ADVERTISEMENT

ಕೆ.ಆರ್.ಪೇಟೆ: ಸೌಹಾರ್ದ ಬೆಸೆದ ‘ಬಾಬಯ್ಯ’ನ ಹಬ್ಬ

ಅಗ್ರಹಾರಬಾಚಹಳ್ಳಿ: ಭಕ್ತಿ ಭಾವದ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 6:42 IST
Last Updated 18 ಜುಲೈ 2024, 6:42 IST
ಮೊಹರಂ ಪ್ರಯುಕ್ತ ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿಯಲ್ಲಿ ಮುಸ್ಲಿಮರು ಬಾಬಯ್ಯನ ಹಬ್ಬವನ್ನು ‌ಸಂಭ್ರಮದಿಂದ ಆಚರಿಸಿದರು.
ಮೊಹರಂ ಪ್ರಯುಕ್ತ ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿಯಲ್ಲಿ ಮುಸ್ಲಿಮರು ಬಾಬಯ್ಯನ ಹಬ್ಬವನ್ನು ‌ಸಂಭ್ರಮದಿಂದ ಆಚರಿಸಿದರು.   

ಕೆ.ಆರ್.ಪೇಟೆ: ಸೌಹಾರ್ದಕ್ಕೆ ಹೆಸರಾದ ಮೊಹರಂ ಹಬ್ಬ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಆಚರಿಸಲಾಯಿತು. ಮುಸ್ಲಿಮರ ಈ ಹಬ್ಬದಲ್ಲಿ ಹಿಂದೂಗಳು ಭಾಗವಹಿಸಿ ಭಕ್ತಿ ಭಾವ ಮೆರೆದರು.

ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಮಂಗಳವಾರ ಮತ್ತು ಬುಧವಾರ ಹಬ್ಬದ ಸಂಭ್ರಮ ಹೆಚ್ಚಿತ್ತು. ಹಬ್ಬದ ಅಂಗವಾಗಿ ಕೊಂಡೋತ್ಸವ, ಜಾನಪದ ಶೈಲಿಯ ಬಹುರೂಪಿ ರೂಪಕ ಪ್ರದರ್ಶನ, ಕೆಂಡದಸ್ನಾನ, ಅನ್ನದಾನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹಿಂದೂಧರ್ಮದ ಜನರು ಬಾಬಯ್ಯ ದೇವರಿಗೆ ಸಕ್ಕರೆ, ಕಡ್ಲೇಪುರಿ ಪ್ರಸಾದ ಅರ್ಪಿಸಿ ಬಾಬಯ್ಯನ ದರ್ಶನ ಪಡೆದರು. 

ಗ್ರಾಮದಲ್ಲಿ ಪರಾಂಪರಗತವಾಗಿ ಬಂದ ಈ ಹಬ್ಬವನ್ನು ಹಿಂದೂ- ಮುಸ್ಲಿಮರು ಸೇರಿ ಸೌಹಾರ್ದದಿಂದ ಆಚರಿಸಿಕೊಂಡು ಬಂದಿದ್ದು, ಸಂಪ್ರದಾಯ ಮುಂದುವರಿದಿದೆ. ಹಿಂದೂ ಧರ್ಮೀಯರು ಚಂದಾ ವಸೂಲಿ ಮಾಡಿ ಬಾಬಯ್ಯನ ಹಬ್ಬಕ್ಕೆಂದು ವಂತಿಗೆ ನೀಡುವದು ವಿಶೇಷ. ಇಡೀ ಗ್ರಾಮದವರು ರಂಗದ ಕುಣಿತ ಸೇರಿದಂತೆ ಕೊಂಡೋತ್ಸವದಲ್ಲಿ ಭಾಗವಹಿಸಿದರು.

