ಮಂಡ್ಯ: ‘ಆಡಳಿತ ಪಕ್ಷ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ತೊಡಗಿದ್ದರೆ ಅದನ್ನು ಜನರ ಮುಂದೆ ಇಡಲು ಪ್ರತಿಪಕ್ಷದವರು ಪಾದಯಾತ್ರೆ ನಡೆಸುವುದು ಅವರ ಹಕ್ಕು. ಆದರೆ, ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದವರೇ ಬೀದಿಗಿಳಿದು ಪ್ರತಿಪಕ್ಷದವರ ರೀತಿ ನಡೆದುಕೊಳ್ಳುತ್ತಿರುವುದು ವಿಪರ್ಯಾಸ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದರು.
ಕಾಂಗ್ರೆಸ್ ಸರ್ಕಾರದ 14 ತಿಂಗಳ ದುರಾಡಳಿತ ಮತ್ತು ಹಗರಣಗಳನ್ನೊಳಗೊಂಡ ‘ಜನವಿರೋಧಿ ಕಾಂಗ್ರೆಸ್’ ಕೈಪಿಡಿ ಬಿಡುಗಡೆ ಮಾಡಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಪ್ಪು ಮಾಡಿಲ್ಲದಿದ್ದರೆ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜನಾಂದೋಲನ ಮಾಡುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದರು.
ಸೈಟ್ ಏಕೆ ವಾಪಸ್ ಕೊಡ್ತೀರಾ?
ಮುಡಾ ಹಗರಣದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ತುಂಬಾ ಭಯಭೀತರಾಗಿದ್ದಾರೆ. ಎರಡು ದಿನ ಮನೆಯಲ್ಲಿ ಕುಳಿತಿದ್ದರು. ನ್ಯಾಯಯುತವಾಗಿ ಸೈಟ್ ತೆಗೆದುಕೊಂಡಿದ್ದರೆ, ಈಗ ಏಕೆ ವಾಪಸ್ ಕೊಡುತ್ತೇನೆ ಎಂದು ಹೇಳುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಆರೋಪಗಳು ಕೇಳಿಬಂದಾಗ ವಿಧಾನಸಭೆಯಲ್ಲಿ ಅಗತ್ಯ ದಾಖಲೆ ನೀಡಿ, ತಪ್ಪು ಮಾಡಿಲ್ಲವೆಂದು ಸಾಬೀತು ಮಾಡಬೇಕು. ಅದನ್ನು ಬಿಟ್ಟು ಬೀದಿಗೆ ಬಂದು ನಾನು ಕಳ್ಳ ಅಲ್ಲ ಎಂದು ಹೇಳಿದರೆ ನಂಬಲು ಸಾಧ್ಯವೇ? ವಿಧಾನಸೌಧದಲ್ಲಿ ಚರ್ಚೆಗೆ ಅವಕಾಶ ಕೊಡದಿದ್ದಕ್ಕೆ ನಾವು ಬೀದಿಗೆ ಬಂದು ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್ ಹಗರಣಗಳ ವಿರುದ್ಧ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದರು.
ಸಿದ್ದರಾಮಯ್ಯನ ಬಟ್ಟೆ ಲ್ಯಾಂಡ್ರಿಗೆ ಕೊಡಲಿ: ವಿಧಾನಸೌಧದಲ್ಲಿ ನಿಲುವಳಿ ಸೂಚಿಸುವುದು ಒಂದು ನಿಯಮ. ವಾಲ್ಮೀಕಿ ಹಗರಣದ ಬಗ್ಗೆ ನಿಲುವಳಿ ಸೂಚನೆ ತಂದೆವು. ನಾನು 50 ಪುಟಗಳ ದಾಖಲೆ ಕೊಟ್ಟಿದ್ದೇನೆ. ಸಿದ್ದರಾಮಯ್ಯ ಮುಚ್ಚಿಡುವ ಪ್ರಯತ್ನ ಮಾಡಿದರು. ಚರ್ಚೆಗೆ ಸರ್ಕಾರ ತಯಾರಿರಲಿಲ್ಲ. ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಎಷ್ಟು ಕಷ್ಟ ಅನುಭವಿಸಿದರು. ಸಿದ್ದರಾಮಯ್ಯ ಸ್ವಚ್ಛ ಅನ್ನುತ್ತಾರೆ. ಅವರ ಬಟ್ಟೆಗಳನ್ನು ಲ್ಯಾಂಡ್ರಿಗೆ ಕೊಟ್ಟರೆ ಸ್ವಚ್ಛವಾಗುತ್ತವೆ ಎಂದು ವ್ಯಂಗ್ಯವಾಡಿದರು.
