ADVERTISEMENT

ಅರ್ಚಕರ ಹತ್ಯೆ: ಬೆಳ್ಳಂಬೆಳಿಗ್ಗೆ ಬೆಚ್ಚಿದ ಮಂಡ್ಯ

ಹುಂಡಿ ಹಣಕ್ಕಾಗಿ ಅಮಾಯಕರ ಜೀವ ತೆಗೆಯಬೇಕಾಗಿತ್ತಾ? ಮುಜರಾಯಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ?

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 13:51 IST
Last Updated 11 ಸೆಪ್ಟೆಂಬರ್ 2020, 13:51 IST
ದೇವಾಲಯದ ಮುಂದೆ ಸೇರಿದ್ದ ಜನಸ್ತೋಮ
ದೇವಾಲಯದ ಮುಂದೆ ಸೇರಿದ್ದ ಜನಸ್ತೋಮ   

ಮಂಡ್ಯ: ಶುಕ್ರವಾರ ಬೆಳ್ಳಂಬೆಳಿಗ್ಗೆ ಗುತ್ತಲು ಅರಕೇಶ್ವರಸ್ವಾಮಿ ದೇವಾಲಯದ ಮೂವರು ಅರ್ಚಕರ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ನಗರದ ಜನರು ಬೆಚ್ಚಿ ಬಿದ್ದರು. ಹುಂಡಿಯ ಪುಡಿಗಾಸಿಗಾಗಿ ಅಮಾಯಕರ ಜೀವ ತೆಗೆಯಬೇಕಾಗಿತ್ತಾ ಎನ್ನುತ್ತಾ ಮರುಗಿದರು.

ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಐತಿಹಾಸಿಕ ಅರಕೇಶ್ವರಸ್ವಾಮಿ ದೇವಾಲಯ ಜಿಲ್ಲೆಯ ಅತೀ ಹೆಚ್ಚು ಆದಾಯ ತರುವ ದೇವಾಲಯಗಳಲ್ಲಿ ಒಂದಾಗಿದೆ. ನಗರದ ಹೊರವಲಯದ ಭತ್ತ, ಕಬ್ಬಿನ ಗದ್ದೆಯಲ್ಲಿ ಅರಳಿರುವ ದೇವಾಲಯಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಬರುತ್ತಿದ್ದರು. ಅರಕೇಶ್ವರನ ಜಾತ್ರೆಗೆ ಹೊರರಾಜ್ಯಗಳ ಭಕ್ತರೂ ಬರುತ್ತಿದ್ದರು. ಸೋಮವಾರ ಇಲ್ಲಿ ವಿಶೇಷ ಪೂಜೆಗೆ ಅಪಾರ ಸಂಖ್ಯೆಯ ಜನ ಸೇರುತ್ತಿದ್ದರು. ಇಂತಹ ಪ್ರಸಿದ್ಧ ದೇವಾಲಯದಲ್ಲಿ ನಡೆದ ಘಟನೆ ಭಯ ಮೂಡಿಸಿತು.

‘ಶಿವಾರ್ಚಕ’ ಸಮುದಾಯಕ್ಕೆ ಸೇರಿದ್ದ ಕುಟುಂಬಗಳ ಸದಸ್ಯರು ಸರತಿಯ ಆಧಾರದ ಮೇಲೆ ಅರಕೇಶ್ವರನಿಗೆ ಪೂಜೆ ಸಲ್ಲಿಸುತ್ತಿದ್ದರು. ಪೂಜೆಯೇ ಇವರ ವೃತ್ತಿಯಾಗಿದ್ದು ಪಾಳಿ ಮೂಲಕ ಪೂಜಾ ಕಾರ್ಯ ವಿಂಗಡಣೆ ಮಾಡಿಕೊಂಡಿದ್ದರು. ಹತ್ಯೆಯಾದ ಪ್ರಕಾಶ್‌ (55), ಗಣೇಶ್‌ (45), ಆನಂದ್‌ (38) ಅವರಿಗೆ ವರ್ಷದಲ್ಲಿ ಕೇವಲ 2–3 ದಿನಗಳು ಮಾತ್ರ ಪೂಜೆ ಸಿಗುತ್ತಿತ್ತು.

