ತಿಳಿಸಿದರು.

ರಾಜಕೀಯ ಹಾದಿಗೂ ಮುಸುಕು

ಆರೋಪಿಗಳಲ್ಲಿ ಹಾಲಿ, ಮಾಜಿ ಶಾಸಕರಿದ್ದು ಸಿಬಿಐ ವಿಚಾರಣೆಯಿಂದ ಅವರ ರಾಜಕೀಯ ಹಾದಿ ಮುಸುಕಾಗುವ ಸಾಧ್ಯತೆ ಇದೆ. ಸಿಬಿಐ ನಡೆಸಿದ ತನಿಖೆಯಲ್ಲಿ ಆರೋಪ ಸಾಬೀತಾಗಿದೆ, ವಿಚಾರಣೆಯಲ್ಲೂ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಕೀಲರು ತಿಳಿಸುತ್ತಾರೆ.

‘2010ನಾನು ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೆ. ನಾನು ನಡೆಸಿದ ಕಾನೂನು ಹೋರಾಟದ ಭದ್ರ ಅಡಿಪಾಯದಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಕಾನೂನು ಪ್ರಕ್ರಿಯೆಗಳಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಪ್ರಕರಣದ ತಾರ್ಕಿಕ ಅಂತ್ಯ ಕಾಣುವವರೆಗೂ ನ್ಯಾಯಾಲಯಕ್ಕೆ ಪೂರಕ ದಾಖಲೆ ಒದಗಿಸಲಾಗುವುದು’ ಎಂದು ವಕೀಲರಾದ ಟಿ.ಎಸ್‌.ಸತ್ಯಾನಂದ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.