ತನಿಖೆಗೆ ಹೆದರುವುದೇಕೆ?
ಡಿ.ಕೆ.ಶಿವಕುಮಾರಣ್ಣ, ಸಿದ್ದರಾಮಣ್ಣ ನಾವು ದಾಖಲೆ ಬಿಡುಗಡೆ ಮಾಡಿದ್ದೇವೆ. ಗ್ಯಾರಂಟಿಗೆ ಕೊಡಲು ದಲಿತರ ಹಣವೇ ಬೇಕಿತ್ತಾ?. ಈ ಹಿಂದೆ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅವಕಾಶ ಕೊಟ್ಟಾಗ, ಸ್ವಾಗತ ಮಾಡಿದ್ರಿ. ಈಗ ನಿಮಗೆ ನೋಟಿಸ್ ಕೊಟ್ಟಿದ್ದಕ್ಕೆ ವಿರೋಧ ಏಕೆ? ಪ್ರಾಸಿಕ್ಯೂಷನ್‌ಗೂ ಅನುಮತಿ ಕೊಡಲಿ ಬಿಡಿ. ತನಿಖೆ ನಡೆಯಲಿ, ನೀವು ಸ್ವಚ್ಛವಾಗಿದ್ದರೆ ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ವಕ್ತಾರ ಚಂದ್ರಶೇಖರ್ ಇದ್ದರು.
‘ವಾಲ್ಮೀಕಿ ನಿಗಮದ ಹಗರಣ, ಮೈಸೂರಿನ ಮುಡಾ ಹಗರಣ, ಸರ್ಕಾರಿ ಯಂತ್ರದ ದುರ್ಬಳಕೆ, ಆರೋಗ್ಯ ತಪ್ಪಿದ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ, ಕಾಂಗ್ರೆಸ್ ಆಡಳಿತದಲ್ಲಿ ಹದಗೆಟ್ಟ ಕಾನೂನು ವ್ಯವಸ್ಥೆ ಮತ್ತು ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಪೊಲೀಸರ ಮೇಲೆ ಹಲ್ಲೆ ಮುಂತಾದ ವಿಷಯಗಳ ಕುರಿತು 32 ಪುಟಗಳ ‘ಜನವಿರೋಧಿ ಕಾಂಗ್ರೆಸ್ ಕೈಪಿಡಿ’ಯಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯ ಭ್ರಷ್ಟಾಚಾರ ಮತ್ತು ಹಗರಣಗಳ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದು ಆರ್.ಅಶೋಕ್ ತಿಳಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಬೆಂಗಳೂರು ಸೈಬರ್ ವಂಚಕರ ರಾಜಧಾನಿಯಾಗಿರುವುದು, ಅಭಿವೃದ್ಧಿ ಮರೆತ ಕಾಂಗ್ರೆಸ್ ಸರ್ಕಾರ, ಬರ ಮತ್ತು ಪ್ರವಾಹ ನಿರ್ವಹಣೆಯಲ್ಲಿ ವೈಫಲ್ಯ, ಕಾಂಗ್ರೆಸ್ ಸರ್ಕಾರದ ಆರ್ಥಿಕ ಅಶಿಸ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನಕ್ಕೆ ಕತ್ತರಿ, ಬೆಲೆ ಏರಿಕೆಯನ್ನು ಬಳುವಳಿಗಯಾಗಿ ಕೊಟ್ಟ ಕಾಂಗ್ರೆಸ್, ಗ್ಯಾರಂಟಿ ಯೋಜನೆಗಳ ಅಸಮರ್ಪಕ ಅನುಷ್ಠಾನ ವಿಷಯಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.