ADVERTISEMENT

ಪೂಜೆಯ ಜೊತೆಗೆ ಪ್ರಕಾಶ್‌ ಹಾಗೂ ಗಣೇಶ್‌ ದೇವಾಲಯದ ಕಾವಲುಗಾರರಾಗಿ ಕೆಲಸಕ್ಕೆ ಸೇರಿದ್ದರು. ಅವರಿಗೆ ತಲಾ ₹ 5 ಸಾವಿರ ಸಂಬಳ ನೀಡಲಾಗುತ್ತಿತ್ತು. ಆನಂದ್‌, ಕಾವಲುಗಾರನೂ ಆಗಿರಲಿಲ್ಲ. ಕೇವಲ ಪ್ರಕಾಶ್‌, ಗಣೇಶ್‌ ಜೊತೆ ಮಲಗಲು ದೇವಾಲಯಕ್ಕೆ ತೆರಳುತ್ತಿದ್ದರು. ಇವರಿಗೆ ದೇವಾಲಯದ ಜೊತೆ ಆಪ್ತ ಸಂಬಂಧವಿತ್ತು. ಭಕ್ತರ ಸಂಖ್ಯೆ ಹೆಚ್ಚಾದಾಗ ದೇವಾಲಯದ ವಿವಿಧ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದರು.

ಸರ ಅಪಹರಣ: ನಗರದಿಂದ ಕೊಂಚ ದೂರದಲ್ಲಿ ಇರುವ ಕಾರಣ ಅರಕೇಶ್ವರ ದೇವಾಲಯದಲ್ಲಿ ಸರ ಅಪಹರಣ ಪ್ರಕರಣಗಳು ಆಗಾಗ ವರದಿಯಾಗುತ್ತಿದ್ದವು. ಕಾರ್ತೀಕ ಮಾಸ, ಗೌರಿ–ಗಣೇಶ ಹಬ್ಬದ ಸಂದರ್ಭದಲ್ಲಿ ನಡೆಯುತ್ತಿದ್ದ ವಿಶೇಷ ಪೂಜೆಗಳ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದರು. ಈ ಸಂದರ್ಭದಲ್ಲಿ ಕಳ್ಳರು ಕೈಚಳಕ ತೋರುತ್ತಿದ್ದರು. ಎರಡು ವರ್ಷಗಳ ಹಿಂದೆ ಗೌರಿ ಹಬ್ಬದ ದಿನ ನಾಲ್ವರು ಮಹಿಳೆಯರ ಸರ ಅಪಹರಣ ಪ್ರಕರಣಗಳು ವರದಿಯಾಗಿದ್ದವು.

ಸರ ಅಪಹರಣ ಪ್ರಕರಣಗಳ ನಂತರ ಮುಜರಾಯಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಆದರೆ ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಿರಲಿಲ್ಲ. ಸಿಸಿಟಿವಿ ಕ್ಯಾಮೆರಾ ಸರಿಯಾಗಿದ್ದರೆ ದುಷ್ಕರ್ಮಿಗಳು ದೇವಾಲಯಕ್ಕೆ ನುಗ್ಗುವ ಧೈರ್ಯ ಮಾಡುತ್ತಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

‘30 ವರ್ಷಗಳ ಹಿಂದೆ ಹಳೇ ದೇವಾಲಯ ಇದ್ದಾಗ ಒಮ್ಮೆ ಕಳ್ಳತನವಾಗಿತ್ತು. ಹೊಸ ದೇವಾಲಯದಲ್ಲಿ ಎಂದಿಗೂ ಕಳ್ಳತನ ಆಗಿರಲಿಲ್ಲ. ಆದರೆ ಈಗ ಹಣಕ್ಕಾಗಿ ಮೂವರು ಅರ್ಚಕರನ್ನೂ ಹತ್ಯೆ ಮಾಡಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಸದ್ಯದ ಪಾಳಿಯಲ್ಲಿ ಪೂಜೆ ಸಲ್ಲಿಸುತ್ತಿರುವ ಅರ್ಚಕ ನಾಗರಾಜ್‌ ತಿಳಿಸಿದರು.

ಅರ್ಚಕರನ್ನು ಕೊಲೆ ಮಾಡಿ ಹುಂಡಿಯನ್ನು ದೇವಾಲಯದ ಆವರಣದಲ್ಲಿ ಬಿಸಾಡಿ ಹೋಗಿರುವುದು

ಅಮಾಯಕರು ಕೊಲೆ ಮಾಡಲಾಗಿದ್ದು ಸೂಕ್ತ ಪರಿಹಾರ ಘೋಷಣೆ ಮಾಡುವ ತನಕ ಶವ ಎತ್ತಲು ಬಿಡುವುದಿಲ್ಲ ಎಂದು ಕೊಲೆಯಾದವರ ಸಂಬಂಧಿಕರು ಪ್ರತಿಭಟನೆ ನಡೆಸಿದರು. ಸೂಕ್ತ ಸಮಯದಲ್ಲಿ ಹುಂಡಿ ತೆರೆಯಲು ಹಾಗೂ ದೇವಾಲಯಕ್ಕೆ ಭದ್ರತೆ ನೀಡಲು ನಿರ್ಲಕ್ಷ್ಯ ಮಾಡಿದ ದೇವಾಲಯದ ಅಧಿಕಾರಿ (ಕೇಸ್‌ ವರ್ಕರ್‌) ಅಮಾನತು ಮಾಡಬೇಕು ಎಂದು ಒತ್ತಾಯ ಮಾಡಿದರು. ನಂತರ ಜನರ ಮನವೊಲಿಸಲಾಯಿತು.