ADVERTISEMENT

‘ನಮ್ಮ ಹಿರಿಯರು ಸೌಹಾರ್ದದ ಸಂಕೇತವಾಗಿ ಮೊಹರಂ ಹಬ್ಬವನ್ನು ಆಚರಿಸಿಕಂಡು ಬಂದಿದ್ದಾರೆ. ಗ್ರಾಮಸ್ಥರು ಮತ ಬೇದವಿಲ್ಲದೆ ನಮ್ಮೊಂದಿಗೆ ಬೆರೆತು ಸಹಕಾರ ನೀಡುವುದಲ್ಲದೇ ಬಾಬಯ್ಯನ ದರ್ಶನ ಪಡೆದು ಪ್ರಸಾದ ಪಡೆಯುವದು ವಾಡಿಕೆ’ ಎಂದು ಮುಸ್ಲಿಂ ಸಮಾಜದ ಹಿರಿಯ ಮುಖಂಡ ನಜೀರ್ ಅಹಮದ್ ಹೇಳಿದರು.

‘ನಮ್ಮ ಗ್ರಾಮ ಹೊಯ್ಸಳ ಸಂಸ್ಕೃತಿಯ ನೆರಳಿನಲ್ಲಿ ಬೆಳೆದ ಗ್ರಾಮವಾಗಿದ್ದು, ಪ್ರಮುಖ ಆಡಳಿತ ಕೇಂದ್ರವಾಗಿತ್ತು. ಹಾಗಾಗಿ ನಮ್ಮಲ್ಲಿ ವೈವಿಧ್ಯಗಳಿವೆ. ಮೊದಲಿನಿಂದಲೂ ಎಲ್ಲಾ ಧರ್ಮ ಮತ್ತು ಜಾತಿಯವರು ಶಾಂತಿ, ಸೌಹಾರ್ದರಿಂದ ಬದುಕು ನಡೆಸಿಕೊಂಡು ಬಂದಿದ್ದು, ನಮ್ಮ ಧರ್ಮದ ಎಲ್ಲಾ ಹಬ್ಬ ಜಾತ್ರೆಗಳಿಗೆ ಮುಸಲ್ಮಾನರು ಸಹಕಾರ ನೀಡುತ್ತಾರೆ. ಹಾಗೆಯೇ ಇಡೀ ಗ್ರಾಮದ ಜನರು ಮುಸಲ್ಮಾನರ ಹಬ್ಬವೆಂಬ ಬೇದ ಭಾವ ಮಾಡದೇ ಅವರೊಂದಿಗೆ ಬೆರತು ಆರ್ಥಿಕ ನೆರವು ಸೇರಿದಂತೆ ಹಬ್ಬ ನಡೆಸಲು ಬೇಕಾದ ಎಲ್ಲಾ ರೀತಿಯ ನೆರವು ನೀಡಿ ಮೊಹರಂ ಆಚರಣೆಗೆ ಸಾಥ್ ನೀಡುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆರ್. ಶ್ರೀನಿವಾಸ್ ತಿಳಿಸಿದರು

‘ಬುಧವಾರ ನಡೆದ ಮೆರವಣಿಗೆಯಲ್ಲಿ ಹಿಂದೂ ಮುಸಲ್ಮಾನರು ಭಾಗವಹಿಸಿ ಭಾವೈಕ್ಯತೆವನ್ನು ಮೆರೆದಿದ್ದು, ನಮ್ಮ ಬಹುಸಂಸ್ಕೃತಿಗೆ ಹಿಡಿದ ಕೈಗನ್ನಡಿಯಂತಿತ್ತು. ಇದೇ ರೀತಿಯಲ್ಲಿ ಮೊಹರಂ ಆಚರಣೆ ಶೀಳನೆರೆ, ಶೀಳನೆರೆಕೊಪ್ಪಲು, ಅಕ್ಕಿಹೆಬ್ಬಾಳು, ಆಲಂಬಾಡಿಕಾವಲ್ ಸಿಂಧುಘಟ್ಟ ಸೇರಿದಂತೆ ಗ್ರಾಮಗಳಲ್ಲಿ ನಡೆದುಕೊಂಡು ಬಂದಿದೆ’ ಎಂದು ಮುಸ್ಲಿಂ ಮುಖಂಡರು ತಿಳಿಸಿದರು.

ಮೊಹರಂ ಪ್ರಯುಕ್ತ ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿಯಲ್ಲಿ ಮುಸ್ಲಿಮರು ಬಾಬಯ್ಯನ ಹಬ್ಬವನ್ನು ‌ಸಂಭ್ರಮದಿಂದ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.