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ, ಶಾಸಕ ಎಂ.ಶ್ರೀನಿವಾಸ್‌, ದಕ್ಷಿಣ ವಲಯ ಪೊಲೀಸ್‌ ಮಹಾ ನಿರ್ದೇಶಕ ವಿಪುಲ್‌ ಕುಮಾರ್‌, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಭೇಟಿ ನೀಡಿ ಪರಿಶೀಲಿಸಿದರು. ಬೆರಳಚ್ಚು ಮಾಹಿತಿ ಸಂಗ್ರಹಿಸಿದರು.

ಸರಣಿ ಕಳ್ಳತನ: ಎಚ್ಚೆತ್ತುಕೊಳ್ಳದ ಅಧಿಕಾರಿಗಳು
ಕಳೆದ ಒಂದು ತಿಂಗಳಿಂದೀಚೆಗೆ ಜಿಲ್ಲೆಯ ವಿವಿಧೆಡೆ ಮೂರು ದೇವಾಲಯಗಳಲ್ಲಿ ಸರಣಿ ಕಳ್ಳತನವಾಗಿದೆ. ಸಾತನೂರು ಕಂಬದ ನರಸಿಂಹಸ್ವಾಮಿ ದೇವಾಲಯ, ಹೊಳಲು ತಾಂಡವೇಶ್ವರ ದೇವಾಲಯ ಹಾಗೂ ಮದ್ದೂರಿನ ದೇವಾಲಯವೊಂದರಲ್ಲಿ ಹುಂಡಿ ಕಳ್ಳತನವಾಗಿದೆ. ಈ ಕುರಿತು ಅರ್ಚಕರು, ದೇವಾಲಯ ಸಮಿತಿ ಸದಸ್ಯರು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆದರೂ ದೇವಾಲಯಗಳ ಭದ್ರತೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿತು.

‘ಸರಣಿ ಕಳ್ಳತನ ಪ್ರಕರಣಗಳ ಬಗ್ಗೆ ತಹಶೀಲ್ದಾರ್‌ ಗಮನಕ್ಕೆ ತರಲಾಗಿತ್ತು. ಆದರೆ ದೇವಾಲಯಗಳ ಭದ್ರತೆಗೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕ್ರಮ ಕೈಗೊಂಡಿದ್ದರೆ ಮೂವರ ಪ್ರಾಣ ಉಳಿಯುತ್ತಿತ್ತು’ ಎಂದು ಸಾತನೂರು ಕಂಬದ ನರಸಿಂಹಸ್ವಾಮಿ ದೇವಾಲಯ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಹೇಳಿದರು.

ಅರಕಪ್ಪ...ಎಲ್ಲಿದ್ಯಪ್ಪಾ!
‘ಆನಂದ ಯಾವಾಗಲೂ ಅರಕಪ್ಪ ಅರಕಪ್ಪ ಎಂದು ಕನವರಿಸುತ್ತಿದ್ದ. ಸದಾ ದೇವರ ಸೇವೆಯಲ್ಲಿ ತೊಡಗಿರುತ್ತಿದ್ದ. ಆದರೆ ಅರಕಪ್ಪ ಕೊಲೆಗಾರರನ್ನು ತಡೆಯಲಿಲ್ಲವೇ, ಅರಕಪ್ಪ ಎಲ್ಲಿದ್ಯಪ್ಪಾ’ ಎಂದು ಆನಂದ್‌ ಸಂಬಂಧಿಯೊಬ್ಬರು ರೋಧಿಸಿದರು.

‘ಅಪ್ಪ 15 ವರ್ಷದಿಂದ ಒಂದು ದಿನವೂ ದೇವಾಲಯಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ದೇವಾಲಯಕ್ಕಾಗಿ ಅಪ್ಪ ಪ್ರಾಣವನ್ನೇ ಕೊಟ್ಟಿದ್ದಾರೆ’ ಎಂದು ಪ್ರಕಾಶ್‌ ಮಗಳು, ಎಂ.ಕಾಂ ವಿದ್ಯಾರ್ಥಿನಿ ಪೂಜಾ ಕಣ್ಣೀರಿಟ್ಟರು.

'ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ. #BSYediyurappa #mandya https://t.co/h0xV2WN9yU

— ಪ್ರಜಾವಾಣಿ | Prajavani (@prajavani) September 11, 2020

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.